Thursday, September 19, 2024

ಚಿನ್ನದೊಂದಿಗೆ ಶಾಂತಿಯ ಸಂದೇಶ ಸಾರಿದ ನೀರಜ್‌ ಚೋಪ್ರಾ

ನೀರಜ್‌ ಚೋಪ್ರಾ Neeaj Chopra ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ World Athletics Championship ಫೈನಲ್‌ನಲ್ಲಿ  88.17 ಮೀ, ದೂರಕ್ಕೆ ಜಾವೆಲಿನ್‌ ಎಸೆದು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಹಾಗೂ ಮೊದಲ ಏಷ್ಯನ್‌ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಐತಿಹಾಸಿಕ ಸಾಧನೆಯ ಜೊತೆಯಲ್ಲೇ ಭಾರತದ ಹೆಮ್ಮೆಯ ಪುತ್ರ ನೀರಜ್‌ ಜಗತ್ತಿಗೆ ಶಾಂತಿಯ ಸಂದೇಶವನ್ನೂ ಸಾರಿದರು. ಎರಡನೇ ಸ್ಥಾನಿಯಾದ ಪಾಕಿಸ್ತಾನದ ಸ್ಪರ್ಧಿ, ಅರ್ಶಾದ್‌ ನದೀಮ್‌ ಅವರಲ್ಲಿ ವಿಜಯೋತ್ಸವದ ವೇಳೆ ಪಾಕಿಸ್ತಾನ ಧ್ವಜ ಇರಲಿಲ್ಲ. ಆಗ ನೀರಜ್‌ ಪಾಕಿಸ್ತಾನದ ಸ್ಪರ್ಧಿಯನ್ನು ಕರೆದು ಭಾರತದ ಧ್ವಜದಡಿಯಲ್ಲಿ ಒಂದಾಗಿ ನಿಂತು ಫೋಟೊ ತೆಗೆಸಿಕೊಂಡರು. ಈ ಫೋಟೊ ಕ್ರೀಡಾ ಜಗತ್ತಿನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಎರಡು ದೇಶಗಳ ನಡುವೆ ಎಷ್ಟೇ ವೈರತ್ವ ಇರಲಿ. ಆದರೆ ಕ್ರೀಡೆ ಮಾತ್ರ ಆದೇಶಗಳನ್ನು ಒಂದಾಗಿಸಬಲ್ಲದು. ಅದು ಕ್ರಿಕೆಟ್‌ ಆಗಿರಲಿ ಅಥವಾ ಯಾವುದೇ ಕ್ರೀಡೆಯಾಗಿರಲಿ. ರಾಜಕೀಯ ದ್ವೇಷ ಮರೆತು ಕ್ರೀಡಾಪಟುಗಳು ಒಂದಾಗುತ್ತಾರೆ.

ನದೀಮ್‌ ಕೂಡ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಮೊದಲ ಪಾಕ್‌ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರ್ಶಾದ್‌ ಆ ನಂತರ ಪಾಕಿಸ್ತಾನದ ಧ್ವಜ ಹಿಡಿದು ಕಾಣಿಸಿಕೊಂಡರು. ಆದರೆ ಸ್ಪರ್ಧೆ ಮುಗಿದ ಕೂಡಲೇ ಪದಕ ಗೆದ್ದವರು ತಮ್ಮ ರಾಷ್ಟ್ರದ ಧ್ವಜ ಹಿಡಿದು ಸಂಭ್ರಮಿಸುವುದು ಸಹಜ. ಗೋಲ್ಡನ್‌ ಬಾಯ್‌ ನೀರಜ್‌ ಚೋಪ್ರಾ ಭಾರತದ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿದ್ದರು. ಆದರೆ ನದೀಮ್‌ ಅವರು ಬರಿಗೈಯಲ್ಲಿ ಇರುವುದನ್ನು ಕಂಡು ನೀರಜ್‌ ಹತ್ತಿರಕ್ಕೆ ಕರೆದು ಫೋಟೊ ತೆಗೆಸಿಕೊಂಡರು. ಈ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅರ್ಶಾದ್‌ ಯಾವುದೇ ಸೌಲಭ್ಯಗಳಿಲ್ಲದೆ ಅಭ್ಯಾಸ ಮಾಡಿ ಜಾಗತಿಕ ಮಟ್ಟದಲ್ಲಿ ಮಿಂಚಿದವರು.

ಕ್ರೀಡೆಗೆ ಯಾವ ರೀತಿಯ ಶಕ್ತಿ ಇದೆ ಎಂಬುದನ್ನು ಅರ್ಶಾದ್‌ ನದೀಮ್‌ ಫೈನಲ್‌ಗೆ ಒಂದು ದಿನ ಮುಂಚಿತವಾಗಿ ನೀರಜ್‌ ಚೋಪ್ರಾಗೆ ಕಳುಹಿಸಿದ ಸಂದೇಶದಿಂದ ತಿಳಿಯುಬಹುದು, “ನೀರಜ್‌ ಭಾಯಿ, ನೀವು ಕೂಡ ಚೆನ್ನಾಗಿ ಮಾಡಿ, ನಾನು ಕೂಡ ಚೆನ್ನಾಗಿ ಮಾಡುವೆ, ನಿಮ್ಮ ಹೆಸರು ಜಗತ್ತಿಗೇ ಗೊತ್ತಿದೆ. ನಿಮ್ಮಂತೆಯೇ ನನ್ನ ಹೆಸರು ಕೂಡ ಜಗತ್ತಿಗೆ ತಿಳಿಯಲಿ,” ಎಂದು ಸಂದೇಶ ಕಳುಹಿಸಿದ್ದರು. ಅವರ ಈ ಸಂದೇಶವೇ ನೀರಜ್‌ ಚೋಪ್ರಾ ಅವರಿಗೆ ಜೊತೆಯಲ್ಲಿ ಫೋಟೊ ತೆಗೆದುಕೊಳ್ಳಲು ಪ್ರೇರೇಪಿಸಿತು.

Related Articles