Monday, September 16, 2024

Archana Kamath ಉನ್ನತ ಶಿಕ್ಷಣಕ್ಕಾಗಿ ಟೇಬಲ್‌ ಟೆನಿಸ್‌ ತೊರೆದ ಒಲಿಂಪಿಯನ್‌ ಅರ್ಚನಾ ಕಾಮತ್‌

Sportsmail Desk:  ಓದಿನ ನಡುವೆಯೂ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಿಂಚಿದ ಕರ್ನಾಟಕದ ಒಲಿಂಪಿಯನ್‌ ಅರ್ಚನಾ ಕಾಮತ್‌ Archana Kamath ಈಗ ಉನ್ನತ ವ್ಯಾಸಂಗಕ್ಕಾಗಿ ತಾವು ಚಿಕ್ಕಂದಿನಿಂದ ಆಡಿಕೊಂಡು ಬಂದಿದ್ದ ಕ್ರೀಡೆಗೆ ವಿದಾಯ ಹೇಳಿದ್ದಾರೆ.  Olympian Archana Kamath left Table Tennis to pursue academic studies in full time.

ಈಗಾಗಲೇ ಅರ್ಚನಾ ಕಾಮತ್‌ ಅಮೆರಿಕಕ್ಕೆ ತೆರಳಿರುವುದನ್ನು ಅವರ ಹೆತ್ತವರು ಖಚಿತಪಡಿಸಿದ್ದಾರೆ. 9ನೇ ವಯಸ್ಸಿನಲ್ಲಿ ಟೇಬಲ್‌ ಟೆನಿಸ್‌ ಕ್ರೀಡೆಯಲ್ಲಿ ತೊಡಗಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಅರ್ಚನಾ ಕಾಮತ್‌ ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪ್ರದರ್ಶನ ತೋರಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡುತ್ತ ಓದಿನಲ್ಲೂ ಚಾಂಪಿಯನ್‌ ಎನಿಸಿರುವ ಅರ್ಚನಾ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿ. ಇಲ್ಲಿ ಉದ್ಯೋಗಿಯೂ ಆಗಿದ್ದಾರೆ. ಐಒಸಿಎಲ್‌ ಅರ್ಚನಾ ಅವರಿಗೆ ಇದುವರೆಗೂ ಎಲ್ಲ ರೀತಿಯ ನೆರವನ್ನು ನೀಡಿರುವುದನ್ನು ಅರ್ಚನಾ ಅವರ ತಂದೆ ಡಾ. ಗಿರೀಶ್‌ ಕಾಮತ್‌ ಗುರುಪುರ ಅವರ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

“ಅರ್ಚನಾ ಟೇಬಲ್‌ ಟೆನಿಸ್‌ನಲ್ಲಿ ಯಾವ ರೀತಿಯ ಚಾಂಪಿಯನ್‌ ಪಟ್ಟಕ್ಕೇರಿದ್ದಾಳೋ ಅದೇ ರೀತಿ ಓದಿನಲ್ಲೂ ಚಾಂಪಿಯನ್‌, ಅರ್ಥಶಾಸ್ತ್ರದಲ್ಲಿ ಪದವಿ ಗಳಿಸಿರುವ ಅರ್ಚನಾ, International Relations, Strategies and Securities ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದಾಳೆ. ಈಗ ಅಮೆರಿಕದಲ್ಲಿ Public Policy ಬಗ್ಗೆ ಮಾಸ್ಟರ್ಸ್ ಅಧ್ಯಯನ ಮಾಡಲಿದ್ದಾಳೆ. 15 ವರ್ಷಗಳ ಕಾಲ ಟೇಬಲ್‌ ಟೆನಿಸ್‌ ಆಟವಾಡಿ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು, ಉತ್ತಮ ಪ್ರದರ್ಶನ ತೋರಿ ಈಗ ಉನ್ನತ ಅಧ್ಯಯನದಲ್ಲಿ ತೊಡಗುವ ಗುರಿ ಹೊಂದಿದ್ದಾಳೆ. ಇದು ಅತ್ಯಂತ ಕಠಿಣ ತೀರ್ಮಾನವಿರಬಹುದು, ಆದರೆ ಕ್ರೀಡೆ ಆಕೆಗೆ ಎಲ್ಲವನ್ನೂ ನೀಡಿದೆ. Olympic Gold Quest, ರಾಜ್ಯ ಮತ್ತು ಕೇಂದ್ರ ಸರಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ, TOPS, TTFI ಉತ್ತಮ ರೀತಿಯ ಪ್ರೋತ್ಸಾಹ ನೀಡಿದೆ. ಕಳೆದ 7 ವರ್ಷಗಳಿಂದ ಅರ್ಚನಾಗೆ IOCL ಉತ್ತಮ ವೇತನವಿರುವ ಉದ್ಯೋಗ ನೀಡಿ ಎಲ್ಲ ರೀತಿಯ ಪ್ರೋತ್ಸಾಹ ಒಗಿಸಿದೆ. ಇವರೆಲ್ಲರಿಗೂ ನಮ್ಮ ಕುಟುಂಬ ಚಿರಋಣಿಯಾಗಿದೆ,” ಎಂದು ಡಾ. ಗಿರೀಶ್‌ ಕಾಮತ್‌ ಹಾಗೂ ಅನುರಾಧಾ ಕಾಮತ್‌ ತಿಳಿಸಿದ್ದಾರೆ.

“ಅರ್ಚನಾ ಪಾಲಿಗೆ ಟೇಬಲ್‌ ಟೆನಿಸ್‌ ಹಾಗೂ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಆಕೆ ಟೇಬಲ್‌ ಟೆನಿಸ್‌ ಕ್ರೀಡೆಯನ್ನು ಎಷ್ಟು ಪ್ರೀತಿಸುತ್ತಾಳೋ ಅಷ್ಟೇ ಕಾಳಜಿ ಮತ್ತು ಪ್ರೀತಿ ಶಿಕ್ಷಣದ ಬಗ್ಗೆ ಇದೆ, 2020ರಲ್ಲೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದ ಅರ್ಚನಾಗೆ ಅದು ಸಾಧ್ಯವಾಗಿರಲಿಲ್ಲ. ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾಳೆ. ಈಗ ಶಿಕ್ಷಣಕ್ಕೆ ಪೂರ್ಣ ಅವಧಿಯನ್ನು ನೀಡಲು ತೀರ್ಮಾನಿಸಿದ್ದಾಳೆ. ಇದೊಂದು ಕಠಿಣ ತೀರ್ಮಾನ ಕೂಡ. ಅರ್ಚನಾಗೆ ಕೋಚ್‌ ಅನ್ಷುಲ್‌ ಗರ್ಗ್‌, ಜೈ ಸನನ್‌, ಮನಃಶಾಸ್ತ್ರಜ್ಞರಾದ ಶಂತನು ಕುಲಕರ್ಣಿ ಹಾಗೂ ಇತರರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಹಿಂದಿನ ತರಬೇತುದಾರರಾದ ಸಗ್ಯರಾಜ್‌ ಹಾಗೂ ಬೊನಾ ಥಾಮಸ್‌ ಅವರ ಕೊಡುಗೆಯೂ ಅಪಾರ, ಅಮೆರಿಕಕ್ಕೆ ತೆರಳುವ ಮುನ್ನ ಇವರೆಲ್ಲರನ್ನೂ ಅರ್ಚನಾ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾಳೆ,” ಎಂದು ಕಾಮತ್‌ ದಂಪತಿ ತಿಳಿಸಿದ್ದಾರೆ.

Related Articles