Sunday, September 8, 2024

Santosh Trophy Football ಸೌದಿ ಅರೇಬಿಯಾದಲ್ಲೇಕೆ ಸಂತೋಷ್ ಟ್ರೋಫಿ ಫುಟ್ಬಾಲ್‌ ?

ಬೆಂಗಳೂರು: 76ನೇ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಚಾಂಪಿಯನ್‌ಷಿಪ್‌ (Santosh Trophy Football Championship) ಸೆಮಿಫೈನಲ್‌ ಹಂತ ತಲುಪಿದೆ. ಕರ್ನಾಟಕ, ಪಂಜಾಬ್‌, ಮೇಘಾಲಯ ಮತ್ತು ಸರ್ವಿಸಸ್‌ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಆದರೆ ಈ ಪಂದ್ಯಗಳು ಭಾರತದಲ್ಲಿ ನಡೆಯುತ್ತಿಲ್ಲ. ಮೊದಲ ಬಾರಿಗೆ ಕೊಲ್ಲಿ ರಾಷ್ಟ್ರದಲ್ಲಿ ನಡೆಯಲಿದೆ. ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್‌ ಫಿಹಾದ್‌ ಅಂತಾರಾಷ್ಟ್ರೀಯ ಕ್ರೀಡಾಂಗಣಲ್ಲಿ (King Fahd International Stadium) ಪಂದ್ಯ ನಡೆಯಲಿದೆ.

ಆದರೆ ಪಂದ್ಯಗಳನ್ನು ಸೌದಿಯಲ್ಲಿ ನಡೆಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ, ದಕ್ಷಿಣ ಏಷ್ಯಾ ಫುಟ್ಬಾಲ್‌ ಫೆಡರೇಷನ್‌ ಜೊತೆ ಅಖಿಲ ಭಾರತ ಫುಟ್ಬಾಲ್‌ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದಂತೆ ಈ ಪಂದ್ಯಗಳು ಕೊಲ್ಲಿ ರಾಷ್ಟ್ರದಲ್ಲಿ ನಡೆಯುತ್ತಿದೆ. ಭಾರತದ ಫುಟ್ಬಾಲ್‌ ಆಟಗಾರರಿಗೆ ವಿದೇಶದಲ್ಲಿ ಆಡಿದ ಅನುಭವ ಸಿಗಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದೆನ್ನಲಾಗುತ್ತಿದೆ. ಕೆಲವು ಮಾಜಿ ಆಟಗಾರರು ಮತ್ತು ಕೋಚ್‌ಗಳು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಇದು ಒಪ್ಪುವಂಥದ್ದು, ಆದರೆ ಭಾರತದ ಪ್ರತಿಷ್ಠಿತ ಟೂರ್ನಿಯೊಂದನ್ನು ವಿದೇಶದ ನೆಲದಲ್ಲಿ ಆಡಿಸುವುದು ಎಷ್ಟು ಸಮಂಜ ಎಂದೆನಿಸುವುದೂ ಇದೆ.

ನಮ್ಮ ದೇಶದ ನೆಲದ ಟೂರ್ನಿಯನ್ನು ನಮ್ಮ ದೇಶದ ಫುಟ್ಬಾಲ್‌ ಅಭಿಮಾನಿಗಳು ಕುತೂಹಲದಿಂದ ನೋಡುತ್ತಾರೆ. ರಿಯಾದ್‌ನಲ್ಲಿ ನಡೆಯುವ ಕರ್ನಾಟಕ, ಪಂಜಾಬ್‌, ಮೇಘಾಲಯ ಮತ್ತು ಸರ್ವಿಸಸ್‌ ನಡುವಿನ ಸೆಮಿಫೈನಲ್‌ ಮತ್ತು ಆ ಬಳಿಕ ನಡೆಯವು ಮೂರನೇ ಸ್ಥಾನದ ಪಂದ್ಯ ಹಾಗೂ ಫೈನಲ್‌ ಪಂದ್ಯಗಳನ್ನು ನೋಡಲು ಅಲ್ಲಿಯ ಪ್ರೇಕ್ಷಕರು ಆಗಮಿಸುತ್ತಾರೆಯೇ ? ಈ ತಂಡಗಳಲ್ಲಿ ಯಾರಾದರೂ ಸ್ಟಾರ್‌ ಆಟಗಾರರಿದ್ದಾರೆಯೇ? ಆ ಆಟಗಾರರನ್ನು ನೋಡಲು ಸೌಧಿಯ ಜನ ಉತ್ಸುಕರಾಗಿದ್ದಾರೆಯೇ? ಜನರು ನೋಡದ ಪಂದ್ಯಗಳ ಬಗ್ಗೆ ಆಟಗಾರರಲ್ಲಿ ಉತ್ಸಾಹ ಹೊರಹೊಮ್ಮುವುದೇ ? ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುವುದು ಸಹಜ.

