Thursday, March 28, 2024

ಕೇರಳ ಬ್ಲಾಸ್ಟರ್ಸ್ ತೊರೆದ ಸಚಿನ್ ತೆಂಡೂಲ್ಕರ್

ಏಜೆನ್ಸೀಸ್ ಮುಂಬಯಿ

ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ ತಂಡದ ಪಾಲುದಾರರಾಗಿದ್ದರು. ಆದರೆ ಈ ಋತುವಿನಿಂದ ಸಚಿನ್ ಆ ತಂಡದ ಪಾಲುದಾರರಾಗಿ ಮುಂದುವರಿಯದಿರಲು ತೀರ್ಮಾನಿಸಿದ್ದಾರೆ.

ಶೇ. 20ರಷ್ಟು ಪಾಲು ಹೊಂದಿರುವ ಸಚಿನ್, ಈಗ ತಂಡದಿಂದ ಹೊರ ಬರಲು ತೀರ್ಮಾನಿಸಿದ್ದಾರೆ. ಕಳೆದ ಒಂದು ವಾರದಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಭಾನುವಾರ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಚಿನ್ ಅಂಗಣದಲ್ಲಿ ಕುಳಿತು ಕೈ ಬೀಸಿದರೆ ಅಲ್ಲೊಂದು ಉತ್ಸಾಹದ ಅಲೆ ಉಂಟಾಗುತ್ತಿತ್ತು. ಫುಟ್ಬಾಲ್‌ಪಂದ್ಯ ನಡೆಯುತ್ತಿರುವಾಗ ಸಚಿನ್ ತೆಂಡೂಲ್ಕರ್ ಅವರನ್ನು ನೋಡುವುದಕ್ಕಾಗಿಯೇ  ಬರುವವರ ಸಂಖ್ಯೆ ಅಧಿಕವಾಗಿತ್ತು. ಆದರೆ ಇನ್ನು ಆ ಉಲ್ಲಾಸ ಕಡಿಮೆಯಾಗುವುದು ಖಚಿತ. ‘ನನ್ನ ತಂಡದೊಂದಿಗೆ ಚರ್ಚಿಸಿ, ಕೇರಳ ಬ್ಲಾಸ್ಟರ್ಸ್ ಪಾಲನ್ನು ಹಿಂಪಡೆಯಲು ತೀರ್ಮಾನಿಸಿರುವೆ,‘  ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ. ೨೦೧೪ರಿಂದ ಕೇರಳ ಬ್ಲಾಸ್ಟರ್ಸ್ ತಂಡದ ಭಾಗವಾಗಿದ್ದ ಸಚಿನ್, ಕೇರಳ ಬ್ಲಾಸ್ಟರ್ಸ್‌ಗಾಗಿ ನನ್ನ ಹೃದಯ ಸದಾ ಮಿಡಿಯುತ್ತಿರುತ್ತದೆ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕೇರಳ ಬ್ಲಾಸ್ಟರ್ಸ್ ನನ್ನ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಈ ಅವಧಿಯಲ್ಲಿ ಕೇರಳದ ಫುಟ್ಬಾಲ್ ಅಭಿಮಾನಿಗಳು ನೀಡಿದ ಪ್ರೀತಿ ಸದಾ ಹಸಿರಾಗಿರುತ್ತದೆ. ಕೇರಳ ಬ್ಲಾಸ್ಟರ್ಸ್ ತಂಡ ಮುಂದಿನ ಐದು ವರ್ಷಗಳಿಗಾಗಿ ತಂಡವನ್ನು ಬಲಿಷ್ಠಗೊಳಿಸುವ ಕಾರ್ಯ ಮಾಡುತ್ತಿದೆ. ಮಾಲೀಕತ್ವದಲ್ಲೂ ಬದಲಾವಣೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ನನ್ನ ತೀರ್ಮಾನವನ್ನು ಪ್ರಕಟಿಸಿದೆ ಎಂದು ಸಚಿನ್ ಹೇಳಿದ್ದಾರೆ.
ಸೆಪ್ಟಂಬರ್ ೨೯ರಂದು ನಡೆಯುವ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಎಟಿಕೆ ವಿರುದ್ಧ ಸೆಣಸಲಿದೆ.

Related Articles