Thursday, March 28, 2024

ಅಂತಾರಾಷ್ಟ್ರೀಯ ಹಾಕಿಗೆ ಸರ್ದಾರ್ ವಿದಾಯ

ಸ್ಪೋರ್ಟ್ಸ್ ಮೇಲ್ ವರದಿ

ಕಳೆದ 12 ವರ್ಷಗಳಿಂದ ಭಾರತ ಹಾಕಿಗೆ ತನ್ನದೇ ಆದ ಕೊಡುಗೆ ನೀಡಿರುವ ಸರ್ದಾರ್ ಸಿಂಗ್ ಬುಧವಾರ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ.

ಟೊಕಿಯೋ ಒಲಿಂಪಿಕ್ಸ್ ಗಮನದಲ್ಲಿರಿಸಿಕೊಂಡು ಹಾಕಿ ಇಂಡಿಯಾ ೨೫ ಆಟಗಾರರನ್ನೊಳಗೊಂಡ ಕೋರ್ ಗ್ರೂಪ್ ತಂಡವನ್ನು ಬುಧವಾರ ಪ್ರಕಟಿಸಿದ್ದ, ಅದರಲ್ಲಿ ಸರ್ದಾರ್ ಅವರ ಹೆಸರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ದಾರ್ ವಿದಾಯದ ಘೋಷಣೆ ಮಾಡಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಕಳಪೆ ಪ್ರದರ್ಶನ ತೋರಿ ಕಂಚಿಗೆ ತೃಪ್ತಿಪಟ್ಟಿತ್ತು, ಈ ಹಿನ್ನೆಲೆಯಲ್ಲಿ ೩೨ ವರ್ಷದ ಸರ್ದಾರ್ ಸಿಂಗ್ ವಿದಾಯ ಹೇಳಿರುವುದಾಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಹೌದು, ಅಂತಾರಾಷ್ಟ್ರೀಯ ಹಾಕಿಗೆ ನಾನು ವಿದಾಯ ಹೇಳುತ್ತಿದ್ದೇನೆ. ೧೨ ವರ್ಷಗಳ  ಕಾಲ ಹಾಕಿ ಆಡಿದ್ದು ಸಾಕೆನಿಸಿದೆ. ಮುಂದಿನ ಪೀಳಿಗೆ ಆಟವನ್ನು ಮುಂದುವರಿಸಲಿ,‘ ಎಂದು ಸರ್ದಾರ್ ಹೇಳಿದ್ದಾರೆ.
‘ಚಂಡೀಗಢದಲ್ಲಿರುವ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿರುವೆ. ಹಾಕಿ ಇಂಡಿಯಾ ಹಾಗೂ ಗೆಳೆಯರೊಂದಿಗೂ ಚರ್ಚಿಸಿ ಈ ತೀರ್ಮಾನಕ್ಕೆ ಬಂದಿರುವೆ. ಹಾಕಿ ಆಚೆಗಿನ ಬದುಕಿನ ಬಗ್ಗೆ ಯೋಚಿಸಲು ಇದು ಸೂಕ್ತ ಕಾಲ,‘ ಎಂದರು.
ಹಾಕಿ ಇಂಡಿಯಾ ೨೫ ಆಟಗಾರರ ಕೋರ್ ಗ್ರೂಪ್ ಪ್ರಕಟಿಸುತ್ತಿದ್ದಂತೆ ಸರ್ದಾರ್ ತಮ್ಮ ತೀರ್ಮಾನನ್ನು ಪ್ರಕಟಿಸಿದರು. ಆ ಗುಂಪಿನಲ್ಲಿ ಅನುಭವಿ ಆಟಗಾರನನ್ನು ಕೈ ಬಿಟ್ಟಿದ್ದೇ ಈ ತೀರ್ಮಾನಕ್ಕೆ ಕಾರಣ ಎನ್ನಲಾಗುತ್ತಿದೆ. ಏಷ್ಯನ್ ಗೇಮ್ಸ್ ಸಂದರ್ಭದಲ್ಲಿ  ಸರ್ದಾರ್ ಸಿಂಗ್ ೨೦೨೦ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಆಡುವ ಆಶವನ್ನು ವ್ಯಕ್ತಪಡಿಸಿದ್ದರು. ಟೊಕಿಯೋ ಒಲಿಂಪಿಕ್ಸ್ ಶಿಬಿರಕ್ಕಾಗಿ ೨೫ ಆಟಗಾರರ ಹೆಸರನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸರ್ದಾರ್ ಶುಕ್ರವಾರ ನಿವೃತ್ತಿಯನ್ನು ದಿಲ್ಲಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
೨೦೦೬ರಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಹಾಕಿಗೆ ಕಾಲಿಟ್ಟ ಮಿಡ್‌ಫೀಲ್ಡರ್ ಸರ್ದಾರ್ ಇದುವರೆಗೂ ೩೫೦ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ೨೦೦೮ ರಿಂದ ೨೦೧೬ರವರೆಗೆ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದರು. ೨೦೦೮ರಲ್ಲಿ ಸುಲ್ತಾನ್ ಅಜ್ಲಾನ್ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಆಟಕಗಾರನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

Related Articles