ಸ್ಪೋರ್ಟ್ಸ್ ಮೇಲ್ ವರದಿ
ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ೧-೪ ಅಂತರದಲ್ಲಿ ಸರಣಿ ಸೋತು ಹಿಂದಿರುಗಿದೆ. ತಂಡದ ಕೋಚ್ ರವಿಶಾಸ್ತ್ರೀ ಬಗ್ಗೆ ಮಾಜಿ ಆಟಗಾರರು ಸಾಕಷ್ಟು ಟೀಕೆ ಮಾಡಿದ್ದಾರೆ. ನಮ್ಮ ತಂಡ ಕಳೆದ 15-20 ವರ್ಷಗಳಲ್ಲಿ ಇತರ ತಂಡ ಮಾಡಿರುವುದಕ್ಕಿಂತ ಉತ್ತಮ ಕೆಲಸ ಮಾಡಿದೆ ಎಂದು ಶಾಸ್ತ್ರೀ ಸಮರ್ಥನೆ ಕೊಟ್ಟಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ರವಿಶಾಸ್ತ್ರೀಯ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಹಾಗಾದರೆ ಈ ಶಾಸ್ತ್ರೀ ವರ್ಷಕ್ಕೆ 8.36 ಕೋಟಿ ರೂ. ವೇತನ ಪಡೆದು ಮಾಡುತ್ತಿರುವುದಾದರೂ ಏನು? ಎಂಬ ಪ್ರಶ್ನೆ ಸಾಮಾನ್ಯ ಕ್ರಿಕೆಟ್ ಆಸಕ್ತರಲ್ಲಿ ಹುಟ್ಟುವುದು ಸಹಜ. ಶಾಸ್ತ್ರೀ ಅವರ ಮಾತಲ್ಲೇ ಹೇಳುವುದಾದರೆ ಅವರು ಏನೂ ಮಾಡುತ್ತಿಲ್ಲ, ಏನೂ ಮಾಡಬೇಕಾಗಿಯೂ ಇಲ್ಲ. ಶ್ರೇಷ್ಠ ಮಟ್ಟದ ತಂಡವೊಂದಕ್ಕೆ ಆಟಗಾರನೊಬ್ಬನನ್ನು ಆಯ್ಕೆ ಮಾಡಬೇಕಾದರೆ ಅವನು ಪಳಗಿಯೇ ಇರುತ್ತಾನೆ. ಕೇವಲ ಆತನ ಮನೋಬಲವನ್ನು ಹೆಚ್ಚಿಸಿದರೆ ಸಾಕು.
ತಿಂಗಳಿಗೆ ಅಂದಾಜು 69 ಲಕ್ಷ ಗಳಿಸುವ ಶಾಸ್ತ್ರೀಯ ನಿತ್ಯದ ಕರ್ಮ ಏನೆಂದು ತಿಳಿಯಬೇಕಾಗುವುದು ಸಹಜ. ಶಾಸ್ತ್ರೀ ಅವರ ಜತೆಯಲ್ಲಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್, ಮ್ಯಾನೇಜರ್ ಸುನಿಲ್ ಸುಬ್ರಹ್ಮಣ್ಯಂ, ಟ್ರೈನರ್ ಬಸು ಶಂಕರ್, ಸಹಾಯಕ ಟ್ರೈನರ್ ರಾಘವೇಂದ್ರ, ಫಿಸಿಯೋ ಪ್ಯಾಟ್ರಿಕ್ ಹ್ರಾತ್ ಇವರೆಲ್ಲ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾದರೆ ರವಿಶಾಸ್ತ್ರೀ ಕೆಲಸ ಏನು?
ಸಚಿನ್ ತೆಂಡೂಲ್ಕರ್ ಅವರ ಮಾತಿನಲ್ಲಿ ಹೇಳಬೇಕೆಂದರೆ ಕ್ರಿಕೆಟ್ ತಂಡಕ್ಕೆ ಕೋಚ್ ಅಗತ್ಯವೇ ಇಲ್ಲ. ರವಿಶಾಸ್ತ್ರೀ ನಿರಂತರವಾಗಿ ರನ್ ಗಳಿಸುವ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್‌ನಲ್ಲಿ ಏನು ಪಾಠ ಹೇಳಬಲ್ಲರು?, ಸೌರವ್ ಗಂಗೂಲಿ ಹೇಳಿರುವಂತೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ರನ್ ಗಳಿಸಿದಾಗ ಚಪ್ಪಾಳೆ ತಟ್ಟುವುದು, ಶತಕ ಗಳಿಸಿದಾಗ ಎದ್ದು ನಿಂತು ಚಪ್ಪಾಳೆ ತಟ್ಟುವುದು, ವಿಕೆಟ್ ಗಳಿಸಿದಾಗ ಇವರೇ ಗಳಿಸಿದಂತೆ ಸಂಭ್ರಮಿಸುವುದು ಇಷ್ಟು ಬಿಟ್ಟರೆ ಶಾಸ್ತ್ರೀ ಏನೂ ಮಾಡುವುದಿಲ್ಲ. ತಂಡದ ಆಟಗಾರರಿಗೆ ಅಗತ್ಯವಿರುವ ಕೆಲಸವನ್ನು ಇತರ ಸಿಬ್ಬಂದಿ ಪೂರೈಸಿರುತ್ತಾರೆ.
ಪಂದ್ಯ ಆರಂಭವಾಗುವುದಕ್ಕೆ ಎರಡು ದಿನ ಮುಂಚಿತವಾಗಿ ನೆಟ್ ಅಭ್ಯಾಸವಿರುತ್ತದೆ. ರವಿ ಶಾಸ್ತ್ರೀ ಅಲ್ಲಿಯೂ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಅವರ ಹೊಟ್ಟೆಯೇ ಸಾಕ್ಷಿ. ವೈಯಕ್ತಿಕ ಫಿಟ್ನೆಸ್ ಬಗ್ಗೆಯೇ ಗಮನ ಕೊಡದವರು ಇನ್ನು ತಂಡದ ಫಿಟ್ನೆಸ್ ಬಗ್ಗೆ ಯೋಚಿಸುತ್ತಾರೆಯೇ? ಶಾಸ್ತ್ರೀ ಅವರು ಕೋಚ್ ಆಗಿ ಆಯ್ಕೆಗೊಂಡಾಗ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ಸಂದರ್ಶನ ನಡೆಸಿತ್ತು. ಅಲ್ಲಿ ಅವರೇ ಹೇಳಿರುವಂತೆ, ತಂಡದಲ್ಲಿ ಪಳಗಿದ ಆಟಗಾರರಿರುತ್ತಾರೆ. ಅವರಿಗೆ ಕೋಚಿಂಗ್ ನೀಡಬೇಕಾದ ಅಗತ್ಯವಿಲ್ಲ. ಅವರು ಲಯ ಕಾಯ್ದುಕೊಳ್ಳುವಂತೆ ನೋಡಬೇಕು. ಆ ಕೆಲಸವನ್ನು ಅವರೇ ಮಾಡುತ್ತಾರೆ. ಇತರ ಕೋಚ್‌ಗಳಂತೆ ಸಾಕಷ್ಟು ಸಲಕರಣೆಗಳನ್ನು ಹೊತ್ತು ಅಂಗಣಕ್ಕೆ ಇಳಿಯುವ ವ್ಯಕ್ತಿ ನಾನಲ್ಲ ಎಂದಿದ್ದಾರೆ. ಹಾಗಾದರೆ ಇವರ ಕೆಲಸ ಏನು ಎಂಬುದು ಮತ್ತೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಪಂದ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದರೆ, ವಿಕೆಟ್ ಉರುಳದೆ ರನ್ ಬರುತ್ತಿದ್ದರೆ, ಕ್ಯಾಮರಾಮೆನ್ ಕಣ್ಣಿಗೆ ಬೀಳದಿದ್ದರೆ…ಶಾಸ್ತ್ರೀಯ ಕೈಗೆ ಬಿಯರ್ ಗ್ಲಾಸ್ ಬಂದು ಕುಳಿತುಕೊಳ್ಳುವುದಿದೆ. ಇಂಥ ಕೋಚ್‌ಗಳಿಂದ ನಾವು ಗೆಲ್ಲುವ ಪಂದ್ಯವಾದರೂ ಎಷ್ಟು?, ಬರೇ ಹಣ ವೇಸ್ಟ್ ಅನಿಸುವುದಿಲ್ಲವೇ?.. ಒಟ್ಟಾರೆ ಭಾರತ ತಂಡ ಗೆಲ್ಲುವ ತನಕ, ಜನ ಕ್ರಿಕೆಟ್ ಹುಚ್ಚಿನಿಂದ ಮುಕ್ತಿ ಹೊಂದುವ ತನಕ ಈ ಆಟ ನಡೆಯುತ್ತಿರುತ್ತದೆ. ಯಾವ ಶಾಸ್ತ್ರೀ ಬಂದರೇನು.. ಹೋದರೇನು… ಸೋತರೂ ಹಣ ಇದೆ… ಗೆದ್ದರೂ ಬಹುಮಾನವಿದೆ…ಲೀಡ್ ಸುದ್ದಿ ಮಾಡಿ ಪ್ರಚಾರ ನೀಡಲು ಮಾಧ್ಯಮಗಳಿವೆ…