Thursday, April 25, 2024

ಯೋಧರಿಗೆ ಬಲಿಯಾದ ತಮಿಳು ತಲೈವಾಸ್

ಸ್ಪೋರ್ಟ್ಸ್ ಮೇಲ್ ವರದಿ

ಮೊದಲ ಪಂದ್ಯದಲ್ಲಿ ಗೆದ್ದು ಅತ್ಯಂತ ಆತ್ಮವಿಶ್ವಾಸದಲ್ಲಿದ್ದ ತಮಿಳು ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ 37-32 ಅಂತರದಲ್ಲಿ ಸೋಲನುಭವಿಸಿತು.

ಕನ್ನಡಿಗ ಪ್ರಶಾಂತ್ ಕುಮಾರ್ ರೈ (8 ಅಂಕ) ರೈಡಿಂಗ್‌ನಲ್ಲಿ ಹಾಗೂ ನರೇಂದರ್ ಟ್ಯಾಕಲ್‌ನಲ್ಲಿ ಮಿಂಚುವುದರೊಂದಿಗೆ ಯೋಧಾಸ್ ಪಡೆ ಯಶಸ್ಸು ಕಂಡಿತು. ಡಿಫೆನ್ಸ್ ವಿಭಾಗದಲ್ಲಿ ಹಿನ್ನಡೆ ಕಂಡ ಕಾರಣ ತಮಿಳು ತಲೈವಾಸ್ ಪ್ರಥಮಾರ್ಧದಲ್ಲೇ ಸೋಲಿನ ಅಂಚಿಗೆ ನೂಕಲ್ಪಟ್ಟಿತ್ತು. ಅಜಯ್ ಠಾಕೂರ್ ರೈಡಿಂಗ್ ವಿಭಾಗದಲ್ಲಿ ೧೨ ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಮೊದಲ ಹತ್ತು ನಿಮಿಷಗಳ ಆಟದಲ್ಲೇ ಯೋಧಾ  ಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ತಮಿಳು ತಲೈವಾಸ್‌ಗೆ ಒಂದು ಅಂಕವನ್ನೂ ಗಳಿಸಲು ಅವಕಾಶ ನೀಡಲಿಲ್ಲ.  ೯ನೇ ನಿಮಿಷದಲ್ಲಿ ಯೋ‘ಾ ಪಡೆ ಎದುರಾಳಿಯನ್ನು ಆಲೌಟ್ ಮಾಡಿತು. ಆಗ ಅಂಕ ೧೦-೦. ಈ ಹಂತದಲ್ಲಿ ಅಜಯ್ ಠಾಕೂರ್ ಹಾಗೂ ಜಸ್ವಿರ್ ಸಿಂಗ್ ಅವರಿಗೆ ಅಂಕ ಗಳಿಸಲು ಯೋಧಾ  ಪಡೆ ಅವಕಾಶ ನೀಡಲೇ ಇಲ್ಲ. ಕೊನೆಗೂ ತಮಿಳು ತಲೈವಾಸ್ ೧೩ನೇ ನಿಮಿಷದಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ನಂತರ ಅಜಯ್ ಠಾಕೂರ್ ರೈಡಿಂಗ್‌ನಲ್ಲಿ ಖಾತೆ ತೆರೆದರು. ಆಗ ಅಂಕ ೨-೧೨.  ಪ್ರಥಮಾರ್ಧ  ಸಂಪೂರ್ಣ ಏಕಮುಖವಾಗಿ ನಡೆಯಿತು. ಯೋಧಾಸ್ ೧೮-೪ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಸಾಗರ್ ಕೃಷ್ಣ ಹಾಗೂ ಜೀವಕುಮಾರ್ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರು. ಯುಪಿ ಯೋಧಾಸ್ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿ ಎರಡನೇ ಬಾರಿಗೆ ತಲೈವಾಸ್ ಪಡೆಯನ್ನು ಆಲೌಟ್ ಮಾಡಿದರು. ಆಗ ಅಂಕ ೨೩-೫. ಈ ನಡುವೆ ಸಣ್ಣ ಪುಟ್ಟ ಪ್ರಮಾದ ಎಸಗಿದ ತಲೈವಾಸ್ ಪಡೆ ಮೂರು ತಾಂತ್ರಿಕ ಅಂಕಗಳನ್ನು ಕಳೆದುಕೊಂಡಿತು.೩೧ನೇ ನಿಮಿಷದಲ್ಲಿ ಅಜಯ್ ಠಾಕೂರ್ ರೈಡಿಂಗ್‌ನಲ್ಲಿ ಎರಡು ಅಂಕ ಗಳಿಸುವ ಮೂಲಕ ಪಂದ್ಯ ೯ ಅಂಕಗಳ ಅಂತರದಲ್ಲಿ ಮುಂದೆ ಸಾಗಿತು. ತಲೈವಾಸ್ ಕಠಿಣ ಹೋರಾಟಕ್ಕೆ ಮುನ್ನುಗ್ಗಿರುವುದು ಸ್ಪಷ್ಟವಾಯಿತು. ಆದರೆ ತನ್ನ ಆಟದಲ್ಲಿ ಪ್ರಭುತ್ವ ಸಾಧಿಸಿರುವ ಯೋಧಾಸ್ ಎದುರಾಳಿ ತಂಡಕ್ಕೆ ಹೆಚ್ಚು ಮುನ್ನಡೆಯಲು ಅವಕಾಶ ನೀಡಲಿಲ್ಲ. ಯೋಧಾ  ಪಡೆಯನ್ನು ಮೊದಲ ಬಾರಿಗೆ ಆಲೌಟ್ ಮಾಡಿದ ತಲೈವಾಸ್ ೩೦-೩೪ರ ಅಂತರದಲ್ಲಿ ಹೋರಾಟ ಮುಂದುವರಿಸಿತು. ಆದರೆ ಅಂತಿಮ ಕ್ಷಣದಲ್ಲಿ ಪ್ರಭುತ್ವ ಸಾಧಿಸಿದ ಯೋಧಾಸ್ ೩೭-೩೨ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.

