ಕರುಣ್ ನಾಯರ್ ಬಗ್ಗೆ ಮಾತನಾಡುವ ಯೋಗ್ಯತೆ ಗಿಲ್‌ಗೆ ಇಲ್ಲ
ಬೆಂಗಳೂರು: ಕೆಲವು ಆಟಗಾರರಿಗೆ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಗೆ ಯಾಕೆ ಕಳುಹಿಸುತ್ತಾರೆಂಬುದೇ ಗೊತ್ತಿಲ್ಲ. ಅವರಲ್ಲಿ ಒಬ್ಬರು. ಭಾರತ ಏಕದಿನ ತಂಡದ ಉಪನಾಯಕ ಶುಭ್ಮನ್ ಗಿಲ್. ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡುತ್ತ ಗಿಲ್ ಕರ್ನಾಟಕದ ಆಟಗಾರ, ವಿದರ್ಭ ತಂಡದ ನಾಯಕ ಕರುಣ್ ನಾಯರ್ ಸಾಧನೆಯ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. Shubman Gill, you have no caliber to talk about Karun Nair.
ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಸೋತು ಕಂಗಾಲಾದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿ ಘನತೆ ಕಾಯ್ದುಕೊಂಡ ಗಿಲ್, ಪತ್ರಿಕಾಗೋಷ್ಠಿಯಲ್ಲಿ ಕರುಣ್ ನಾಯರ್ ಅವರನ್ನು ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದಾಗ, “ಕರುಣ್ ವಿಜಯ ಹಜಾರೆ ಟ್ರೋಫಿಯಲ್ಲಿ ಉತ್ತಮವಾಗಿ ಆಡಿದ್ದಾರೆ ನಿಜ, ಹಾಗಂದ ಮಾತ್ರಕ್ಕೆ ತಂಡದಲ್ಲಿ ಇರುವ ಇತರ ಆಟಗಾರರನ್ನು ಕೈಬಿಡಬೇಕೆಂದಿಲ್ಲ, ಅವರು ಈ ಹಂತ ತಲುಪಬೇಕಾದರೆ ಉತ್ತಮ ಪ್ರದರ್ಶನ ತೋರಿಯೇ ಬಂದಿದ್ದಾರೆ,” ಎಂದು ಬಹಳ ಹಗುರವಾಗಿ ಮಾತನಾಡಿದ್ದಾರೆ.
ಇಂಥ ಪ್ರಶ್ನೆಗಳಿಗೆ ಗಿಲ್ ಉಡಾಫೆಯ ಉತ್ತರ ನೀಡುವ ಬದಲು, “ಅದು ಆಯ್ಕೆ ಸಮಿತಿಗೆ ಬಿಟ್ಟಿದ್ದು” ಎಂದು ಹೇಳಬಹುದಾಗಿತ್ತು. ಇಡೀ ತಂಡವನ್ನು ತಾನೇ ನಿಭಾಯಿಸುವ ಬಗ್ಗೆ ಮಾತನಾಡಿರುವುದು ಅವರ ಕ್ರೀಡಾಸ್ಫೂರ್ತಿಗೆ ತಕ್ಕುದಾದುದಲ್ಲ. ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್‌ಗೆ ಔಟಾಗಿ ಪೆವಿಲಿಯನ್ ಸೇರಿದ್ದ ಗಿಲ್, ಚಿನ್ನಸ್ವಾಮಿ ಅಂಗಣದಲ್ಲಿ ಡಲ್ ಆಗಿದ್ದರು.
“ನಾವು ವಿಶ್ವಕಪ್‌ನಲ್ಲಿ ಸೋತಿದ್ದು ಕೇವಲ ಒಂದು ಪಂದ್ಯದಲ್ಲಿ. ತಂಡದಲ್ಲಿರುವ ಆಟಗಾಋರು ಉತ್ತಮ ಪ್ರದರ್ಶನ ತೋರಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದರೂ ಅಂಥ ಆಟಗಾರರನ್ನು ಆಯ್ಕೆ ಮಾಡಿಲ್ಲವೆಂದರೆ ಅದು ಅವರ ದುರಾದೃಷ್ಟ. ನಿರಂತರವಾಗಿ ಆಟಗಾರರನ್ನು ಬದಲಾಯಿಸುವುದರಿಂದ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದದೆ,” ಎಂದು ಗಿಲ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೆಲಿಫೋನ್ ನಂಬರ್ ರೀತಿಯಲ್ಲಿ ರನ್ ಗಳಿಸಿರುವ ಗಿಲ್ ಅವರನ್ನು ಭವಿಷ್ಯದ ನಾಯಕ ಎಂದು ಉಪನಾಯಕನ ಹುದ್ದೆ ನೀಡಿದ್ದಾರೆ. ಆದರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಆಟಗಾರರ ಬಗ್ಗೆ ಹಗುರವಾಗಿ ಮಾತನಾಡಬಾರದಿತ್ತು. ಅದೇ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮೂರು ಬಾರಿ ಶೂನ್ಯ ಸೇರಿದಂತೆ ಒಂದು ಎರಡು ಬಾಳೆಲೆ ಹರಡು..ಮೂರು ನಾಕು ಅನ್ನ ಹಾಕು… ಎಂಬಂತೆ ರನ್ ಗಳಿಸಿದ್ದಾರಲ್ಲ ಇವರ ಬಗ್ಗೆ ಗಿಲ್ ಏನು ಹೇಳುತ್ತಾರೆ?
ಸಚಿನ್ ತೆಂಡೂಲ್ಕರ್ ಅವರ ಮಗಳನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಗಿಲ್‌ಗೆ ಮಣೆ ಹಾಕುತ್ತಿದ್ದಾರೆಯೇ ಹೊರತು ಉತ್ತಮವಾಗಿ ಆಡಿದ್ದಾರೆಂಬ ಕಾರಣಕ್ಕಾಗಿ ಅಲ್ಲ. ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ಗಿಲ್ ಗಳಿಸಿದ ರನ್ ಎಷ್ಟೆಂಬುದನ್ನು ದಾಖಲೆಗಳು ಹೇಳುತ್ತಿವೆ. ಶ್ರೀಲಂಕಾ ವಿರುದ್ಧವೇ ರನ್ ಗಳಿಸಲಾಗದ ಈ ಆಟಗಾರ ಒಬ್ಬ ಉತ್ತಮ ಆಟಗಾರನ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯಾ ಎಂಬುದನ್ನು ನೋಡಿಕೊಳ್ಳಬೇಕು. ಇತರ ಆಟಗಾರರನ್ನು ಹೊಗಳುವುದು, ಆಯ್ಕೆ ಸಮಿತಿಯನ್ನು ಸಮರ್ಥಿಸಿಕೊಳ್ಳುವುದು ನಾಯಕತ್ವದ ಲಕ್ಷಣವಲ್ಲ. ಅದು ಸರಳ ಭಾಷೆಯಲ್ಲಿ ಬಕೆಟ್ ಹಿಡಿಯುವುದು ಎನ್ನುತ್ತಾರೆ. ಉತ್ತರ ಭಾರತದ ಲಾಬಿಗಳು ಇಂಥ ಎಳಸು ಆಟಗಾರರಿಗೆ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವಂತೆ ಮಾಡುತ್ತದೆ. ನೋಡೋಣ ಗಿಲ್ ಉಪನಾಯಕನಾಗಿ ಅದೆಷ್ಟು ರನ್ ಗಳಿಸುತ್ತಾರೆಂದು..