ಸ್ಪೋರ್ಟ್ಸ್ ಮೇಲ್ ವರದಿ
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಅಮಿಬಾದಲ್ಲಿ ನಡೆದ 29ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಆಕಾಶ್ ಕುಮಾರ್ ಹಾಗೂ ತಮಿಳುನಾಡಿನ ಸಬೀನಾ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಕರ್ನಾಟಕದ ಆಕಾಶ್ ಅಶೋಕ್ ಕುಮಾರ್ ಎರಡನೇ ಶ್ರೇಯಾಂಕಿತ ದಿಲ್ಲಿಯ ದ್ರುವ ಸರ್ಜಾ ವಿರುದ್ಧ 413-372 ಅಂತರದಲ್ಲಿ ಜಯ ಗಳಿಸಿ ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿತು. ವನಿತೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ತಮಿಳುನಾಡಿನ ಸಬೀನಾ ಅತಿಕಾ ತೆಲಂಗಾಣದ ಸುಮತಿ ನಲ್ಲಂಬಟು ವಿರುದ್ಧ 376-266 ಅಂತರದಲ್ಲಿ ಜಯ ಗಳಿಸಿ 10ನೇ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿರು. ದಿನದ ಆರಂಭದಲ್ಲಿ ಸ್ಟೆಪ್‌ಲ್ಯಾಡರ್ ಸುತ್ತಿನ ಮೊದಲ ಪಂದ್ಯದಲ್ಲಿ ಕರ್ನಾಟಕದ ಮೂರನೇ ಸ್ಥಾನಿ ಪ್ರತ್ಯಕ್ ಸತ್ಯ ಕರ್ನಾಟಕದವರೇ ಆದ ನಾಲ್ಕನೇ ಸ್ಥಾನಿ ಕಿಶನ್ ಆರ್ ವಿರುದ್ಧ 426-377 ಅಂತರದಲ್ಲಿ ಜಯ ಗಳಿಸಿದರು. ಎರಡನೇ ಪಂದ್ಯದಲ್ಲಿ ದಿಲ್ಲಿಯ ದ್ರುವ ಸರ್ಜಾ ಕರ್ನಾಟಕದ ಆರ್. ಕಿಶನ್ ವಿರುದ್ಧ ಜಯ ಗಳಿಸಿದರು. ಆ ಮೂಲಕ ಫೈನಲ್ ಪ್ರವೇಶಿಸಿದರು.
ವನಿತೆಯರ ಸ್ಟೆಪ್‌ಲ್ಯಾಡರ್ ಸುತ್ತಿನ ಮೊದಲ ಪಂದ್ಯದಲ್ಲಿ 2ನೇ ಸ್ಥಾನಿ ಸುಮತಿ ನಲ್ಲಬಂಟು ಹಾಲಿ ಚಾಂಪಿಯನ್ ಹರಿಯಾಣದ ಅನುಕೃತಿ ಬಿಷ್ನೋಯ್ ಅವರ ವಿರುದ್ಧ 355-317 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದರು. ಪುರುಷರ ವಿಭಾಗದಲ್ಲಿ ಕರ್ನಾಟಕದ ಆಕಾಶ್ ಅಶೋಕ್ ಕುಮಾರ್ 32 ಪಂದ್ಯಗಳ ನಂತರ 206.50 ಸರಾಸರಿಯೊಂದಿಗೆ 6608 ಪಿನ್ ಫಾಲ್ ಮೂಲಕ ಅಗ್ರ ಸ್ಥಾನಕ್ಕೇರಿದರು. ದಿಲ್ಲಿ ದ್ರುವ ಸರ್ಜಾ 202.47 ಸರಾಸರಿಯೊಂದಿಗೆ 6479 ಪಿನ್‌ಫಾಲ್ ಮೂಲಕ ಎರಡನೇ ಸ್ಥಾನಿಯಾದರು. 4 ಪಿನ್ ಫಾಲ್ ಹಿನ್ನಡೆ ಕಂಡ ಹಾಲಿ ಚಾಂಪಿಯನ್ ಶಬ್ಬಿರ್ ಧನ್‌ಕೋಟ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.
ವಿಶೇಷ ಬಹುಮಾನ ಗಳಿಸಿದವರು
ಉದಯೋನ್ಮುಖ ಆಟಗಾರ- ವರ್ಷಿತ್ ಗುಡಿವಾಡ (ಆಂಧ್ರಪ್ರದೇಶ)
ಪುರುಷರ ವಿಭಾಗದಲ್ಲಿ 225ಕ್ಕಿಂತ ಅಂಕಗಳನ್ನು ಗಳಿಸಿದವರು-ಕರ್ನಾಟಕದ ಆಕಾಶ್ ಅಶೋಕ್ ಕುಮಾರ್ ಹಾಗೂ ಶಬ್ಬಿರ್ ಧನ್‌ಕೋಟ್ (ತಮಿಳುನಾಡು) ಒಟ್ಟು 9 ಬಾರಿ.
ಮಹಿಳಾ ವಿಭಾಗದಲ್ಲಿ 200ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರು-ಸಬೀನಾ ಅತಿಕಾ (6 ಬಾರಿ)
ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಬ್ಲಾಕ್ ಸಾಧನೆ- ಆಕಾಶ್ ಅಶೋಕ್ ಕುಮಾರ್ -1330.
ಮಹಿಳಾ ವಿಭಾಗದಲ್ಲಿ ಅತಿ ಹೆಚ್ಚು ಬ್ಲಾಕ್ ಸಾಧನೆ- ಸುಮತಿ ನಲ್ಲಬಂಟು (1114).