Friday, November 22, 2024

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌: ಬೆಂಗಳೂರು ರೈನೋಸ್‌ ಶುಭಾರಂಭ

ಪುಣೆ; ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಇಲ್ಲಿನ ಬಾಲೆವಾಡಿ ಶ್ರೀ ಶಿವಛತ್ರಪತಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಆರಂಭ ಸಿಕ್ಕಿದ್ದು, ಎರಡನೆ ದಿನದ ಪಂದ್ಯದಲ್ಲಿ ಬೆಂಗಳೂರು ರೈನೋಸ್‌ ಪಾಂಡಿಚೇರಿ ಪ್ರೊಡಾಟರ್ಸ್‌ ತಂಡವನ್ನು 7 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿದೆ.

ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಜೂನ್ 4ರ ವರೆಗೆ ಪಂದ್ಯಗಳು ನಡೆಯಲಿದ್ದು, ಕರ್ನಾಟಕದ 13 ಆಟಗಾರರು ಟೂರ್ನಿಯಲ್ಲಿ ಆಡಲಿದ್ದಾರೆ.
ವಿಜೇತ ತಂಡ ಬೆಂಗಳೂರು ರೈನೋಸ್‌ 39 ಅಂಕಗಳನ್ನು ಗಳಿಸಿದರೆ, ಪಾಂಡಿಚೇರಿ ತಂಡ 32 ಅಂಕಗಳನ್ನು ಗಳಿಸಿತು. ಜಿದ್ದಾಜಿದ್ದಿನ ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು 20 ಅಂಕ ಮತ್ತು ಪಾಂಡಿಚೇರಿ 17 ಅಂಕಗಳನ್ನು ಗಳಿಸಿತ್ತು.
ಐಐಪಿಕೆಎಲ್‌ ಪ್ರಾಯೋಜಕ ಡಾ.ಪ್ರಸಾದ್‌ ಬಾಬು ಮಾತನಾಡಿ, ಎರಡೂ ತಂಡಗಳು ಉತ್ತಮವಾಗಿ ಆಡಿವೆ ಎಂದರು. ಮುಂದಿನ ಪಂದ್ಯಗಳಿಗೆ ಉಭಯ ತಂಡಗಳಿಗೆ ಶುಭ ಹಾರೈಸಿದರು.
ಪುಣೆ, ಮೈಸೂರು, ಬೆಂಗಳೂರಿನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ ಎಂದು ಐಐಪಿಕೆಎಲ್‌ನ ರವಿಕಿರಣ್‌ ಹೇಳಿದ್ದಾರೆ. ಸರಣಿಯ ಫೈನಲ್‌ ಜೂ.4ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಅತ್ಯಂತ ವೈಭವದಿಂದ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನ ಉದಯೋನ್ಮುಖ ನಟಿ ಕೈನಾತ್ ಅರೋರಾ ನೃತ್ಯ, ಉತ್ತರ ಭಾರತದ ಸ್ಟಾರ್ ಹಾಡುಗಾರ ಎಂಡಿಕೆಡಿಯ ಮೈ ನವಿರೇಳಿಸುವ ನೃತ್ಯ, ದೇಶಭಕ್ತಿಯ ಗಾಯಕಿ ಕವಿ ಸಿಂಗ್ ಉದ್ಘಾಟನಾ ಸಮಾರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ವೇಳೆ ಎಂಟು ತಂಡದ ಮಾಲೀಕರು ಹಾಜರಿದ್ದರು.
