ಶೂಟಿಂಗ್ ಚಿನ್ನದ ಗುರಿ ಹಿಂದೆ ರನ್ನದ ಗುರು ಶರಣೇಂದ್ರ
ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ 15 ವರ್ಷ ಬಾಲಕ ಜೊನಾಥನ್ ಆಂಥೊನಿ ಇಬ್ಬರು ಒಲಿಂಪಿಯನ್ನರನ್ನು ಸೋಲಿಸಿ ಮೊದಲ ಬಾರಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ಈ ಸಾಧಕನ ಯಶಸ್ಸಿಗೆ ಕಾರಣರಾದ ಗುರು ಯಾರೆಂದು ಹುಡುಕಿದಾಗ ಸಿಕ್ಕಿದ್ದು ಚಿಕ್ಕಬಳ್ಳಾಪುರದ ಕೋರೇನಹಳ್ಳಿಯ ಪೆರುಸಂದ್ರ ಪಂಚಾಯಿತಿ ಮೂಲದ, ರಾಷ್ಟ್ರೀಯ ಮಾಜಿ ಚಾಂಪಿಯನ್ ಶರಣೇಂದ್ರ ಕೆ.ವೈ. ಸದ್ಯ ಬೆಂಗಳೂರಿನಲ್ಲಿ ತರಬೇತಿ ನೀಡುತ್ತಿರುವ ಶರಣೇಂದ್ರ ಅವರ ಯಶಸ್ಸಿನ ಹಾದಿಯನ್ನೊಮ್ಮೆ ನೋಡಿದಾಗಿ ನಿಜವಾಗಿಯೂ ಅಚ್ಚರಿಯಾಗುತ್ತದೆ, ಅಲ್ಲೊಂದು ಧನ್ಯತಾ ಭಾವ ಮೂಡುತ್ತದೆ.
Next Target Los Angeles Olympics says Sharp Shooting Guru Hawk Eye Rifle and Shooting Academy coach Sharanendra K Y.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಯಾಮಣ್ಣ ಹಾಗೂ ಗಾಯತ್ರಮ್ಮ ಅವರ ಮಗ ಶರಣೇಂದ್ರ ಹಳ್ಳಿ ತೊರೆದು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ ತಲುಪಿದ್ದು ಶೇಷಾದ್ರಿಪರುಂ ಕಾಲೇಜು. ಅಲ್ಲಿ ಟ್ಯಾಕ್ಸೇಷನ್ ಮತ್ತು ಅಕೌಂಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸುವಾಗ ಶರಣೇಂದ್ರ ಅವರ ಶೂಟಿಂಗ್ ಕ್ರೀಡೆಗೆ ಬೆಂಬಲ ನೀಡಿದವರು ಕಾಲೇಜಿನ ದೈಹಿಕ ಶಿಕ್ಷಕರಾದ ಚಿಕ್ಕರಂಗಸ್ವಾಮಿ. ಶರಣೇಂದ್ರ NCC ಯಲ್ಲಿದ್ದ ಕಾರಣ ಶೂಟಿಂಗ್ ಬಗ್ಗೆ ಆಸಕ್ತಿ ಬೆಳೆಯಿತು. ಆಗ ಪೊಲೀಸ್ ಇಲಾಖೆಯಲ್ಲಿದ್ದ ಆನಂದ್ ಎಸ್‌ಕೆ ಯಲಹಂಕದಲ್ಲಿ ರೆಯಾನ್ ಸ್ಪೋರ್ಟ್ಸ್ ಅಕಡೆಮಿ ಎಂಬ ಶೂಟಿಂಗ್ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ಇದರಿಂದಾಗಿ ಶರಣೇಂದ್ರ ಅವರಿಗೆ ಈ ಅಕಾಡೆಮಿಯಲ್ಲಿ ಶೂಟಿಂಗ್ ತರಬೇತಿಗೆ ಆವಕಾಶ ಸಿಕ್ಕಿತು.
2013ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಶರಣೇಂದ್ರ ಅವರಿಗೆ ಚಿನ್ನದ ಪದಕ. ಸತತ ನಾಲ್ಕು ವರ್ಷ ಚಿನ್ನದ ಪದಕ ಹಾಗೂ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡು ಕರ್ನಾಟಕದ ಭವಿಷ್ಯದ ಶೂಟರ್ ಎಂಬುದನ್ನು ಸಾಬೀತುಪಡಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಶೂಟಿಂಗ್ ಸಾಧನೆಯಿಂದ ದೊರೆತ ವಿದ್ಯಾರ್ಥಿ ವೇತನದಲ್ಲಿಯೇ ಉನ್ನತ ವ್ಯಾಸಂಗವನ್ನೂ ಮುಗಿಸಲು ಸಾಧ್ಯವಾಯಿತು. ಪಟಿಯಾಲದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನನಿಲಯದ ಶೂಟಿಂಗ್‌ನಲ್ಲೂ ಶರಣೇಂದ್ರ ಅವರಿಗೆ ನಾಲ್ಕನೇ ರಾಂಕ್ ಕೂಡ ಲಭಿಸಿತು.
ರಾಜ್ಯದ ಉತ್ತಮ ಶೂಟರ್: 2015ರಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಕಾಲಿಟ್ಟ ಶರಣೇಂದ್ರ ಅವರು ಮೊದಲ ಯತ್ನದಲ್ಲಿಯೇ ಚಿನ್ನದ ಪದಕ ಗೆದ್ದರು. ಪ್ರಿ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿ ಗೆದ್ದರು. ರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾದರು.
2019ರಲ್ಲಿ ಶೂಟಿಂಗ್‌ನಲ್ಲಿ ಎರಡು ಹೊಸ ಪ್ರಕಾರಗಳು ಜಾರಿಗೆ ಬಂತು. ಸೆಂಟರ್ ಫಯರ್ ಹಾಗೂ ಸ್ಟ್ಯಾಂಡರ್ಡ್ ಪಿಸ್ತೂಲ್. ಸೆಂಟರ್ ಫಯರ್ (.32) ಗಾತ್ರದಲ್ಲಿ ದೊಡ್ಡದು. ಸ್ಟ್ಯಾಂಡರ್ಡ್ (.22) ಇದು ಸಾಮಾನ್ಯ ಬಳಕೆಗೆ. ಪೊಲೀಸರು ಬಳಸುತ್ತಿರುವುದು ಇದೇ ಮಾದರಿ. ರಾಜ್ಯ ಶೂಟಿಂಗ್ ಅಸೋಸಿಯೇಷನ್‌ನ ಸದಸ್ಯರಾದವರಿಗೆ ಮಾತ್ರ ಈ ಪಿಸ್ತೂಲ್‌ಗಳನ್ನ ಬಳಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಶರಣೇಂದ್ರ ಅವರು ಈ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದಿರುವುದು ವಿಶೇಷ.
2019ರಲ್ಲಿ ಕೇರಳದ ಮುಟ್ಟಂನಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್‌ನಲ್ಲಿ ಸೆಂಟ್ರಲ್ ಫಯರ್ ವಿಭಾಗದಲ್ಲಿ ಕಂಚು ಹಾಗೂ ಸ್ಟ್ಯಾಂಡರ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು.
