ಪುಣೆ,: ಏಕಮುಖವಾಗಿ ಸಾಗಿದ ಹಣಾಹಣಿಯಲ್ಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ ದಿಲರ್ ಡೆಲ್ಲಿ ತಂಡ, ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‍ನ್ಯಾಷನಲ್ ಕಬಡ್ಡಿ ಟೂರ್ನಿಯಲ್ಲಿನ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್‍ಗೆ ಹೀನಾಯ ಸೋಲುಣಿಸಿ ಶುಭಾರಂಭ ಮಾಡಿದೆ.
ಇಲ್ಲಿನ ಬಾಳೆವಾಡಿಯಲ್ಲಿರುವ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಐಐಪಿಕೆಎಲ್ ಟೂರ್ನಿಯ ಪ್ರಥಮ ಚರಣದ 3ನೇ ಲೀಗ್ ಪಂದ್ಯದಲ್ಲಿ ಮಿಂಚಿನ ಆಟವಾಡಿದ ದಿಲರ್ ಡೆಲ್ಲಿ ತಂಡ ಚಾಲೆಂಜರ್ಸ್ ಎದುರು 52-30 ಅಂಕಗಳ ಭರ್ಜರಿ ಜಯ ದಾಖಲಿಸಿತು.
ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಎದುರು ಇತ್ತಂಡಗಳು ಬಹಳ ಎಚ್ಚರಿಕೆಯ ಆರಂಭ ಮಾಡಿದವು. ಪಂದ್ಯದ ಮೊದಲ ಕ್ವಾರ್ಟರ್‍ನಲ್ಲಿ ಎರಡೂ ತಂಡದ ಆಟಗಾರರು ರಕ್ಷಣಾತ್ಮಕ ತಂತ್ರದೊಂದಿಗೆ ನಿಧಾನವಾಗಿ ಅಂಕ ಹೆಕ್ಕಿದರು. ಆದರೆ, ಮೊದಲ ಕ್ವಾರ್ಟರ್‍ನ ಅಂತ್ಯದ ಹೊತ್ತಿಗೆ ಚುರುಕಾದ ಡೆಲ್ಲಿ ಪಡೆ ಅತ್ಯುತ್ತಮ ದಾಳಿಗಳ ನೆರವಿನಿಂದ ಮುನ್ನಡೆ ಪಡೆದು 10-6 ಅಂಕಗಳಿಂದ ಕೊಂಚ ಮೇಲುಗೈ ಪಡೆಯಿತು.
ಪ್ರಥಮ ಕ್ವಾರ್ಟರ್‍ನಲ್ಲಿ ಸಿಕ್ಕ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ದಿಲರ್ ತಂಡ, ಎರಡನೇ ಕ್ವಾರ್ಟರ್‍ನಲ್ಲಿ ಚಾಲೆಂಜರ್ಸ್ ಪಡೆಯನ್ನು ಧೂಳೀಪಟ ಮಾಡಿಬಿಟ್ಟಿತು. ಭರ್ಜರಿ ರೇಡ್‍ಗಳ ಮೂಲಕ ಎದುರಾಳಿ ತಂಡವನ್ನು ಆಲ್‍ಔಟ್ ಮಾಡಿದ ಡೆಲ್ಲಿ, ಎರಡನೇ ಕ್ವಾರ್ಟರ್ ಒಂದರಲ್ಲೇ ಬರೋಬ್ಬರಿ 21 ಅಂಕಗಳನ್ನು ಗಳಿಸಿ ಅಬ್ಬರಿಸಿತು. ಡೆಲ್ಲಿ ಅಬ್ಬರದ ಎದುರು ಕಂಗಾಲಾಗಿದ್ದ ಚೆನ್ನೈ ತಂಡ ಈ ಕ್ವಾರ್ಟರ್‍ನಲ್ಲಿ ಕೇವಲ ಮೂರು ಅಂಕ ಮಾತ್ರವೇ ಗಳಿಸಲು ಶಕ್ತವಾಯಿತು.
ಮೂರನೇ ಕ್ವಾರ್ಟರ್ ಹೊತ್ತಿಗಾಗಲೇ 31-09 ಅಂಕಗಳಿಂದ ಭಾರಿ ಮುನ್ನಡೆ ಗಳಿಸಿದ್ದ ಡೆಲ್ಲಿ ತಂಡ ಮುನ್ನಡೆ ಕಾಯ್ದುಕೊಳ್ಳಲು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಸೋತರೂ ಹೀನಾಯವಾಗಿ ಸೋಲುವುದಂತೂ ಬೇಡೆ, ಸೋಲಿನ ಅಂತರವನ್ನಾದರೂ ತಗ್ಗಿಸಿಕೊಳ್ಳುವ ಪ್ರಯತ್ನ ನಡೆಸಿದ ಚೆನ್ನೈ ತಂಡ ಮೂರನೇ ಕ್ವಾರ್ಟರ್‍ನಲ್ಲಿ 9-9ರ ಸಮಬಲ ಸಾಧಿಸಿತು. ಆದರೂ ಡೆಲ್ಲಿ ತಂಡದ ಮುನ್ನಡೆ 40-18ಕ್ಕೆ ಏರಿದ್ದರಿಂದ ಪಂದ್ಯ ಬಹುತೇಕ ಕೈಜಾರಿ ಹೋಗಿರುವುದರ ಚಿಂತೆ ಚೆನ್ನೈ ಆಟಗಾರರಲ್ಲಿ ಮನೆ ಮಾಡಿತ್ತು.
ಇನ್ನು ಪಂದ್ಯದ ನಾಲ್ಕನೇ ಕ್ವಾರ್ಟರ್ ಹೆಚ್ಚೇನೂ ಬದಲಾವಣೆ ಕಾಣಲಿಲ್ಲ. ಡೆಲ್ಲಿ ತಂಡ ತನ್ನ ಖಾತೆಗೆ ಅಂಕಗಳನ್ನು ಜೋಡಿಸುತ್ತಾ ಹೋದರೆ, ಸೋಲಿನ ಅಂತರವನ್ನು ತಗ್ಗಿಸಲು ಶತಪ್ರಯತ್ನ ನಡೆಸುತ್ತಿದ್ದ ಚೆನ್ನೈ ಆಟಗಾರರು ಅಲ್ಲಿಲ್ಲೊಂದು ಅಂಕಗಳನ್ನು ಕಲೆಹಾಕಿದರು. ನೋಡನೋಡುತ್ತಿದ್ದಂತೆಯೇ ಡೆಲ್ಲಿ ತಂಡ ಅರ್ಧಶತಕ ದಾಖಲಿಸಿದರೆ, ಚಾಲೆಂಜರ್ಸ್ ಪಡೆ ನಿರಾಸೆಯಲ್ಲಿ ಮುಳುಗಿತು. ಅಂತಿಮವಾಗಿ ನಾಲ್ಕನೇ ಕ್ವಾರ್ಟರ್ 12-12ರಲ್ಲಿ ಸಮಬಲ ಕಂಡಿತಾದರೂ, ಡೆಲ್ಲಿ ತಂಡ 52-30 ಅಂಕಗಳಿಂದ ವಿಜಯೋತ್ಸವ ಆಚರಿಸಿತು. ಪಂದ್ಯದ ಮೊದಲೆರಡು ಅವಧಿಗಳಲ್ಲಿ ಪ್ರಾಬಲ್ಯ ಮೆರೆದದ್ದು ಡೆಲ್ಲಿ ಗೆಲುವಿಗೆ ನೆರವಾಯಿತು.