ಒಂದೇ ಕಾಲಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೆ ಬ್ರಹ್ಮಾವರದ ನಿಹಾದ್
ಉಡುಪಿ: ಎರಡು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಬ್ರಹ್ಮಾವರ ತಾಲೂಕಿನ ಹೊನ್ನಾಳದ ನಿಹಾದ್ ಮೊಹಮ್ಮದ್ ಇದೇ ತಿಂಗಳ 25ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದು ಅವರಿಗೆ ಆರ್ಥಿಕ ನೆರವಿನ ಅಗತ್ಯವಿದೆ. Nihad Mohammad of Honnala Udupi will play Word Snooker Championship for Disabled at Thailand.
ಅಂಡಿಗಳಿಗೆ ಬಟ್ಟೆ ಮಾರಾಟ ಮಾಡುವ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದ ನಿಹಾದ್‌ಗೆ 2022ರ ಮಳೆಗಾಲ ಬದುಕಿನ ಅನ್ನವನ್ನೇ ಕಸಿದುಕೊಳ್ಳುತ್ತದೆ ಎಂದು ಗೊತ್ತೇ ಇರಲಿಲ್ಲ. ಕೋಟೇಶ್ವರ ಫ್ಲೈ ಓವರ್‌ನಲ್ಲಿ ಸಾಗುತ್ತಿರುವಾಗ ಸ್ಕೂಟರ್ ಸ್ಕಿಡ್ ಆಗಿ ಕಾಲು ಡಿವೈಡರ್‌ಗೆ ಬಡಿಯಿತು. ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲಿದೆ ಎನ್ನುವಾಗಲೇ ಕಾಲಿನಲ್ಲಿ ನಂಜು ಆವರಿಸಿ ಕಾಲನ್ನೇ ಕತ್ತರಿಸಬೇಕಾದ ಸ್ಥಿತಿ ನಿರ್ಮಣವಾಯಿತು. ಆ ಮೂಲಕ ಬಡವರ ಮನೆಗೆ ಆಘಾತ ಬಂದು ಅಪ್ಪಳಿಸಿದಂತಾಯಿತು.
ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುವ ಹೊನ್ನಾಳದ ಇಕ್ಬಾಲ್ ಹಾಗೂ ಇರ್ಷಾದ್ ಬೇಗಂ ಅವರ ಪುತ್ರ ನಿಹಾದ್ ಮೊಹಮ್ಮದ್ ಸ್ನೂಕರ್‌ನಲ್ಲಿ ತೊಡಗಿಸಿಕೊಂಡಿದ್ದು ಅಚ್ಚರಿ. ಅಪಘಾತಕ್ಕೂ ಮುನ್ನ ಮಕ್ಕಳು ಆಡುವ ಪೂಲ್‌ಗಳಲ್ಲಿ ಟೈಂ ಪಾಸ್‌ಗಾಗಿ ಆಡುತ್ತಿದ್ದರು. ನಂತರ ಮಣಿಪಾಲದಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ಆಡುತ್ತಿರಲಿಲ್ಲ. ಆದರೆ ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಬೆಂಗಳೂರಿನಲ್ಲಿನ ನಡೆದ ಪ್ಯಾರಾ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡ ನಿಹಾದ್ ಅಲ್ಲಿ ಕಂಚಿನ ಪದಕ ಗೆಲ್ಲುತ್ತಾರೆ. ಅವರಿಗೆ ಅಂತಾರಾಷ್ಟ್ರೀಯ ಪ್ಯಾರಾ ಬಿಲಿಯರ್ಡ್ಸ್ ತಾರೆ ಲೋಕೇಶ್ ಅವರು ಸ್ಪರ್ಧೆಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ನಿಹಾದ್ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ಮೊದಲ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 12 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ.
ನೆರವಾದ ಮಣಿಪಾಲದ ಆಶ್ಲೇಷ್ ಶೆಣೈ: ನಿಹಾದ್ ಅವರು ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮಣಿಪಾಲದ ಆಶ್ಲೇಷ್ ಹೊಟೇಲ್‌ನ ಮಾಲೀಕ ಆಶ್ಲೇಷ್ ಶೆಣೈ ಅವರು ನಿಹಾದ್ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ತಮ್ಮಿಂದಾದ ಸಹಾಯ ಮಾಡಿದ್ದಾರೆ.
ಊರವರ ಪ್ರೋತ್ಸಾಹ: ನಿಹಾದ್ ಅವರು ಪ್ಯಾರಾ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಎಲ್ಲಿರಿಗೂ ಖುಷಿಯಾದರೆ ಅವರ ಹೆತ್ತವರಿಗೆ ಖುಷಿಯ ಜೊತೆಗೆ ಬೇಸರವೂ ಆಯಿತು. ಏಕೆಂದರೆ ಅವರ ಪ್ರಯಾಣದ ವೆಚ್ಚ ಭರಿಸಲು ಹಣವಿಲ್ಲ ಎಂಬ ಚಿಂತೆ. ಆದರೆ ಹೊನ್ನಾಳ ಊರಿನವರು ನಿಹಾದ್ ಅವರಿಗೆ ನೆರವಾಗಿದ್ದಾರೆ. ಎಲ್ಲರೂ ತಮ್ಮ ಕೈಯಿಂದ ನೆರವು ನೀಡಿದ್ದಾರೆ. ಇದರಿಂದಾಗಿ ಗುರುವಾರ ಸಂಜೆ ಬೆಂಗಳೂರಿಗೆ ಹೊರಟ ನಿಹಾದ್ ಶುಕ್ರವಾರ ರಾತ್ರಿ ಬ್ಯಾಂಕಾಕ್‌ಗೆ ಪ್ರಯಾಣಿಸಲಿದ್ದಾರೆ.
Please Subscribe Our Sports Channel
ವಾಹನ ನೀಡಿದರೆ ಮತ್ತೆ ದುಡಿಯುವೆ: ವಿಶ್ವ ಚಾಂಪಿಯನ್‌ಷಿಪ್‌ಗೆ ಹೊರಡುವುದಕ್ಕೆ ಮುನ್ನ www.sportsmail.net ಜೊತೆ ಮಾತನಾಡಿದ ನಿಹಾದ್, “ನನಗೆ ಊರಿನವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಆಶ್ಲೇಷ್ ಶೆಣೈ ಅವರು ಕೂಡ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಬದುಕು ಮೂಲೆಗುಂಪಾಗಿದೆ. ಬದುಕಿಗಾಗಿ ಮತ್ತೆ ದುಡಿಯಬೇಕು. ನನಗೊಂದು ವಿದ್ಯುತ್‌ಚಾಲಿತ ವಾಹನದ ಅಗತ್ಯವಿದೆ. ಅದನ್ನು ಯಾವುದಾದರೂ ಸಂಸ್ಥೆಯವರು, ದಾನಿಗಳು ನೀಡಿದರೆ ಮತ್ತೆ ಬಟ್ಟೆ ಮಾರುವ ಕೆಲಸ ಆರಂಭಿಸುವೆ. ಕ್ರೀಡೆಯಲ್ಲಿಯೂ ತೊಡಗಿ ಮುಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುವೆ,” ಎಂದರು.
ನಿಹಾದ್‌ಗೆ ನೆರವು ನೀಡುವವರು (+91) 7022061978 ದೂರವಾಣಿ ಸಂಖ್ಯೆಗೆ ಗೂಗಲ್ ಪೇ ಮಾಡಬಹುದು.