ಹಾಕ್ ಐ ಅಕಾಡೆಮಿ ಸ್ಥಾಪನೆ: ಶೂಟಿಂಗ್‌ನಲ್ಲಿ ಉತ್ತಮ ತರಬೇತಿ ಪಡೆದು ಪದಕಗಳನ್ನು ಗೆದ್ದ ಶರಣೇಂದ್ರ ತನ್ನಲ್ಲಿರುವ ಜ್ಞಾನವನ್ನು ಯುವಕರಿಗೆ ನೀಡಲು ಮತ್ತು ರಾಜ್ಯದಲ್ಲಿ ಶೂಟಿಂಗ್ ಕ್ರೀಡೆಯನ್ನು ಮತ್ತಷ್ಟು ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಾಕ್ ಐ ರೈಫಲ್ & ಪಿಸ್ತೂಲ್ ಶೂಟಿಂಗ್ ಅಕಾಡೆಮಿ (HAWK EYE Rifle and Pistol Shooting Academy) ಯನ್ನು ಸ್ಥಾಪಿಸಿದರು. 14 ಮಕ್ಕಳಿಂದ ಆರಂಭಗೊಂಡ ಈ ಅಕಾಡೆಮಿಯಲ್ಲಿ ರಾಜ್ಯದ 94ಕ್ಕೂ ಹೆಚ್ಚು ಶೂಟರ್‌ಗಳು ತರಬೇತಿ ಪಡೆಯುತ್ತಿದ್ದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. 34 ಅನುಭವಿ ಶೂಟರ್‌ಗಳು ಅಖಿಲ ಭಾರತ ಮಟ್ಟದ ತರಬೇತಿ ಶಿಬಿರ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ 94 ಶೂಟರ್‌ಗಳು ರಾಜ್ಯದ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2021 ರಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ ನಿಯಮದಡಿ ನಡೆದ ಸ್ಪರ್ಧೆಯಲ್ಲಿ ಹಾಕ್ ಐ ಶೂಟರ್‌ಗಳು ಸಮಗ್ರ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. 2022ರಲ್ಲಿ ರಾಷ್ಟ್ರೀಯ ನಿಯಮದಡಿ ನಡೆದ ಚಾಂಪಿಯನ್‌ಷಿಪ್‌ನಲ್ಲೂ ಹಾಕ್ ಐ ಶೂಟರ್‌ಗಳು ಸಮಗ್ರ ಚಾಂಪಿಯನ್ ಪಟ್ಟ ಗೆದ್ದಿರುತ್ತಾರೆ. ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ನಡೆಸುವ ಸ್ಪರ್ಧೆಗಳಲ್ಲೂ ಹಾಕ್ ಐ ಶೂಟರ್‌ಗಳು ಪ್ರಭುತ್ವ ಸಾಧಿಸಿದ್ದಾರೆ.
ಐತಿಹಾಸಿಕ ಸಾಧನೆ ಮಾಡಿದ ಶೂಟರ್‌ಗಳು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಹಾಕ್ ಐ ಅಕಾಡೆಮಿಯ ಜೊನಾಥನ್ ಅಂಥೋನಿ ರಾಜ್ಯವನ್ನು ಪ್ರತಿನಿಧಿಸಿ ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಕ್ಕೆ ಚಿನ್ನದ ಪದಕ ತಂದಿದ್ದಾರೆ. ಪ್ಯಾರಿಸ್ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಪದಕ ಗೆದ್ದಿರುವ ಶೂಟರ್‌ಗಳನ್ನು ಸೋಲಿಸಿದ 15 ರ ಹರೆಯದ ಜೊನಾಥನ್ ಅವರನ್ನು ಉತ್ತಮ ಶೂಟರ್ ಆಗಿ ರೂಪಿಸುವಲ್ಲಿ ಕೋಚ್ ಶರಣೇಂದ್ರ ಅವರ ಶ್ರಮ ಗಮನಾರ್ಹ.
2024ರಲ್ಲಿ ದೇಶದ ಅತ್ಯಂತ ಕಿರಿಯ ಶೂಟರ್ ತಿಲೋತ್ತಮ ಸೇನ್ 2022ರ ವಿಶ್ವ ಜೂನಿಯರ್ ಚಾಂಪಿಯನ್‌ಷಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಬೆಳ್ಳಿ ಗೆದ್ದಿರುವ ತಂಡ ವಿಭಾಗದಲ್ಲೂ ತಿಲೋತ್ತಮ ಸೇನ್ ಅವರ ಸಾಧನೆ ಅದ್ಭುತವಾಗಿತ್ತು. 2023 ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ತಿಲೋತ್ತಮ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿರುತ್ತಾರೆ. 2023ರಲ್ಲಿ ಕೈರೋದಲ್ಲಿ ನಡೆದ ವಿಶ್ವಕಪ್‌ನಲ್ಲೂ ತಿಲೋತ್ತಮ ಬೆಳ್ಳಿ ಪದಕ ಗೆದ್ದಿರುತ್ತಾರೆ. ಒಲಿಂಪಿಕ್ಸ್ ಕೋಟಾಕ್ಕೆ ಅರ್ಹತೆ ಪಡೆದ ದೇಶದ ಅತ್ಯಂತ ಕಿರಿಯ ಶೂಟರ್ ಎಂಬ ಹೆಗ್ಗಳಿಕೆಗೆ ತಿಲೋತ್ತಮ ಪಾತ್ರರಾಗುತ್ತಿದ್ದರು. ಆದರೆ 0.01 ಅಂಕಗಳ ಅಂತರದಲ್ಲಿ ಅವಕಾಶದಿಂದ ವಂಚಿತರಾದರು.