ಉದಾಹರಣೆಗೆ ಕರ್ನಾಟಕ ತಂಡ ಆಡುವ ಸೆಮಿಫೈನಲ್‌ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸುವುದರಿಂದ ಮನೆಯಂಗಣದಲ್ಲಿ ನಡೆಯುವ ಪಂದ್ಯಗಳನ್ನು ನೋಡಲು ಕನಿಷ್ಠ ಬೆಂಗಳೂರಿನ ಫುಟ್ಬಾಲ್‌ ಅಭಿಮಾನಿಗಳಾದರೂ ಸೇರುತ್ತಾರೆ. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪಂದ್ಯಗಳನ್ನು ನೋಡಲು ಸೇರುತ್ತಿರುವ ಫುಟ್ಬಾಲ್‌ ಅಭಿಮಾನಿಗಳನ್ನು ಇಲ್ಲಿ ಸ್ಮರಿಸಬಹುದು. ಮನೆಯಂಗಣದ ಪ್ರೇಕ್ಷಕರ ಮುಂದೆ ನಮ್ಮ ಆಟಗಾರರೂ ಉತ್ತಮವಾಗಿ ಆಡುವ ಹುಮ್ಮಸ್ಸು ತೋರಬಹುದು. ಸಂತೋಷ್‌ ಟ್ರೋಫಿ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ (Santosh Trophy Football Championship) ಮೊದಲ ಬಾರಿಗೆ ಸೆಮಿಫೈನಲ್‌ ತಲುಪಿರುವ ಮೇಘಾಲಯದ ಪಂದ್ಯವನ್ನು ಶಿಲ್ಲಾಂಗ್‌ನಲ್ಲಿ ನಡೆಸಿದರೆ ಅಲ್ಲಿಯ ಪ್ರೇಕ್ಷಕರಿಗೆ ತಮ್ಮ ತಂಡಕ್ಕೆ ಪ್ರೋತ್ಸಾಹ ನೀಡಲು ಅನಕೂಲವಾಗುತ್ತಿತ್ತು. ಆದರೆ ರಿಯಾದ್‌ನಲ್ಲಿ ನಡೆಸುವುದರಿಂದ ಅದ್ಯಾವ ಪ್ರಯೋಜನ ಇದೆಯೋ ತಿಳಿಯದು.

ಎಐಎಫ್‌ಎಫ್‌ ಮಾಡಬೇಕಾದ ಕೆಲಸ ಬೇರೆಯೇ ಇದೆ:
ದೇಶದ ಪ್ರತಿಷ್ಠಿತ ಫುಟ್ಬಾಲ್‌ ಟೂರ್ನಿಯ ಪ್ರಮುಖ ಪಂದ್ಯಗಳನ್ನು ವಿದೇಶದ ನೆಲದಲ್ಲಿ ನಡೆಸಲು ತೀರ್ಮಾನಿಸಿರುವ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಈ ಒಪ್ಪಂದ ಸಂಸ್ಥೆಗೆ ಖರ್ಚಿನ ಹೊರೆಯನ್ನು ತರಲಿದೆಯೇ ಹೊರತು ಬೇರೆ ಯಾವುದೇ ರೀತಿಯಲ್ಲಿ ಉಪಯೋಗವಾಗದು. ಅದೇ ಹಣವನ್ನು ಇನ್ನಾವುದೋ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿತ್ತು. ಇದು ಫುಟ್ಬಾಲ್‌ ಸಂಸ್ಥೆಯ ಪದಾಧಿಕಾರಿಗಳ ಪ್ರವಾಸಕ್ಕೆ ದಾರಿ ಮಾಡಿಕೊಟ್ಟಂತಿದೆ. ಒಂದು ವೇಳೆ ಎಐಎಫ್‌ಎಫ್‌ಗೆ ನಮ್ಮ ದೇಶದ ಯುವ ಆಟಗಾರರಿಗೆ ವಿದೇಶಿ ನೆಲದ ಅನುಭವ ನೀಡಬೇಕೆಂಬ ಹಂಬಲ ಉತ್ಕಟವಾಗಿದ್ದರೆ ವಿವಿಧ ರಾಜ್ಯಗಳ ಒಂದಿಷ್ಟು ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಯೂಪೋಪ್‌ನ ಉತ್ತಮ ಅಕಾಡೆಮಿಗಳಲ್ಲಿ ತರಬೇತಿ ನೀಡುವ ಅಥವಾ ಅಲ್ಲಿ ಆಡುವ ಅವಕಾಶ ಕಲ್ಪಿಸುವ ಕೆಲಸವನ್ನು ಮಾಡಬಹುದಾಗಿತ್ತು.

ಇದನ್ನೂ ಓದಿ : ಭಾರತದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್‌ಗೆ ಹಲವು ರಾಷ್ಟ್ರಗಳಿಂದ ಬಹಿಷ್ಕಾರ !

ಇದನ್ನೂ ಓದಿ : Bjorn Borg : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಗೆ ಸಮಯದ ಪಾಠ ಕಲಿಸಿದ ಬ್ಯೋನ್‌ ಬೋರ್ಗ್‌

Related Articles