ಮಾಯಗಾನದ ಮಾಯಗಾರ ನಿತೀಶ್ ಕ್ರಿಕೆಟ್‌ನ ಹೊಸ ಅವತಾರ
ಬೆಂಗಳೂರು: ರಾಮನಗರ ಜಿಲ್ಲೆಯ, ರಾಮನಗರ ತಾಲೂಕಿನ ಮಾಯಗಾನ ಹಳ್ಳಿಯ ನಿತೀಶ್ ಆರ್ಯಾ U14 ಕ್ರಿಕೆಟ್‌ನಲ್ಲಿ ಮೊನ್ನೆ ತ್ರಿಶತಕ, ಬಳಿಕ ದ್ವಿಶತಕ ಮತ್ತೆ ನಿರಂತರ ಶತಕ… ಹೀಗೆ ನಾಲ್ಕು ದ್ವಿಶತಕ ಸೇರಿ 15 ಶತಕ ದಾಖಲಿಸಿ ಒಟ್ಟು U14 ಕ್ರಿಕೆಟ್‌ನಲ್ಲಿ 3600 ಕ್ಕೂ ಹೆಚ್ಚು ರನ್ ಗಳಿಸಿರುವ ಈ ಹಳ್ಳಿ ಹುಡುಗ ಕ್ರಿಕೆಟ್‌ನ ಹೊಸ ಜಾದೂಗಾರ, ಮಾಯಗಾನ ಹಳ್ಳಿಯ ಮಾಯಗಾರ ಅಂದರೆ ಅತಿಶಯೋಕ್ತಿಯಾಗಲಾರದು. ನೋಡಿ ಬರೆಯುತ್ತಿರುವಾಗಲೇ ಪಾಂಡಿಚೇರಿ ವಿರುದ್ಧ 157 ರನ್ ದಾಖಲಿಸಿಯಾಯಿತು. Nitish Arya This boy from Mayagana Village Ramanagara District of Karnataka hits 15 century he is just Under 14 years.
ಬ್ರಾಂಡೆಡ್ ಮಕ್ಕಳೆಲ್ಲ ಸಾಧನೆ ಮಾಡ್ತಾರೆ ಎಂಬುದು ಬರೇ ಸುಳ್ಳು. ಕಳೆದ 12 ವರ್ಷಗಳಿಂದ ದಿನವೂ ಮಾಯಗಾನ ಹಳ್ಳಿಯಿಂದ ಬೆಂಗಳೂರಿಗೆ ಬಂದು ಕ್ರಿಕೆಟ್ ಕಲಿತು ಮತ್ತೆ ಮನೆ ಸೇರುವ ನಿತೀಶ್ ಆರ್ಯಾನ ಬದುಕಿನಲ್ಲಿ ಅವರ ತಂದೆ ಲೋಕೇಶ್ ಅವರು ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ. ರಾಜ್ಯ ಕಂಡ ಉತ್ತಮ ಟೆನಿಸ್ ಬಾಲ್ ಆಟಗಾರ. ಆದರೆ ಅವರ ಕ್ರಿಕೆಟ್ ಬದುಕು ಟೆನಿಸ್ ಬಾಲ್‌ಗೇ ಸೀತಿಗೊಂಡಿತು. ಉತ್ತಮ ಆಲ್ರೌಂಡರ್ ಆಗಿದ್ದ ಲೋಕೇಶ್ ಬಡತನದ ಕಾರಣ ಕ್ರಿಕೆಟ್‌ಗೆ ವಿದಾಯ ಹೇಳಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆದರೆ ತಮ್ಮ ಮಗ ನಿತೀಶ್ ಆರ್ಯಾನನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡಬೇಕೆಂದು ನಿತ್ಯವೂ 100 ಕಿ.ಮೀ ಪ್ರಯಾಣಿಸುತ್ತಾರೆ, ಮಗನ ಕ್ರಿಕೆಟ್ ಬದುಕಿಗಾಗಿ ತಮ್ಮ ಬದುಕನ್ನು ತ್ಯಾಗ ಮಾಡುತ್ತಿದ್ದಾರೆ.
ನಿತೀಶ್ ಕೂಡ ಅಪ್ಪನ ತ್ಯಾಗಕ್ಕೆ ಪೂರಕವಾಗಿ ಶಿಸ್ತಿನ ಬದುಕಿನ ಜೊತೆಯಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ನಿತೀಶ್ ಆರ್ಯಾಗೆ 14 ವರ್ಷ ತುಂಬಿಲ್ಲ, ಆಗಲೇ ಹಿರಿಯರ ಲೀಗ್‌ನಲ್ಲಿ ಆಡಿ ಶತಕ ಸಿಡಿಸಿದ್ದಾನೆ. ಮೈಸೂರು ಮೊದಲ ಡಿವಿಜನ್ ಲೀಗ್‌ನಲ್ಲಿ ನಿತೀಶ್ ಆರ್ಯಾ ಗಳಿಸಿ 179 ರನ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.
