Thursday, December 26, 2024

ಬುಲ್ಸ್ ಹಾಗೂ ಪೈರೇಟ್ಸ್ ಸಮಬಲದ ಹೋರಾಟ

ಸ್ಪೋರ್ಟ್ಸ್ ಮೇಲ್ ವರದಿ

ಪ್ರೊ ಕಬಡ್ಡಿ ಲೀಗ್‌ನಲ್ಲಿ  ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು 40-40 ಅಂಕಗಳಿಂದ ಸಮಬಲ ಸಾಧಿಸಿವೆ. ಕೊನೆಯ 20 ಸೆಕೆಂಡುಗಳಲ್ಲಿ ಮೂರು ಅಂಕಗಳನ್ನು ಗಳಿಸಿ ಅಚ್ಚರಿ ಮೂಡಿಸಿದ ಪಾಟ್ನಾ ಪೈರೇಟ್ಸ್ ತಂಡ ಬೆಂಗಳೂರು ಬುಲ್ಸ್ ವಿರುದ್ಧ ಸೋಲುವ ಪಂದ್ಯದಲ್ಲಿ ಡ್ರಾ ಸಾಧಿಸಿತು.

ಕೊನೆಯ ಕ್ಷಣದಲ್ಲಿ ಎರಡು ಟ್ಯಾಕಲ್ ಹಾಗೂ ಒಂದು ರೇಡ್ ಅಂಕ ಗಳಿಸಿದ ವಿಕಾಸ್ ಜಗ್ಲಾನ್ ಪೈರೇಟ್ಸ್ ತಂಡದ ಹೀರೋ ಎನಿಸಿದರು. ಪ್ರದೀಪ್ ನರ್ವಾಲ್ ಎಂದಿನಂತೆ ಉತ್ತಮ ರೈಡಿಂಗ್ ಪ್ರದರ್ಶಿಸಿ 17 ಅಂಕಗಳನ್ನು ಗಳಿಸಿದರು. ಬೆಂಗಳೂರು ಬುಲ್ಸ್ ಪರ ರೋಹಿತ್ ಕುಮಾರ್ 16 ಅಂಕಗಳನ್ನು ಗಳಿಸಿದರೆ, ಮಹೇಂದರ್ ಡಿಫೆನ್ಸ್‌ನಲ್ಲಿ 5 ಅಂಕಗಳನ್ನು ತಮ್ಮದಾಗಿಸಿಕೊಂಡರು. ಪಾಟ್ನಾ ಪೈರೇಟ್ಸ್ ತಂಡ ಇನ್ನೂ ಪ್ಲೇ ಆಫ್  ಹೋರಾಟದಲ್ಲೇ ಇದ್ದು, ಬೆಂಗಳೂರು ಈಗಾಗಲೇ ಆ ಹಂತವನ್ನು ತಲುಪಿದೆ.
ಆರಂಭದಲ್ಲೇ 2-2ರ ಸಮಬಲ ಕಂಡಿದ್ದ ಇತ್ತಂಡಗಳು, ಕೊನೆಯಲ್ಲಿ 40-40ರಲ್ಲಿ ಸಮಬಲಗೊಂಡಿದ್ದು ವಿಶೇಷ. ಪ್ರಥಮಾರ್ಧದಲ್ಲಿ  ಬೆಂಗಳೂರು 20-21ರಲ್ಲಿ ಸಮಬಲಗೊಂಡಿತು.
ಎರಡನೇ ಅವಧಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡ ದಿಟ್ಟ ಹೋರಾಟ ನೀಡಿತು.  24ನೇ ನಿಮಿಷದಲ್ಲಿ 21-21ರಲ್ಲಿ ಪಂದ್ಯ ಸಮಬಲಗೊಂಡಿತು. ನಾಲ್ಕು ನಿಮಿಷಗಳಲ್ಲಿ ಪೈರೇಟ್ಸ್ 10 ಅಂಕ ಗಳಿಸಿ ಬುಲ್ಸ್‌ನ ಮುನ್ನಡೆಗೆ ತಡೆಯೊಡ್ಡಿತು.  26ನೇ ನಿಮಿಷದಲ್ಲಿ  ಪ್ರದೀಪ್ ನರ್ವಾಲ್ ಸೂಪರ್ ರೈಡ್ ಮೂಲಕ 26-22 ಅಂತರದಲ್ಲಿ ಪೈರೇಟ್ಸ್‌ಗೆ ಮುನ್ನಡೆ ಕಲ್ಪಿಸಿದರು
ಆದರೆ ರೋಹಿತ್ ಕುಮಾರ್ ರೈಡಿಂಗ್ ಮೂಲಕ ಅಂಕಗಳ ಯಶಸ್ಸು ಕಾಣುತ್ತಿದ್ದಂತೆ ಬೆಂಗಳೂರು ದಿಟ್ಟ ತಿರುಗೇಟು ನೀಡಿತು ಪಂದ್ಯ 25-27ರಲ್ಲಿ ಮುನ್ನಡೆಯಿತು. ರೋಹಿತ್ ಕುಮಾರ್ ಸೂಪರ್ ರೈಡ್ ಮೂಲಕ ಯಶಸ್ಸು ಕಾಣುವುದರೊಂದಿಗೆ  ಬೆಂಗಳೂರು 32-30 ಅಂತರದಲ್ಲಿ ಮತ್ತೆ ಮುನ್ನಡೆ ಕಂಡಿತು.  ಪಂದ್ಯ ಮುಗಿಯಲು ಮೂರು ನಿಮಿಷ ಬಾಕಿ ಇರುವಾಗ ಬೆಂಗಳೂರು 37-36ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು,  39ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಪ್ರದೀಪ್ ನರ್ವಾಲ್ ಅವರನ್ನು ಬೆಂಚ್‌ಗೆ ಕಳುಹಿಸಿತು.  ವಿಕಾಸ್ ಜಗ್ಲಾನ್ ಅವರರು ಕೊನೆಯ ಕ್ಷಣದಲ್ಲಿ ಗಳಿಸಿದ ರೈಡ್ ಹಾಗೂ ಬೋನಸ್ ಪಾಯಿಂಟ್ ಪಾಟ್ನ ಪೈರೇಟ್ಸ್ ತಂಡಕ್ಕೆ ಸಮಬಲ ಸಾಧಿಸುವ ಅವಕಾಶ ಕಲ್ಪಿಸಿತು.

Related Articles