ಯುವ ಶೂಟರ್ ಗಾಂಭೀರ್ಯ ಗೌಡ ಪೆರುವಿನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅನುಷ್ಕಾ ಎಚ್. ಠಾಕೂರ್ ಕೂಡ ಭರವೆಯ ಶೂಟರ್ ಎನಿಸಿದ್ದಾರೆ., ಜೊನಾಥನ್, ಅವಂತಿಕ ಮಧು, ರಿಶಿಕಾ ಸಿಂಗ್, ಧ್ವನಿಕ್ ವಿಜಯ ಕುಮಾರ್, ಸಾದ್ವಿ ಆನಂದ್ ಹಾಗೂ ಪ್ರಣವಿ ವಜ್ಜಾ ಸೇರಿದಂತೆ ಅನೇಕ ಯುವ ಶೂಟರ್‌ಗಳು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಇದೇ ತಿಂಗಳ 20 ರಿಂದ 28 ರವರೆಗೆ ದೆಹಲಿಯ ಕರ್ನಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯಲಿರುವ ಭಾರತ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಶರಣೇಂದ್ರ ಅವರಲ್ಲಿ ತರಬೇತಿ ಪಡೆದ ಅನೇಕ ಶೂಟರ್‌ಗಳು ಪಾಲ್ಗೊಳ್ಳುತ್ತಿದ್ದಾರೆ.
2028ರ ಲಾಸ್‌ಏಂಜಲೀಸ್ ಒಲಿಂಪಿಕ್ಸ್ ಟಾರ್ಗೆಟ್: ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿ 2028ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಭಾರತ ತಂಡದಲ್ಲಿ ಕರ್ನಾಟಕ ಕನಿಷ್ಠ ನಾಲ್ವರು ಶೂಟರ್‌ಗಳು ಸ್ಥಾನ ಪಡೆದು ಪದಕ ಗೆಲ್ಲುತ್ತಾರೆಂಬ ಆತ್ಮವಿಶ್ವಾಸವಿದೆ ಎನ್ನುತ್ತಾರೆ ಶರಣೇಂದ್ರ. “ಶೂಟಿಂಗ್‌ನಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲೇ ನಂ 1 ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯ ಶೂಟಿಂಗ್ ಸಂಸ್ಥೆಯ ಕಾರ್ಯದರ್ಶಿ ಸುಶೀಲ್ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಜೊನಾಥನ್, ಗಾಂಭೀರ್ಯ, ತಿಲೋತ್ತಮ ಹಾಗೂ ಅನುಷ್ಕಾ ಪದಕ ಗೆಲ್ಲುತ್ತಾರೆಂಬ ಆತ್ಮವಿಶ್ವಾಸವಿದೆ. ಅದಕ್ಕೆ ಪೂರಕವಾದ ತರಬೇತಿಯನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ಒಂದು ಉತ್ತಮ ಶೂಟಿಂಗ್ ರೇಂಜ್‌ನ ಅಗತ್ಯವಿದೆ. ಸರಕಾರ ಈ ನಿಟ್ಟಿನಲ್ಲಿ ಗಮನಿಸಬೇಕಿದೆ,” ಎಂದು ಶರಣೇಂದ್ರ ಅವರು ಹೇಳಿದ್ದಾರೆ.