ಮಾಯಗಾನ ಹಳ್ಳಿಯ ಲೋಕೇಶ್ ಹಾಗೂ ಮಂಜುಳಾದೇವಿ ದಂಪತಿಯ ಮಗನಾಗಿರುವ ನಿತೀಶ್ ಆರ್ಯಾ ಎರಡೂವರೆ ವರ್ಷದಿಂದಲೇ ಕ್ರಿಕೆಟ್ ಆಟವನ್ನು ನೆಚ್ಚಿಕೊಂಡವ. ಅದಿನಿಂದ ಇಂದಿನವರೆಗೂ ಬೆಂಗಳೂರಿನಿಂದ ರಾಮನಗರಕ್ಕೆ ನಿತ್ಯವೂ ಪ್ರಯಾಣಿಸುತ್ತಿರುವ ನಿತೀಶ್ ಆರ್ಯಾ ಜೂನಿಯರ್ ಕ್ರಿಕೆಟ್‌ನಲ್ಲಿ ಮೂಡಿಸಿದ ಹೆಜ್ಜೆಗಳು ರಾಜ್ಯ ಕ್ರಿಕೆಟ್ ವಲಯದಲ್ಲಿ ಹೊಸ ಭರವಸೆಯ ಹೆಜ್ಜೆಗಳೆಂಬುದಕ್ಕೆ ಆತ ಗಳಿಸಿರುವ ರನ್‌ಗಳೇ ಸಾಕ್ಷಿ.ನಿತೀಶ್ ಆರ್ಯನದ್ದು ಶಿಸ್ತಿನ ಬದುಕು, ರಾತ್ರಿ 8:30ಕ್ಕೆ ಮಲಗಿ ಬೆಳಿಗ್ಗೆ 5 ಗಂಟೆಗೆ ಏಳುವ ನಿತೀಶ್ ಟಿವಿ ನೋಡೊಲ್ಲ, ಕ್ರಿಕೆಟ್ ಪಂದ್ಯಗಳನ್ನು ನೋಡೊಲ್ಲ… ಮೊಬೈಲ್ ನೋಡುವ ಅಭ್ಯಾಸವಿಲ್ಲ.
ನಿತ್ಯವೂ 500 ಎಸೆತಗಳನ್ನೆದುರಿಸುವ ನಿತೀಶ್: ಕರ್ನಾಟಕದ ಖ್ಯಾತ ಕ್ಯುರೇಟರ್ ನಾರಾಯಣ ರಾಜು ಅವರ ಬಿವೈಸಿಎ ಕ್ರಿಕೆಟ್ ಅಕಾಡೆಮಿ ಮೂಲಕ ತರಬೇತಿ ಆರಂಭಿಸಿದ ನಿತೀಶ್ ಆರ್ಯಾ ನಂತರ ಬ್ರಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್, ಎಸ್‌ಸಿಸಿ, ರಾಜಾಜಿನಗರ ಕ್ರಿಕೆಟರ್ಸ್ ಮೊದಲಾದ ಕ್ಲಬ್‌ಗಳಲ್ಲಿ ಪಳಗಿ ಈಗ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾನೆ. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಆಲ್ರೌಂಡರ್ ಆಗಿ 15 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ಲೋಕೇಶ್ ಅವರು ಮಗನ ಕ್ರಿಕೆಟ್ ಯಶಸ್ಸಿಗೆ ನಿತ್ಯವೂ 500 ಎಸೆತಗಳನ್ನು ಅಭ್ಯಾಸದಲ್ಲಿ ಎಸೆಯುತ್ತಾರೆ. ಅವರಿಗೆ ಮಾಯಗಾನ ಹಳ್ಳಿಯಲ್ಲಿ ಹೇಮಂತ್ ಕೂಡ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಕೊರೋನಾಗಿಂತ ಮೊದಲೇ ಅಂದರೆ 10 ವರ್ಷದಲ್ಲೇ ನಿತೀಶ್ ಆರ್ಯಾ U14 ತಂಡದಲ್ಲಿ ಆಡುತ್ತಿದ್ದರು. ಆಗಲೇ 400 ರನ್ ಗಳಿಸಿ ಗಮನ ಸೆಳೆದಿದ್ದರು. ಕ್ಲಬ್ ಕೋಚ್ ಯೋಗೇಶ್ ಕೂಡ ಈ ಪುಟ್ಟ ಹುಡುಗನನ್ನು ಉತ್ತಮ ಕ್ರಿಕೆಟ್ ಪಟುವಿನ ಹೆಜ್ಜೆ ತೋರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕ್ರೀಡಾಬದುಕಿನಲ್ಲಿ ಅನೇಕ ಹೆತ್ತವರು ತಮ್ಮ ಬದುಕಿನಲ್ಲಿ ಸಾಧಿಸಲು ಆಗದಿರುವುದನ್ನು ತಮ್ಮ ಮಕ್ಕಳಲ್ಲಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಡುತ್ತಾರೆ. ನಿತೀಶ್ ಆರ್ಯಾ ಎಂಬ ಹಳ್ಳಿಯ ಪ್ರತಿಭೆಯನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಲು ಶ್ರಮಿಸುತ್ತಿರುವ ಮಾಯಗಾನ ಹಳ್ಳಿಯ, ಕೃಷಿ ಕುಟುಂಬದ ಲೋಕೇಶ್ ಅವರಿಗೆ ಯಶಸ್ಸು ಸಿಗಲಿ. ನಿತೀಶ್ ಆರ್ಯಾ ಮುಂದಿನ ವಯೋಮಿತಿಯ ಕ್ರಿಕೆಟ್‌ನಲ್ಲೂ ಯಶಸ್ಸು ಕಾಣಲಿ, ಭಾರತದ ಜೆರ್ಸಿ ತೊಟ್ಟು ಕ್ರಿಕೆಟ್ ಅಂಗಣಕ್ಕಿಳಿಯಲಿ ಎಂಬುದೇ ಹಾರೈಕೆ.