ರಾಷ್ಟ್ರೀಯ ನೆಟ್‌ಬಾಲ್ : ಕರ್ನಾಟಕದ ತಂಡಗಳ ಮುನ್ನಡೆ
ಸ್ಪೋರ್ಟ್ಸ್ ಮೇಲ್ ವರದಿ
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮಹಿಳಾ ಹಾಗೂ ಪುರುಷ ತಂಡಗಳು ಜಯ ಗಳಿಸಿ ಮುನ್ನಡೆ ಸಾಧಿಸಿವೆ.
ಸಿ ಗುಂಪಿನಲ್ಲಿರುವ ಕರ್ನಾಟಕ ಪುರುಷರ ತಂಡ ಬಿಹಾರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 30-6 ಅಂತರದಲ್ಲಿ ಸುಲಭ ಜಯ ಗಳಿಸಿತು. ಎರಡನೇ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ 31-6 ಅಂತರದಲ್ಲಿ ಜಯ ಗಳಿಸಿ ಮುನ್ನಡೆಯಿತು. ವನಿತೆಯರ ವಿಭಾಗದಲ್ಲಿ ಬಿ ಗುಂಪಿನಲ್ಲಿರುವ ರಾಜ್ಯ ತಂಡ ಉತ್ತರಾಖಂಡ್ ವಿರುದ್ಧ 39-3 ಅಂತರದಲ್ಲಿ ಜಯ ಗಳಿಸಿತು.

ಪುರುಷರ ವಿಭಾಗದ ಎ ಗುಂಪಿನ ಪಂದ್ಯದಲ್ಲಿ ಹರಿಯಾಣ 25-15 ಅಂತರದಲ್ಲಿ ತಮಿಳುನಾಡು ವಿರುದ್ಧ ಗೆದ್ದಿತು. ಕೇರಳ ತಂಡ ಮಧ್ಯಪ್ರದೇಶವನ್ನು 31-7 ಅಂತರದಲ್ಲಿ ಮಣಿಸಿತು. ಬಿ ಗುಂಪಿನಲ್ಲಿ ಪಂಜಾಬ್ 32-18 ಅಂತರದಲ್ಲಿ ಜಾರ್ಖಂಡ್‌ಗೆ ಸೋಲುಣಿಸಿತು. ಸಿ ಗುಂಪಿನಲ್ಲಿ ಬಿಹಾರ ತಂಡ ಜಮ್ಮು ಮತ್ತು ಕಾಶ್ಮೀರದ ವಿರುದ್ಧ 17-5 ಅಂತರದಲ್ಲಿ ಗೆದ್ದಿತು. ಡಿ ಗುಂಪಿನಲ್ಲಿ ಪಾಂಡಿಚೇರಿ, ಚಂಡೀಗಢ ತಂಡಗಳು ಪಾಂಡಿಚೇರಿ ವಿರುದ್ಧ ಜಯ ಗಳಿಸಿದವು. ಇ ಗುಂಪಿನಲ್ಲಿ ಡೆಲ್ಲಿ ತಂಡ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ ಗೋವಾವನ್ನು ಮಣಿಸಿತು. ಎಫ್ ಗುಂಪಿನಲ್ಲಿ ಉತ್ತರ ಪ್ರದೇಶ 18-13 ಅಂತರದಲ್ಲಿ ಒಡಿಶಾಕ್ಕೆ ಸೋಲುಣಿಸಿತು. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ತಂಡಗಳೂ ಜಯ ಗಳಿಸಿ ಮುನ್ನಡೆದವು. ಜಿ ಗುಂಪಿನಲ್ಲಿ ಗುಜರಾತ್ ಹಾಗೂ ಮಣಿಪುರ ತಂಡಗಳು ಮೇಲುಗೈ ಸಾಧಿಸಿದವು. ಎಚ್ ಗುಂಪಿನಲ್ಲಿ ಉತ್ತರಾಂಖಡ್ 17-10 ಅಂತರದಲ್ಲಿ ಹಿಮಾಚಲಪ್ರದೇಶಕ್ಕೆ ಸೋಲುಣಿಸಿತು.

ವನಿತೆಯರ ವಿಭಾಗದಲ್ಲಿ ಆಂಧ್ರಪ್ರದೇಶ, ಹರಿಯಾಣ ತಂಡಗಳು ಎ ಗುಂಪಿನಲ್ಲಿ ಒಂದು ಸೋಲು ಹಾಗೂ ಒಂದು ಜಯ ಕಂಡವು. ಸಿ ಗುಂಪಿನಲ್ಲಿ ಕೇರಳ, ರಾಜಸ್ಥಾನನ ಹಾಗೂ ಉತ್ತರ ಪ್ರದೇಶ ತಂಡಗಳು ಜಯ ಗಳಿಸಿದವು. ಡಿ ಗುಂಪಿನಲ್ಲಿ ಪಶ್ಚಿಮ ಬಂಗಾಳ ಪ್ರಭುತ್ವ ಸಾಧಿಸಿತು. ಇ ಗುಂಪಿನಲ್ಲಿ ಗುಜರಾತ್ ಸತತ ಎರಡು ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿತು. ಜಿ ಗುಂಪಿನಲ್ಲಿ ಚತ್ತೀಸ್‌ಗಢ ಹಾಗೂ ಪಂಜಾಬ್ ಮೊದಲ ಪಂದ್ಯಗಳಲ್ಲಿ ಜಯ ಗಳಿಸಿ ಮುನ್ನಡೆದವು. ಎಚ್ ಗುಂಪಿನಲ್ಲಿ ಮಹಾರಾಷ್ಟ್ರ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರಿತು.