ಬೆಂಗಳೂರು: ಒಂದು ಟೂರ್ನಿಯ ವೈಫಲ್ಯದಿಂದ ಒಂದು ಕ್ರಿಕೆಟ್ ತಂಡದ ಭವಿಷ್ಯವನ್ನು ಹೇಳಲಾಗದು. ಆದರೆ ಒಂದು ಕ್ರಿಕೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯದಿಂದ ಆ ರಾಜ್ಯದ ಕ್ರಿಕೆಟ್ ಯಾವ ದಡವನ್ನು ಸೇರಬಹುದು ಎಂಬುದನ್ನು ಖಚಿತವಾಗಿ ಅಲ್ಲದಿದ್ದರೂ ಸರಿ ಸುಮಾರಾಗಿ ಊಹಿಸಬಹುದು. ಹೇಳ ಹೊರಟಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್‌ನ ದುರಾಡಳಿತದ ಬಗ್ಗೆ. ಪಾಕಿಸ್ತಾನದ ಕ್ರಿಕೆಟ್‌ನ ಬಗ್ಗೆ ಮಾತನಾಡುವ ನಾವು ನಮ್ಮದೇ ರಾಜ್ಯದ ಕ್ರಿಕೆಟ್‌ನ ಬಗ್ಗೆ ಮಾತನಾಡಬೇಕಾದ ಅಗತ್ಯವಿದೆ. Karnataka cricketing ecosystem is filled with insecurity.
ತಾನು ಹುಟ್ಟಿ ಬೆಳೆದ ರಾಜ್ಯ, 17 ಕ್ಕೂ ಹೆಚ್ಚು ವರ್ಷ ಕ್ರಿಕೆಟ್ ಆಡಿ ರಣಜಿ ಚಾಂಪಿಯನ್ ಪಟ್ಟ ತಂದುಕೊಟ್ಟವರು ಈಗ ಆ ರಾಜ್ಯದ ಕ್ರೀಡಾ ಸಂಸ್ಥೆಯ ಬಗ್ಗೆ ಮಾತನಾಡುತ್ತಿದ್ದಾರೆಂದರೆ ಅಲ್ಲಿ ಏನೋ ನಡೆಯಬಾರದು ನಡೆಯುತ್ತಿದೆ ಎಂದರ್ಥ. ರಾಬಿನ್ ಉತ್ತಪ್ಪ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಮಾಜಿ ಆಟಗಾರ, ಐಪಿಎಲ್‌ನಲ್ಲಿ ಚಾಂಪಿಯನ್ ತಂಡದ ಪರ ಆಡಿದ ಆಟಗಾರ, ರಾಜ್ಯ ರಣಜಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರ ತನ್ನ ಮೌನ ಮುರಿದಿದ್ದಾರೆಂದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲಾಗದು.
ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆಯ ಅವ್ಯವಸ್ಥೆಗೆ ಬೇಸತ್ತು ಎಷ್ಟೋ ಕ್ರಿಕೆಟಿಗರು ರಾಜ್ಯವನ್ನು ತೊರೆದು ಬೇರೆ ರಾಜ್ಯಗಳಲ್ಲಿ ಆಡುತ್ತಿದ್ದಾರೆ. ಭಾರತ ತಂಡದ ಪರ ಆಡಿದ ಟೆಸ್ಟ್ ಆಟಗಾರರು ಕೂಡ ಕರ್ನಾಟಕವನ್ನು ತೊರೆದು ಬೇರೆ ರಾಜ್ಯವನ್ನು ಪ್ರತಿನಿಧಿಸಿ ಅಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ನಮ್ಮ ರಾಜ್ಯವನ್ನು ತೊರೆದ ಹೋದ ಗಣೇಶ್ ಸತೀಶ್ ವಿದರ್ಭ ಪರ ಆಡಿ ನಮ್ಮ ಎದುರೇ ಶತಕ ಬಾರಿಸಿ ನಮಗೆ ಸೋಲುಣಿಸಿದ್ದನ್ನು ಮರೆಯುವಂತಿಲ್ಲ. ಈಗ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಅವರಂಥ ಶ್ರೇಷ್ಠ ಆಟಗಾರರು ಬೇರೆ ರಾಜ್ಯದ ಪರ ಆಡುತ್ತಿದ್ದಾರೆ. ರಾಬಿನ್ ಉತ್ತಪ್ಪ ಕೂಡ ಕೊನೆಯಲ್ಲಿ ಆಡಿದ್ದು ಕೇರಳ ಪರ, ವಿನಯ್ ಕುಮಾರ್ ಕೂಡ ಪಾಂಡಿಚೇರಿಯ ಪರ ಆಡಿದರು.
“ಇಲ್ಲಿ ಹಿರಿಯ ಆಟಗಾರರನ್ನು ಕಡೆಗಣಿಸಿದ ಪರಿಣಾಮ ಅವರು ಬೇರೆ ರಾಜ್ಯಗಳ ಪರ ಆಡುವಂತಾಗಿದೆ. ಇಲ್ಲಿ ಬಹಳಷ್ಟು ಪ್ರತಿಭೆಗಳು ದುರಾಡಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದ ಕ್ರಿಕೆಟಿಗರಿಗೆ ಅಭದ್ರತೆ ಕಾಡುತ್ತಿದೆ. ಇದರಿಂದಾಗಿ ಅವರು ವಲಸೆ ಹೋಗುತ್ತಿದ್ದಾರೆ,” ಎಂದು ರಾಬಿನ್ ಉತ್ತಪ್ಪ ಖಾಸಗಿ ಕ್ರೀಡಾ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬ್ರಿಜೇಶ್ ಪಟೇಲ್ ಕ್ರಿಕೆಟ್ ಆಡಳಿತದಿಂದ ದೂರ ಸರಿದಾಗಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಗಿದೆ. ಕೆಪಿಎಲ್ ಬೆಟ್ಟಿಂಗ್, ದುಂದು ವೆಚ್ಚ, ತಂಡಗಳ ಆಯ್ಕೆಯಲ್ಲಿ ತಾರತಮ್ಯ ಇವೆಲ್ಲ ಸಾಮಾನ್ಯವಾಗಿದೆ.