Thursday, March 28, 2024

ಕಬಡ್ಡಿಗೆ ವಿದಾಯ ಹೇಳಿದ ಕ್ಯಾಪ್ಟನ್ ಕೂಲ್ ಅನೂಪ್

ಸ್ಪೋರ್ಟ್ಸ್ ಮೇಲ್ ವರದಿ

ತನ್ನ ತಾಳ್ಮೆಯ ಆಟದಿಂದ, ಕಬಡ್ಡಿ ಅಭಿಮಾನಿಗಳ ಮನ ಗೆದ್ದು, ಕಳೆದ 15 ವರ್ಷಗಳಿಂದ ಭಾರತದ ಗ್ರಾಮೀಣ ಕ್ರೀಡೆಗೆ ಅಂತಾರಾಷ್ಟ್ರೀಯ ಮೆರುಗನ್ನು ನೀಡಿದ ಕ್ಯಾಪ್ಟನ್ ಕೂಲ್ ಖ್ಯಾತಿಯ ಅನೂಪ್ ಕುಮಾರ್ ಬುಧವಾರ ಕಬಡ್ಡಿಗೆ ವಿದಾಯ ಹೇಳಿದ್ದಾರೆ.

2006ರಲ್ಲಿ ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕಬಡ್ಡಿಗೆ ಕಾಲಿಟ್ಟ ಅನೂಪ್ ಕುಮಾರ್, 2010 ಹಾಗೂ 2014ರಲ್ಲಿ ಭಾರತ ತಂಡ ಏಷ್ಯನ್ ಗೇಮ್ಸ್ ಕಬಡ್ಡಿ ಚಾಂಪಿಯನ್ ಪಟ್ಟ ಗೆದ್ದಾಗ ತಂಡದ ಸದಸ್ಯರಾಗಿದ್ದರು. ಆ ನಂತರ ಅನೂಪ್ ಅವರ ನಾಯಕತ್ವದಲ್ಲಿ ಭಾರತ ಎರಡು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿತ್ತು. ಕಬಡ್ಡಿ ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸಿ ಭಾರತಕ್ಕೆ ಚಿನ್ನದ ಪದಕ ತಂದಿದ್ದರು. ಅದೇ ರೀತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟ ಗೆದ್ದಿದ್ದರು.
‘ಆರಂಭದಲ್ಲಿ ಕಬಡ್ಡಿ ಆಟವನ್ನು ಬದುಕಿನ ಹವ್ಯಾಸವಾಗಿ ಆಡಿದೆ. ನಂತರ ಅದು ನನ್ನ ಬದುಕಿನ ಭಾಗವಾಗಿ ಬದಲಾಯಿತು. ಕಬಡ್ಡಿ ನನ್ನ ಉಸಿರಾಯಿತು. ವೃತ್ತಿಪರ ಕಬಡ್ಡಿ ಆಟಗಾರನಾಗಿ ಅಂಗಣಕ್ಕಿಳಿದ ದಿನದಿಂದ ಭಾರತಕ್ಕಾಗಿ ಚಿನ್ನದ ಪದಕ ಗೆಲ್ಲಬೇಕೆಂಬುದು ನನ್ನ ಗುರಿಯಾಗಿತ್ತು. ಆ ಸಾಧನೆ ಮಾಡಲು ಸಾಧ್ಯವಾಯಿತು. ಪ್ರೊ ಕಬಡ್ಡಿ ಲೀಗ್ ಮೂಲಕ ಕಬಡ್ಡಿ ಇಂದು ಜಗತ್ತಿನ ಜನಪ್ರೀಯ ಕ್ರೀಡೆಯಾಗಿ ರೂಪುಗೊಂಡಿದೆ. ಈ ಆಟದಾ ಭಾಗವಾಗಿರುವುದು ನನ್ನ ಅದೃಷ್ಟ.ಇಂದಿನ ದಿನ ನನ್ನ ಬದುಕಿನಲ್ಲಿ ಅತ್ಯಂತ ಅವಿಸ್ಮರಣೀಯವಾದುದು, ಏಕೆಂದರೆ ಇಂದು ನನ್ನ ಮಗನ 10ನೇ ಹುಟ್ಟಹಬ್ಬ,ನಿವೃತ್ತಿಯ ನಂತರವೂ ಈ ಕ್ರೀಡೆಯ ಭಾಗವಾಗಿ ಮುಂದುವರಿಯುವೆ,‘ ಎಂದು ಅನೂಪ್ ನಿವೃತ್ತಿ ಘೋಷಿಸಿದ ನಂತರ ನುಡಿದರು.

Related Articles