Sunday, September 8, 2024

ಒಲಿಂಪಿಯನ್‌ ಸತೀಶ್‌ ರೈ ಈಗಲೂ ಚಾಂಪಿಯನ್‌

ಕರ್ನಾಟಕದ ವೇಟ್‌ಲಿಫ್ಟರ್‌, ಒಲಿಂಪಿಯನ್‌ ಪುತ್ತೂರಿನ ಸತೀಶ್‌ ರೈ ಎಲ್ಲಿ ಹೋದರು?, ಈಗ ಅವರೇನು ಮಾಡುತ್ತಿದ್ದಾರೆ? ಎಂದು ಯೋಚಿಸಿ ಅವರನ್ನು ಸಂಪರ್ಕಿಸಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಬ್ಯಾಂಕ್‌ ಉದ್ಯೋಗದಲ್ಲಿದ್ದರೂ ನಿತ್ಯವೂ ಕ್ರೀಡಾಪಟುಗಳ ಬದುಕಿಗಾಗಿ ಶ್ರಮಿಸುತ್ತಿರುವ ಸತೀಶ್‌ ರೈ ವೇಟ್‌ಲಿಫ್ಟಿಂಗ್‌ ಅಭಿವೃದ್ಧಿಗಾಗಿ ಮತ್ತು ಬಡ ಮಕ್ಕಳ ಶಿಕ್ಷಣಕ್ಕಾಗಿ ಅಪಾರ ಕನಸುಗಳನ್ನು ಕಟ್ಟಿಕೊಂಡು ಆ ನೆಲೆಯಲ್ಲಿ ಶ್ರಮಿಸುತ್ತಿದ್ದಾರೆ. Olympian Sathish Rai one who helping the sports persons and students

ವೇಟ್‌ಲಿಫ್ಟಿಂಗ್‌ನಲ್ಲಿ 14 ಬಾರಿ ಚಾಂಪಿಯನ್‌ ಪಟ್ಟ ಗೆದ್ದು ದಾಖಲೆ ಬರೆದು, ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಸಾಧನೆ ಮಾಡಿ, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು, ಅರ್ಜುನ, ಏಕಲವ್ಯ ಮತ್ತು ದಸರಾ ಪ್ರಶಸ್ತಿಯನ್ನು ಗಳಿಸಿರು ಚಾಂಪಿಯನ್‌ ವೇಟ್‌ಲಿಫ್ಟರ್‌ನನ್ನು ನಾವು ಬೇಗನೇ ಮರೆತೆವು. ಸತೀಶ್‌ ರೈ ಈಗ ಕೋಲ್ಕೊತಾದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌‌ ಇಂಡಿಯಾದಲ್ಲಿ (Union Bank of India)AGM ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ವೇಟ್‌ಲಿಫ್ಟಿಂಗ್‌ ತಂಡದ ಕೋಚ್‌ ವಿಜಯ ಶರ್ಮಾ ಅವರು ಈಗ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರರು. ಆದರೆ ಅವರ ಯಶಸ್ಸಿನ ಹಿಂದೆ ಸತೀಶ್‌ ರೈ ಅವರ ಶ್ರಮ ಇದೆ ಎಂಬುದನ್ನು ಮರೆಯುವಂತಿಲ್ಲ. ಶರ್ಮಾ ಅವರು ಬೆಂಗಳೂರಿನಲ್ಲಿದ್ದಾಗ ಅವರನ್ನು ತಮ್ಮ ರೂಮಿನಲ್ಲೇ ಇರಿಸಿಕೊಂಡು ಉತ್ತಮ ರೀತಿಯಲ್ಲಿ ತರಬೇತಿ ನೀಡಿದ್ದು ಸತೀಶ್‌ ರೈ. “ವಿಜಯ್‌ ಶರ್ಮಾ ಅವರ ಸಾಧನೆಯ ಬಗ್ಗೆ ಖುಷಿ ಇದೆ. ಬದುಕಿನ ಹಾದಿಯಲ್ಲಿ ಕ್ರೀಡೆ ಹಲವಾರು ಸಿಹಿ ನೆನಪುಗಳನ್ನು ಉಳಿಸುವಂತೆ ಮಾಡಿದೆ,” ಎನ್ನುತ್ತಾರೆ ಸತೀಶ್‌ ರೈ.

ಇಂದಿನಂತರಿಲಲ್ಲ ಕ್ರೀಡಾ ವ್ಯವಸ್ಥೆ: “ಈಗ ಕ್ರೀಡಾಪಟುಗಳಿಗೆ ಸಿಗುತ್ತಿರುವ ತರಬೇತಿ ಮತ್ತು ಸೌಲಭ್ಯಗಳು ಎರಡು ದಶಕಗಳ ಹಿಂದೆ ಇದ್ದಿರಲಿಲ್ಲ. ತರಬೇತಿಗೆ ಸಿಗುತ್ತಿರುವ ಸಲಕರಣೆಗಳು, ಆಹಾರ, ತರಬೇತಿಯ ಕ್ರಮ ಅಷ್ಟು ಸುಧಾರಣೆಯಾಗಿರಲಿಲ್ಲ. ಈಗ ಕ್ರೀಡಾಪಟುಗಳು ತರಬೇತಿಯ ವೇಳೆ ಹೊರಗಿನ ಆಹಾರವನ್ನು ತಿನ್ನುವಂತಿಲ್ಲ. ಈಗ ತರಬೇತಿಗೆ ಆಹಾರ ತಜ್ಞರು (ನ್ಯೂಟ್ರಿಷನಿಸ್ಟ್‌) ಇದ್ದಾರೆ. ಅವರು ಸೂಚಿಸಿದ ಆಹಾರವನ್ನೇ ಸೇವಿಸಬೇಕಾಗಿತ್ತು. ಎರಡು ದಶಕಗಳ ಹಿಂದೆ ಹೀಗಿರಲಿಲ್ಲ,” ಎಂದು ಸತೀಶ್‌ ರೈ ಹೇಳಿದ್ದಾರೆ.

