ಕೊಚ್ಚಿ: ಭಾರತ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆಯ ನಡುವಿನ ವಿವಾದ ಈಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಾಂಪಿಯನ್ಸ್ ಟ್ರೋಫಿಗೆ ಹಾಗೂ ವಿಜಯ ಹಜಾರೆ ಟ್ರೋಫಿಗೆ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟಿರುವುದರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ವಿಷಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ತಲುಪಿದೆ. Sanju Samson may play for Tamil Nadu or Rajasthna?
ಈ ನಡುವೆ ಉತ್ತಮ ಆಟಗಾರನಾಗಿರುವ ಸಂಜು ಸ್ಯಾಮ್ಸನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತಮಿಳುನಾಡು ಹಾಗೂ ರಾಜಸ್ಥಾನದ ತಂಡಗಳು ಮುಂದಾಗಿವೆ ಎಂದು ವರದಿಗಳು ಹೇಳುತ್ತಿವೆ.
ವಿಜಯ ಹಜಾರೆ ಟ್ರೋಫಿಗಾಗಿ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿತ್ತು. ಆದರೆ ಸಂಜು ಸ್ಯಾಮ್ಸನ್ ಅವರು ಈ ಶಿಬಿರದಲ್ಲಿ ಪಾಲ್ಗೊಂಡಿರಲಿಲ್ಲ. ಇದಕ್ಕೆ ಸೂಕ್ತವಾದ ಕಾರಣವನ್ನೂ ನೀಡಲಿಲ್ಲ. ಕೇವಲ ಒಂದು ಸಾಲಿನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಷ್ಟೇ ತಿಳಿಸಿದ್ದರು. ಕೆಲವು ದಿನಗಳ ಬಳಿಕ ನಾನು ಲಭ್ಯವಿದ್ದೇನೆ ಎಂದಷ್ಟೇ ತಿಳಿಸಿದ್ದರು. ಇದರಿಂದಾಗಿ ಕೇರಳ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಂಜು ಅವರನ್ನು ತಂಡದಿಂದ ಕೈಬಿಟ್ಟಿತು. ವಿಜಯ ಹಜಾರೆ ಟ್ರೋಫಿಯಲ್ಲಿ ಆಡದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡುವ ಬಿಸಿಸಿಐ ಆಯ್ಕೆ ಸಮಿತಿ ಸಂಜು ಅವರನ್ನು ಕೈ ಬಿಟ್ಟಿತು.
ಈ ನಡುವೆ ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ಅವರು, “ನನ್ನ ಮಗನ ಕ್ರಿಕೆಟ್ ಬದುಕನ್ನು ಹಾಳು ಮಾಡುವ ಉದ್ದೇಶದಿಂದ ಕೇರಳ ಕ್ರಿಕೆಟ್ ಸಂಸ್ಥೆಯಲ್ಲಿರುವ ಕೆಲವರು ಉದ್ದೇಶ ಪೂರ್ವಕವಾಗಿ ಈ ಕೃತ್ಯವನ್ನು ಮಾಡುತ್ತಿದ್ದಾರೆ. ಇದೇ ರೀತಿ ಗೈರಾಗಿರುವ ಇತರ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ,” ಎಂದು ಆರೋಪಿಸಿದ್ದಾರೆ.