Sportsmail Desk: ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ನಾವು ಹಲವಾರು ಸ್ಫೂರ್ತಿದಾಯಕ ಕತೆಗಳನ್ನು ಕೇಳಿದ್ದೇವೆ. ಆದರೆ ಬ್ರಿಟನ್‌ನ 46 ವರ್ಷ ಪ್ರಾಯದ ಸೈಕ್ಲಿಸ್ಟ್ ಮತ್ತು ಈಜುಗಾರ್ತಿ ಸಹ್ರಾ ಸ್ಟೋರೆ ಅವರ ಕ್ರೀಡಾ ಸಾಧನೆ ಜಗತ್ತಿಗೇ ಮಾದರಿಯಾದುದು. ಎಂಟು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಸಹ್ರಾ ಅವರ ಸಾಧನೆಯನ್ನು ನೋಡಿ ಜಗತ್ತೇ ನಿಬ್ಬೆರಗಾಗಿದೆ. ಸಹ್ರಾ ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ಬ್ರಿಟನ್ ಪಾಲಿನ ಚಿನ್ನದ ಗಣಿ. Sarah Storey Gold mine of Paralympics.
ಸಹ್ರಾ ಎಡಗೈ ಕಾರ್ಯನಿರ್ವಹಿಸುತ್ತಿಲ್ಲ. ಆದರೆ 29 ಬಾರಿ ವಿಶ್ವ ಚಾಂಪಿಯನ್, (6 ಈಜು, 23 ಸೈಕ್ಲಿಂಗ್), 21 ಬಾರಿ ಯೂರೋಪಿಯನ್ ಚಾಂಪಿಯನ್ (18 ಈಜು, 3 ಸೈಕ್ಲಿಂಗ್), 75 ವಿವಿಧ ದಾಖಲೆಗಳು!. 9 ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಿಕೆ, ಅದರಲ್ಲಿ ಒಟ್ಟು 28 ಪದಕಗಳು, 18 ಚಿನ್ನದ ಪದಕಗಳು.! 19 ವರ್ಷ ಪೂರ್ಣಗೊಳ್ಳುವುದಕ್ಕೆ ಮೊದಲೇ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನದ ಪದಕಗಳನ್ನು ಗೆದ್ದ ಸಾಧಕಿ. ಮಾಜಿ ಪ್ಯಾರಾಲಂಪಿಯನ್ನರಾದ ಅಮೆರಿಕದ ತ್ರಿಚಾ ಝೊರ್ನ್, (ಈಜಿನಲ್ಲಿ 55 ಪದಕ, 41 ಚಿನ್ನ), ಫ್ರಾನ್ಸ್‌ನ ಬೆಟ್ರೀಸ್ ಹೆಸ್ (ಈಜಿನಲ್ಲಿ 25 ಪದಕ, 20 ಚಿನ್ನ,) ಕೆನಡಾದ ಮೈಕಲ್ ಎಡ್ಜ್‌ಸನ್ (21 ಪದಕ, 18 ಚಿನ್ನ) ಸಾಧನೆ ಮಾಡಿದ ಇತರ ಪ್ಯಾರಾಲಿಂಪಿಯನ್ನರು. ಪ್ಯಾರಾಲಿಂಪಿಕ್ಸ್ ಈಜು ಮತ್ತು ಸೈಕ್ಲಿಂಗ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಸಹ್ರಾ ಸಾಮಾನ್ಯರೊಂದಿಗೆ ಸೈಕ್ಲಿಂಗ್‌ನಲ್ಲಿ ಸ್ಪರ್ಧಿಸುತ್ತಿದ್ದಳು. ಅಲ್ಲಿಯೂ 600 ಮೀ ಅಂತರದಲ್ಲಿ ವಿಶ್ವ ದಾಖಲೆಯಿಂದ ವಂಚಿತರಾಗಿದ್ದರು.
ಈಜುಗಾರ್ತಿಯಾಗಿ ಪ್ಯಾರಾಲಿಂಪಿಕ್ಸ್‌ಗೆ ಸಹ್ರಾ ಕಾಲಿಟ್ಟಿದ್ದು, ತನ್ನ 14ನೇ ವಯಸ್ಸಿನಲ್ಲಿ 1992ರ ಬಾರ್ಸಿಲೋನಾ ಪ್ಯಾರಾಲಿಂಪಿಕ್ಸ್‌ನಲ್ಲಿ ಸಹ್ರಾ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲೇ ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದರು. ಅನಾರೋಗ್ಯದ ಕಾರಣ ಸ್ಪರ್ಧೆಯಿಂದ ಹೊರಗೆ ಉಳಿದಿದ್ದರೂ ಪ್ಯಾರಾಲಿಂಪಿಕ್ಸ್ ಮಾತ್ರ ತಪ್ಪಿಸಿಕೊಂಡಿರಲಿಲ್ಲ.
ಸಾಮಾನ್ಯರೊಂದಿಗೂ ಸ್ಪರ್ಧೆ: ಈಜಿನಲ್ಲಿ ಯಶಸ್ಸು ಕಂಡ ಬಳಿಕ ಸಹ್ರಾ ಸೈಕ್ಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಭಾರತದಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬ್ರಿಟನ್ ಸೈಕ್ಲಿಂಗ್ ತಂಡವನ್ನು ಪ್ರತಿನಿಧಿಸಿದ್ದ ಸಹ್ರಾ, ಸಾಮಾನ್ಯರೊಂದಿಗೆ ಸ್ಪರ್ಧಿಸಿದ ಇಂಗ್ಲೆಂಡ್‌ನ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಪ್ಯಾರಾಲಿಂಪಿಕ್ಸ್‌ನ ರೋಡ್ ಸೈಕ್ಲಿಂಗ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಸಹ್ರಾ ಸತತ ಐದು ಒಲಿಂಪಿಕ್ಸ್‌ಗಳಲ್ಲಿ ಈ ವಿಭಾಗದಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಈ ಎಲ್ಲ ಸಾಧನೆಗಳ ನಡುವೆಯೂ ಸಹ್ರಾ ಇಂಗ್ಲೆಂಡ್ ಲಾಂಕಾಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.