ಪ್ಯಾರಿಸ್:
ರಷ್ಯಾ ಯುವ ಪ್ರತಿಭೆ ಕರೆನ್ ಖಾಚ್ನೊವ್ ಅವರು ಪ್ಯಾರಿಸ್ ಮಾಸ್ಟರ್ಸ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ವಿಶ್ವ ಶ್ರೇಷ್ಠ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇದರೊಂದಿಗೆ ಫೈನಲ್ ಪ್ರಶಸ್ತಿ ಗೆದ್ದು ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಅಲಂಕರಿಸಿ ಮತ್ತೊಂದು ಮೈಲಿಗಲ್ಲು ಸೃಷ್ಠಿಸುವ ಯೋಜನೆಯಲ್ಲಿದ್ದ ಸರ್ಬಿಯಾ ಆಟಗಾರನಿಗೆ ಕರೆನ್ ಶಾಕ್ ನೀಡಿದರು. ಆ ಮೂಲಕ ಟೆನಿಸ್ ಜಗತ್ತಿಗೆ ಹೊಸ ಸಂದೇಶವನ್ನು ಸಾರಿದರು.
ಫೈನಲ್ ಹಣಾಹಣಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ 22ರ ಪ್ರಾಯದ ರಷ್ಯಾ ಉದಯೋನ್ಮುಕ ಆಟಗಾರ ಕರೆನ್ 7-5, 6-4 ಅಂತರದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರರನ್ನು ಸೋಲಿಸುವ ಮೂಲಕ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ನೆರೆದಿದ್ದ ಅಪಾರ ಅಭಿಮಾನಿಗಳ ಶ್ಲಾಘನೆಗೆ ಚಾಂಪಿಯನ್ ಕರೆನ್ ಖಾಚ್ನೋವ್ ಒಳಗಾದರು.
ಕಳೆದ ಒಂದು ವಾರದಿಂದ ಕರೆನ್ ಅಗ್ರ 10 ಕ್ರಮಾಂಕದ ಆಟಗಾರರನ್ನು ಮಣಿಸಿದ್ದಾರೆ. ಪ್ಯಾರಿಸ್ ಮಾಸ್ಟರ್ಸ್ ಗೆಲ್ಲುವ ಮೂಲಕ ಕರೆನ್ ಪ್ರಸಕ್ತ ವರ್ಷದಲ್ಲಿ ಒಟ್ಟು ಮೂರು ಪ್ರಶಸ್ತಿ ಜಯಿಸಿದಂತಾಯಿತು. ಆ ಮೂಲಕ ರಷ್ಯಾ ತಾರೆ ವಿಶ್ವ ರ್ಯಾಂಕಿಂಗ್ನಲ್ಲಿ 18ನೇ ಸ್ಥಾನದಿಂದ 11 ಸ್ಥಾನಕ್ಕೆ ಜಿಗಿದರು.