ಕ್ರೀಡೆ, ವಿದ್ಯಾಭ್ಯಾಸಕ್ಕೆ ನೆರವು: ಸತೀಶ್‌ ರೈ ಅವರ ಕ್ರೀಡಾ ಬದುಕು ಸಂಕಷ್ಟಗಳಿಂದಲೇ ಕೂಡಿತ್ತು. ಒಬ್ಬ ಚಾಂಪಿಯನ್‌ ಎನಿಸಿಕೊಳ್ಳಬೇಕಾದರೆ ಎಷ್ಟು ಕಷ್ಟಗಳು ಎದುರಾಗುತ್ತದೆ ಎಂಬುದು ಸತೀಶ್‌ ರೈ ಅವರಿಗೆ ಚೆನ್ನಾಗಿ ಗೊತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬಂದ ಕ್ರೀಡಾಪಟುಗಳು ಯಾವ ರೀತಿಯಲ್ಲಿ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ಸ್ವತಃ ಸತೀಶ್‌ ರೈ ಅವರೇ ಅನುಭವಿಸಿದ್ದಾರೆ. ಈ ಕಾರಣಕ್ಕಾಗಿ ಅವರು ಪ್ರತಿ ವರ್ಷ ನಾಲ್ಕು ಕ್ರೀಡಾಪಟುಗಳಿಗೆ ವಿವಿಧ ರೂಪದಲ್ಲಿ ಪುತ್ತೂರು ಬಂಟರ ಸಂಘದ ಮೂಲಕ ನೆರವನ್ನು ನೀಡುತ್ತಿದ್ದಾರೆ. ಬೆಂಗಳೂರು ಯುವ ಬಂಟರ ಸಂಘದ ಮೂಲಕ ನಾಲ್ವರು ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ.

ನಿವೃತ್ತಿಯ ನಂತರ ತರಬೇತಿ: ಸತೀಶ್‌ ರೈ ನಿವೃತ್ತಿಯ ನಂತರ ಮತ್ತೆ ಕ್ರೀಡೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಮತ್ತಷ್ಟು ವೇಟ್‌ಲಿಫ್ಟರ್‌ಗಳನ್ನು ದೇಶಕ್ಕೆ ನೀಡುವ ಗುರಿ ಹೊಂದಿದ್ದಾರೆ. “ನಿವೃತ್ತಿಯ ನಂತರ ವೇಟ್‌ಲಿಫ್ಟಿಂಗ್‌ ಅಕಾಡೆಮಿ ಸ್ಥಾಪಿಸುವ ಯೋಚನೆ ಇದೆ. ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇಟ್‌ಲಿಫ್ಟರ್‌ಗಳು ಪ್ರತಿನಿಧಿಸುವಂತಾಗಬೇಕು. ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಕೇವಲ ಒಬ್ಬ ಲಿಫ್ಟರ್‌ ಮಾತ್ರ ಅರ್ಹತೆ ಪಡೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸ್ಪರ್ಧಿಸುವವರು ಹಾಗೂ ಪದಕ ಗೆಲ್ಲುವವರ ಸಂಖ್ಯೆ ಹೆಚ್ಚಾದಾಗ ಮಾತ್ರ ಅದನ್ನು ಅಭಿವೃದ್ಧಿ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಕ್ರೀಡಾ ಸಂಸ್ಥೆಗಳಲ್ಲೂ ಸಂಬಂಧಪಟ್ಟ ಕ್ರೀಡೆಯ ಬಗ್ಗೆ ಅನುಭವ ಇರುವವರು ಜವಾಬ್ದಾರಿಯುತ ಹುದ್ದೆಯಲ್ಲಿದ್ದರೆ ಕ್ರೀಡೆ ಅಭಿವೃದ್ಧಿಯಾಗುತ್ತದೆ,” ಎಂದು ಅರ್ಜುನ ಪ್ರಶಸ್ತಿ ವಿಜೇತ ರೈ ಹೇಳಿದರು.

ಖೇಲೋ ಇಂಡಿಯಾ ಉತ್ತಮ ಯೋಜನೆ: ಕೇಂದ್ರ ಸರಕಾರ ಕ್ರೀಡಾ ಅಭಿವೃದ್ಧಿಗಾಗಿ ಖೇಲೋ ಇಂಡಿಯಾ ಯೋಜನೆಯ ಮೂಲಕ ಉತ್ತಮ ಯೋಜನೆಗಳನ್ನು ರೂಪಿಸಿದೆ. ಇದು ಪ್ರಾಥಮಿಕ ಹಂತದಲ್ಲೇ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಯೋಜನೆಯಾಗಿದೆ. ಇಲ್ಲಿ ನಗದು ಬಹುಮಾನವನ್ನೂ ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ,” ಎಂದು ರೈ ಅವರು ಹೇಳಿದ್ದಾರೆ.

Related Articles