ಮಂಗಳೂರು: ಕೊನೆಯ ದಿನದಲ್ಲಿ ಅತ್ಯಂತ ರೋಚಕವಾಗಿ ನಡೆದ ಸ್ಪರ್ಧೆಯಲ್ಲಿ ತಮಿಳುನಾಡಿನ ಆಜೀಶ್ ಅಲಿ ವಿರುದ್ಧ ಜಯ ಗಳಿಸಿದ ಕರ್ನಾಟಕದ ರಮೇಶ್ ಬುಧಿಯಾಳ್ ಮೂರನೇ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.
ಇಲ್ಲಿನ ಪಣಂಬೂರು ಸಮುದ್ರ ಕಿನಾರೆಯಲ್ಲಿ ನಡೆದ ಚಾಂಪಿಯನ್‌ಷಿಪ್‌ನ ವನಿತೆಯರ ವಿಭಾಗದಲ್ಲಿ ಸುಗರ್ ಬನಾರ್ಸೆ ಹಾಗೂ ಸೋಫಿಯಾ ಶರ್ಮಾ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು. 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾರತೀಯ ಸರ್ಫಿಂಗ್ ಫೆಡರೇಷನ್ ನೆರವಿನಿಂದ ಮೂರು ದಿನಗಳ ಕಾಲ ಚಾಂಪಿಯನ್‌ಷಿಪ್ ನಡೆದಿತ್ತು.
ಟೂರ್ನಿಯ ನಂತರ ಮಾತನಾಡಿದ ಭಾರತೀಯ ಸರ್ಫಿಂಗ್ ಫೆಡರೇಷನ್‌ನ ಅಧ್ಯಕ್ಷ, ಅರುಣ್ ವಾಸು, “ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡ ಸರ್ಫರ್‌ಗಳ ಗುಣಮಟ್ಟ ನೋಡಿ ಪ್ರಭಾವಿತನಾದೆ. ಲಾಸ್‌ಏಂಜಲೀಸ್ ಒಲಿಂಪಿಕ್ಸ್ ಅನ್ನು ಗಮನದಲ್ಲಿಟ್ಟಕೊಂಡಿರುವ ನಮಗೆ ಇಲ್ಲಿಯ ಸರ್ಫರ್‌ಗಳ ಗುಣಮಟ್ಟ ನೋಡಿದಾಗ ಆತ್ಮವಿಶ್ವಾಸ ಹೆಚ್ಚಿದೆ. ಜಯ ಗಳಿಸಿದ ಹಾಗೂ ಪಾಲ್ಗೊಂಡ ಎಲ್ಲ ಸರ್ಫರ್‌ಗಳಿಗೂ ಅಭಿನಂದನೆಗಳು,” ಎಂದು ಹೇಳಿದರು.
ಪುರುಷರ ಸೆಮಿಫೈನಲ್‌ನಿಂದ ಆರಂಭಗೊಂಡ ಮೂರನೇ ದಿನದಲ್ಲಿ ಕರ್ನಾಟಕದ ರಮೇಶ್ ಬುದಿಯಾಳ್, ತಮಿಳುನಾಡಿನ ಅಜೀಶ್ ಅಲಿ, ಸತೀಶ್ ಸರವಣ ಮತ್ತು ರುಬಾನ್ ವಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ರಮೇಶ್ ಬುಧಿಯಾಳ್ 16.33 ಅಂಕಗಳನ್ನು ಗಳಿಸಿದರು. ರನ್ನರ್ ಅಪ್ ಅಜೀಶ್ 15.67 ಅಂಗಳನ್ನು ತಮ್ಮದಾಗಿಸಿಕೊಂಡರು. 13 ಅಂಕಗಳನ್ನು ಗಳಿಸಿದ ಸತೀಶ್ ಸರವಣನ್ ಮೂರನೇ ಸ್ಥಾನ ಗಳಿಸಿದರು.
ವನಿತೆಯರ ವಿಬಾಗದಲ್ಲಿ ಗೋವಾದ 16ರ ಹರೆಯದ ಸುಗರ್ ಬನಾರ್ಸೆ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ತಮಿಳುನಾಡಿನ ಹಾಲಿ ಚಾಂಪಿಯನ್ ಸೃಷ್ಠಿ ಸೆಲ್ವಂ ಈ ಬಾರಿ ರನ್ನರ್‌ಅಪ್‌ಗೆ ತೃಪ್ತಿಪಡಬೇಕಾಯಿತು. ಸುಗರ್ 14.50 ಅಂಕಗಳನ್ನು ಗಳಿಸಿದರೆ, ಸೃಷ್ಠಿ 13.40 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು. ಕರ್ನಾಟಕದ ಸಿಂಚನ ಗೌಡ 10.20 ಅಂಕಗಳೊಂದಿಗೆ ತೃತೀಯ ಸ್ಥಾನಿಯಾದರು.