ಬೆಂಗಳೂರು:
ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಲಾದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ’ವಾಜಪೇಯಿ ಕಪ್’ ವಾಲಿಬಾಲ್ ಟೂರ್ನಿಗೆ ನಗರದಲ್ಲಿಂದು ವೈಭವದ ಚಾಲನೆ ದೊರೆಯಿತು. ಶಂಕರ ಮಠ ವೃತ್ತದ ವಿವೇಕಾನಂದ ಆಟದ ಮೈದಾನದಲ್ಲಿ ಟೂರ್ನಿಗಾಗಿಯೇ ವಿಶೇಷ ಥೀಮ್ ಸಾಂಗ್ ಸಿದ್ಧಪಡಿಸಿದ್ದು, ಥೀಮ್ ಸಾಂಗ್ ಮೂಲಕವೇ ಕ್ರೀಡಾಕೂಟ ಶುಭಾರಂಭಗೊಂಡಿತು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಸಚಿವ ರಾಮಚಂದ್ರಗೌಡ, ಬಿಜೆಪಿ ನಾಯಕಿ ತಾರಾ ಅನುರಾಧ, ಕರ್ನಾಟಕ ವಾಲಿಬಾಲ್ ಸಂಘದ ಅಧ್ಯಕ್ಷ ಬೆಟ್ಟೇಗೌಡ, ರಾಜಾಜಿನಗರದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ರಾಜ್ಯ ವಾಲಿಬಾಲ್ ಸಂಘದ ಉಪಾಧ್ಯಕ್ಷ ಹರೀಶ್ ಜಂಟಿಯಾಗಿ ಕ್ರೀಡಾಕೂಟವನ್ನು ಚಾಲನೆಗೊಳಿಸಿದರು.
ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರ ಹೆಸರಿನಲ್ಲಿ ಈ ಕ್ರೀಡಾಕೂಟ ನಡೆಸುತ್ತಿದ್ದು, ವಾಜಪೇಯಿ ಅವರ ಹಿಂದಿ ಭಾಷೆಯ ಸಂದೇಶಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಕ್ರೀಡಾ ಪ್ರೇಮಿಗಳಿಗೆ ಇದೇ ಸಂದರ್ಭದಲ್ಲಿ ಹಂಚಲಾಯಿತು.
ಮೊದಲ ಪಂದ್ಯದಲ್ಲಿ ಎಲ್‌ಐಸಿ ಮತ್ತು ಎಐಸಿ ತಂಡಗಳು ಮುಖಾಮುಖಿಯಾಗಿದ್ದವು. ರಾಜ್ಯದ ೧೦ ಪ್ರತಿಷ್ಠಿತ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ ೪ ಮಹಿಳೆಯರ ಹಾಗೂ ೬ ಪುರುಷರ ತಂಡಗಳು ಭಾಗವಹಿಸಲು ಅರ್ಹತೆ ಪಡೆದಿದೆ. ಪೋಸ್ಟಲ್ಸ್, ಜಿಂದಾಲ್ ಸ್ಟೀಲ್, ಬಿ.ಎಸ್.ಎನ್.ಎಲ್. ಸಿಐಎಲ್, ಮಂಗಳೂರಿನ ಉಜಿರೆ, ಭಾರತೀಯ ಕ್ರೀಡಾ ಪ್ರಾಧಿಕಾರದ ತಂಡಗಳು ಲೀಗ್ ಹಂತದ ಮೂಲಕ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಪ್ರತಿ ಸಂಜೆ ವಿಭಿನ್ನ ಮತ್ತು ವೈವಿಧ್ಯಮಯ ಸಾಂಸ್ಕತಿಕ ಕಾರ್ಯಕ್ರಮಗಳು ಸಹ ನಡೆಯಲಿದ್ದು, ಕ್ರೀಡೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆ ಒದಗಿಸುವುದು ಕೂಡ ಈ ಕ್ರೀಡಾ ಕೂಟದ ಉದ್ದೇಶವಾಗಿದೆ ಎಂದು ಹರೀಶ್ ತಿಳಿಸಿದರು.