ನವದೆಹಲಿ: ಐಎಸ್ಎಸ್‌ಎಫ್ ಶೂಟಿಂಗ್ ಮಹಿಳಾ ವಿಭಾಗದ 10 ಮೀ ಏರ್ ರೈಫಲ್ ವಿಶ್ವ ಶ್ರೇಯಾಂಕದಲ್ಲಿ ಭಾರತದ ಅಪೂರ್ವಿ ಚಂದೇಲಾ 1, 926 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈಪುರ ಶೂಟರ್ ಅಪೂರ್ವಿ ಚಂದೇಲಾ ಅವರು” ಶೂಟಿಂಗ್ ವೃತ್ತಿ ಜೀವನದಲ್ಲಿ ವಿಶ್ವದ ನಂ. 1 ಸ್ಥಾನ ಅಲಂಕರಿಸುವ ಮೂಲಕ ಮೈಲಿಗಲ್ಲು ಸೃಷ್ಟಿಸಿರುವುದು ಅತ್ಯಂತ ಹೆಚ್ಚು ಸಂತಸ ತಂದಿದೆ” ಎಂದು ಬರೆದುಕೊಡಿದ್ದಾರೆ.
26ರ ಪ್ರಾಯದ ಶೂಟರ್ ಈಗಾಗಲೇ ಟೀಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 10 ಮೀ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಕಳೆದ ಪೆಬ್ರವರಿಯಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ದಾಖಲೆ ಮಾಡುವ ಜತೆಗೆ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು. ಈ ಟೂರ್ನಿಯು ದೆಹಲಿಯಲ್ಲಿ ನಡೆದಿತ್ತು. ಅಪೂರ್ವಿ ಅವರು 10 ಮೀ ಏರ್ ರೈಫಲ್ ವಿಭಾಗದಲ್ಲಿ 252. 9 ಪಾಯಿಂಟ್ ಪಡೆದಿದ್ದರು.
ಇತ್ತೀಚೆಗೆ ಚೀನಾದ ಬೀಜಿಂಗ್‌ನಲ್ಲಿ ಮುಕ್ತಾಯವಾಗಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅಪೂರ್ವಿ ಚಂದೇಲಾ ಅವರು 207. 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದರು. ಜತೆಗೆ ಭಾರತದ ಅಂಜುಮ್ ಮೌದ್ಗಿಲ್ ಅವರು ಏರ್ ರೈಫಲ್ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಬೀಜಿಂಗ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಮಿಶ್ರ ತಂಡದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಹರಿಯಾಣದ ಮನು ಬಾಕರ್ ಅವರು 25 ಮೀ. ಪಿಸ್ತೂಲ್ ವಿಭಾಗದಲ್ಲಿ 10ನೇ ಶ್ರೇಯಾಂಕ ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ದಿವ್ಯಾಂಶ್ 10 ಮೀ ಏರ್ ರೈಫಲ್ ವಿಭಾಗದಲ್ಲಿ ವಿಶ್ವದ 4ನೇ ಶ್ರೇಯಾಂಕ ಪಡೆದಿದ್ದಾರೆ. 29 ವರ್ಷದ ಅಭಿಶೇಕ್ ವರ್ಮಾ ಅವರು ಬೀಜಿಂಗ್‌ನಲ್ಲಿ ಮುಕ್ತಾಯವಾದ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ಅವರು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. 10 ಮೀ ಏರ್ ಪಿಸ್ತೂಲ್‌ನಲ್ಲಿ ಅವರು ಮೂರನೇ ಶ್ರೇಯಾಂಕ ಪಡೆದಿದ್ದಾರೆ.
ಭಾರತದ ಮತ್ತೊಬ್ಬ ಶೂಟರ್ ಸೌರಭ್ ಚೌಧರಿ ಅವರು ವಿಶ್ವದ 6ನೇ ಶ್ರೇಯಾಂಕ ಪಡೆದಿದ್ದಾರೆ. 25 ಮೀ. ರಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಅನೀಶ್ ಭಾನ್ವಾಲ ಅವರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.