ಬೆಂಗಳೂರು ರೈನೋಸ್, ಚೆನ್ನೈ ಚಾಲೆಂಜರ್ಸ್, ದಿಲ್ಲರ್ ಡೆಲ್ಲಿ, ತೆಲುಗು ಬುಲ್ಸ್, ಛಿ ರಾಜೆ, ಪುಣೆ ಪ್ರೈಡ್, ಹರಿಯಾಣ ಹಿರೋಸ್,  ಪಾಂಡ್ಯ ಪ್ರೆಡಿಕ್ಟರ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ವಿ. ಪ್ರಸಾದ್ ಬಾಬು, ಮಾತನಾಡಿ, ಇದೇ ತಿಂಗಳ 23ರವರೆಗೆ ಉದ್ಘಾಟನಾ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಮೈಸೂರಿನಲ್ಲಿ ಇದೇ 24 ರಿಂದ 29ರವರೆಗೆ ಎರಡನೇ  ಹಂತದ ಪಂದ್ಯಗಳು ಆಯೋಜನೆಗೊಂಡಿವೆ. ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 1 ರಿಂದ 4ರವರೆಗೆ ನಡೆಯಲಿವೆ ಎಂದರು.
ಈ ಮಹತ್ವದ ಟೂರ್ನಿಗೆ ಸಾಕ್ಷಿಯಾಗಲು 16 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದು, ಬರುವ ದಿನಗಳಲ್ಲಿ ವಿಶ್ವಕಪ್ ಕಬಡ್ಡಿ  ಪಂದ್ಯಾವಳಿ ನಡೆಸಲು ಈ ಟೂರ್ನಿ ವೇದಿಕೆಯಾಗಿದೆ. ಮುಂದಿನ ಎಂಟು ವರ್ಷಗಳಲ್ಲಿ ಕಬಡ್ಡಿಯನ್ನು ಒಲಿಂಪಿಕ್ ಗೆ ಸೇರ್ಪಡೆ ಮಾಡಲು ಅಗತ್ಯ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಪ್ರಿಮಿಯಲ್ ಕಬಡ್ಡಿ ಟೂರ್ನಿಯಲ್ಲಿ ದೇಶ, ವಿದೇಶಗಳ 160 ಪ್ರಮುಖ ಆಟಗಾರರು ಎಂಟು ತಂಡಗಳಲ್ಲಿ ಆಡಲಿದ್ದು, ಮಂಡ್ಯದ ಮೂವರು ಆಟಗಾರರು ಮಂಡ್ಯ ಜಿಲ್ಲೆಯ ಮೂವರು ಆಟಗಾರರು ಪಂದ್ಯಾವಳಿಯಲ್ಲಿ ಭಾಗಹಿಸಿರುವುದು ಈ ಬಾರಿಯ ವಿಶೇಷವಾಗಿದೆ. ಅಭಿಷೇಕ್ ತೆಲಗು ಬುಲ್ಸ್, ಶಶಿಧರ್ ದಿಲ್ಲೆರ್ ದಿಲೆ ದೆಹಲಿ ಹಾಗೂ ವೆಂಟಕೇಶ್ ಪುಣೆ ಪ್ರೈಡ್ಸ್ ಗೆ ಆಯ್ಕೆಯಾಗಿದ್ದು, ಇನ್ನುಳಿದ 10 ಆಟಗಾರರು ಪ್ರಮುಖ ತಂಡಗಳಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ ಎಂದು ಪ್ರಸಾದ್ ಬಾಬು ತಿಳಿಸಿದರು.
ಐಐಪಿಕೆಎಲ್ ನಿರ್ದೇಶಕ ರವಿಕಿರಣ್ ಮಾತನಾಡಿ, ದೇಶಿಯ ಕ್ರೀಡೆಗೆ ಉತೇಜನ ನೀಡುವುದು ನಮ್ಮ ಆಶಯ. ದೇಶದ ಮೂಲೆ ಮೂಲೆಗೂ ಕಬಡ್ಡಿ ಕ್ರೀಡೆಯ ಪರಿಚಯವಾಗಬೇಕು. ಕಬಡ್ಡಿಯನ್ನು ಒಲಿಂಪಿಕ್ಸ್ ನಲ್ಲಿ ಆಡುವುದೇ ನಮ್ಮ ಗುರಿ ಎಂದಿದ್ದಾರೆ.
ಐಐಪಿಕೆಎಲ್ ಚಾಂಪಿಯನ್ ತಂಡ 1.25 ಕೋಟಿ ರೂ., ರನ್ನರ್ ಅಪ್ 75 ಲಕ್ಷ ರೂ., ಮೂರನೇ ಸ್ಥಾನಕ್ಕೆ 50 ಲಕ್ಷ ರೂ., ನಾಲ್ಕನೇ ಸ್ಥಾನಕ್ಕೆ 25 ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.
ಡಿ ಸ್ಪೋರ್ಟ್, ಡಿಡಿ ಸ್ಪೋರ್ಟ್ಸ್, ಎಂಟಿವಿ ಹಾಗೂ ವಿವಿಧ ಪ್ರಾದೇಶಿಕ ವಾಹಿನಿಗಳಲ್ಲಿ ಈ ಟೂರ್ನಿಯ ನೇರ ಪ್ರಸಾರಕ್ಕೆ ವ್ಯವಸ್ಥೆ  ಮಾಡಲಾಗಿದೆ.

Related Articles