Thursday, March 28, 2024

ಮಣ್ಣಿನ ಮಗನಿಗೆ ಚಿನ್ನದ ಪದಕ

ಕುವೈತ್ ಸಿಟಿ:

 ಉತ್ತಮ ಲಯದಲ್ಲಿರುವ ಭಾರತದ 16ರ ತರುಣ ಸೌರಭ್ ಚೌಧರಿ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಚೌಧರಿ ಕಳೆದ ಕೆಲವು ತಿಂಗಳುಗಳಲ್ಲಿ ವೈಯಕ್ತಿಕ ನಾಲ್ಕನೇ ಚಿನ್ನದ ಪದಕ ಸಾಧನೆ ಮಾಡಿದರು.

ಇಲ್ಲಿ ನಡೆಯುತ್ತಿರುವ ಕಿರಿಯರ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ರೈತನ  ಮಗ ಸೌರಭ್ 239.8 ಅಂಕಗಳೊಂದಿಗೆ ವೈಯಕ್ತಿಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಜತೆಗೆ, ಸೌರಭ್ ಚೌಧರಿ, ಅರ್ಜುನ್ ಸಿಂಗ್ ಚೀಮಾ ಹಾಗೂ ಅನ್ಮೊಲ್ ಜೈನ್ ಅವರನ್ನೊಳಗೊಂಡ ತಂಡ 1731 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿತು.
ಸೌರಭ್ ಚೌಧರಿ ಅವರು ಕಳೆದ ಆಗ ಆಗಸ್ಟ್ ನಲ್ಲಿ  ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡು ಸಾಧನೆ ಮಾಡಿದ್ದರು. ಬಳಿಕ ಸೆಪ್ಟಂಬರ್‌ನಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್ ಹಾಗೂ ಅರ್ಜೆಂಟೀನಾದಲ್ಲಿ ನಡೆದ ಯೂತ್ ಒಲಿಂಪಿಕ್ಸ್  ನಲ್ಲಿ ತಲಾ ಒಂದೊಂದು ಚಿನ್ನದ ಪದಕ ಸಾಧನೆ ಮಾಡಿದ್ದರು. ಇದೀಗ, ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಕಳೆದ ಆಗಸ್ಟ್ ನಿಂದ ಒಟ್ಟು ನಾಲ್ಕು ಚಿನ್ನದ ಪದಕ ಸಾಧನೆ ಮಾಡಿದ ಕೀರ್ತಿಗೆ ಭಾಜನರಾದರು.
ವೈಯಕ್ತಿಕ ವಿಭಾಗದಲ್ಲಿ ಭಾರತದ ಅರ್ಜುನ್(237.7) ಬೆಳ್ಳಿ ಪದಕ ಹಾಗೂ ಚೈನೀಸ್ ತಪೈನ ಹ್ಯೂಂಗ್ ವೇ ಟಿ(218.0) ಅವರು ಕಂಚಿನ ಪದಕಕ್ಕೆ ತೃಪ್ತರಾದರು. ಅನ್ಮೊಲ್ 195.1 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತರಾದರು.

Related Articles