ಸ್ಪೋರ್ಟ್ಸ್ ಮೇಲ್ ವರದಿ
ಭಾರತೀಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಸ್ಥೆ (ಬಿಎಸ್ಎಫ್ಐ)ನ ನೂತನ ಅಧ್ಯಕ್ಷರಾಗಿ ಕನ್ನಡಿಗ ಉದ್ಯಮಿ ಎಂ.ಸಿ. ಉತ್ತಪ್ಪ ಅವರು ಆಯ್ಕೆಯಾಗಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆ ಬಿಎಸ್ಎಫ್ ಐಗೆ ಕನ್ನಡಿಗರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದೇ ಮೊದಲು.
ಇದಕ್ಕೂ ಮುನ್ನ ಅವರು ಬಿಎಸ್ಎಫ್ಐನಲ್ಲಿ ನಾಲ್ಕು ವರ್ಷಗಳ ಕಾಲ ಖಜಾಂಚಿ ಆಗಿ ಕಾರ್ಯನಿರ್ವಹಿಸಿದ್ದರು. ಮೂಲತಃ ಕೊಡಗಿನವರಾದ ಉತ್ತಪ್ಪ ಅವರು ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಸುಮಾರು 40 ವರ್ಷಗಳಿಂದ ಬಿಲಿಯಡ್ಸ್ ಹಾಗೂ ಸ್ನೂಕರ್ ಜತೆ ಸಂಬಂಧ ಹೊಂದಿದ್ದ ಉತ್ತಪ್ಪ ರಾಜ್ಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಸ್ಥೆಯ ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ರಾಜ್ಯ ಬಿಲಿಯರಡ್ಸ್ ಸಂಸ್ಥೆಗೆ ಹೊಸ ರೂಪುಕೊಟ್ಟ ಕೀರ್ತಿ ಉತ್ತಪ್ಪ ಅವರಿಗೆ ಸಲ್ಲುತ್ತದೆ. ರಾಷ್ಟ್ರೀಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಸ್ಥೆಯ 93 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರು ಅಧ್ಯಕ್ಷರಾಗಿರುವುದು ಕನ್ನಡಿಗರ ಹೆಮ್ಮೆಯೇ ಸರಿ.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಎಂ.ಸಿ. ಉತ್ತಪ್ಪ ಅವರು, ‘ದೇಶದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯೊಂದರ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಅಧ್ಯಕ್ಷನಾಗಿ ಕರ್ನಾಟಕದಲ್ಲಿ ಈ ಕ್ರೀಡೆಗೆ ಹೆಚ್ಚಿನ ಸ್ಥಾನಮಾನ ಸಿಗುವ ಬಗ್ಗೆ ಶ್ರಮಿಸುವೆ,‘ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾಗಿ ಸುನಿಲ್ ಬಜಾಜ್, ಸೌಮಿನಿ ಶ್ರೀನಿವಾಸ್, ವಿಜಯ್ ಗೋಯಲ್, ಪ್ರದೀಪ್ ಸರಾವ್ಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದೇವೇಂದ್ರ ಜೋಶಿ, ಖಜಾಂಚಿಯಾಗಿ ಎಚ್.ಆರ್. ರತನ್ ಕುಮಾರ್ ಆಯ್ಕೆಯಾಗಿದ್ದಾರೆ.