ಖಾತೆ ತೆರೆದ ಪುಣೆ

ಯು ಮುಂಬಾ ವಿರುದ್ಧ ಸಮಬಲ ಸಾಧಿಸಿ ಅಂಕ ಹಂಚಿಕೊಂಡು ನಿರಾಸೆಗೊಳಗಾಗಿದ್ದ ಪುಣೇರಿ ಪಲ್ಟನ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದಲ್ಲಿ ೩೪-೨೨ ಅಂತರದಲ್ಲಿ ಜಯ ಗಳಿಸಿ ಖಾತೆ ತೆರೆಯಿತು. ನಿತಿನ್ ತೋಮಾರ್ (೭ ಅಂಕ), ಜಿ.ಬಿ. ಮೋರೆ (೬ ಅಂಕ) ಹಾಗೂ ದೀಪಕ್ ಕುಮಾರ್ ದಹಿಯಾ (೫ ಅಂಕ) ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ವಿಕಾಸ್ ಖಂಡೋಲಾ ಅವರ ರೈಡಿಂಗ್ ಮೂಲಕ ಸ್ಟೀಲರ್ಸ್ ಪಂದ್ಯದ ಮೇಲೆ ಪ್ರಭುತ್ವ ಸಾಧಿಸುವ ಲಕ್ಷಣ ಆರಂಭದಲ್ಲಿ ತೋರಿತ್ತು. ಆದರೆ ಅದು ಸ್ಥಿರ ಪ್ರದರ್ಶನ ತೋರುವಲ್ಲಿ ವಿಲವಾಯಿತು. ಹಲವಾರು ಮಾಡು ಇಲ್ಲವೆ ಮಡಿ ರೈಡಿಂಗ್ ಕಂಡು ಬಂದ ಪಂದ್ಯದಲ್ಲಿ ಪುಣೆಯ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತು. ಪುಣೇರಿ ಪಲ್ಟನ್ ತಂಡ ೧೫-೯ರ ಅಂತರದಲ್ಲಿ ಪ್ರಮಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲಿ ಪುಣೆ ತಂಡ ಉತ್ತಮ ಹೋರಾಟ ನೀಡಿ ಪಂದ್ಯ ತನ್ನದಾಗಿಸಿಕೊಂಡಿತು.

Related Articles