ಹೊಸದಿಲ್ಲಿ: ಭಾರತದ ಲಿಯಾಂಡರ್ ಪೇಸ್ ಮತ್ತು ವೆಸ್ ಪೇಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಏಕೈಕ ತಂದೆ ಮತ್ತು ಮಗ. ಅದೇ ರೀತಿ ಒಲಿಂಪಿಕ್ಸ್‌ನಲ್ಲಿ ಸಹೋದರರು, ಸಹೋದರಿಯರು, ಅಪ್ಪ-ಮಗ, ಅವಳಿ ಜವಳಿ, ಪತಿ-ಪತ್ನಿ, ತಂದೆ-ಮಗಳು, ತಾಯಿ-ಮಗಳು ಪದಕ ಗೆದ್ದ ಕುತೂಹಲದ ಸಂಗತಿಗಳಿವೆ. ಇಲ್ಲಿ ಕೆಲವು ನಿದರ್ಶನಗಳನ್ನು ನೀಡಲಾಗಿದೆ, Sisters brothers father and son mother and daughter twins at Olympics.
ಒಡಹುಟ್ಟಿದವರು: 1908ರ ಒಲಿಂಪಿಕ್ಸ್‌ನಲ್ಲಿ ವಿಲಿಯಮ್ ಡಾಡ್ ಮತ್ತು ಅವರ ಸಹೋದರಿ ಚಾರ್ಲೊಟೆ ಡಾಡ್ ಆರ್ಚರಿಯಲ್ಲಿ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಸಹೋದರ ಸಹೋದರಿ ಎನಿಸಿದ್ದಾರೆ. 1936ರ ಒಲಿಂಪಿಕ್ಸ್‌ನಲ್ಲಿ ಗಾಡ್‌ಫ್ರೆ ಬ್ರೌನ್ ಓಟದಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದರೆ ಅದೇ ದಿನ ಅವರ ಸಹೋದರಿ 100ಮೀ ಓಟದಲ್ಲಿ ಬೆಳ್ಳಿ ಗೆದ್ದರು. ಕೀನ್ಯಾದ ದೂರದ ಓಟಗಾರ ಬೆರ್ನಾರ್ಡ್ ಲಾಗಟ್ ಐದು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅವರ ಸಹೋದರಿ ವಿಯೊಲಾ ಲಾಗಟ್ ಕೂಡ ಮ್ಯಾರಥನ್‌ನಲ್ಲಿ ಪಾಲ್ಗೊಂಡರು. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಪಾನಿನ ಸಹೋದರಿಯರಾದ ವುಟಾ ಅಬೆ ಹಾಗೂ ಹಿಫುಮಿ ಅಬೆ ಜೂಡೋದಲ್ಲಿ ಚಿನ್ನಗೆದ್ದಿದ್ದಾರೆ.
ಸಹೋದರರು: 1896ರ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಸಹೋದರರಾದ ಜಾನ್ ಮತ್ತು ಸಮ್ಮರ್ ಪೇನ್ ಶೂಟಿಂಗ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಸಹೋದರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1912ರ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್‌ನ ಮೂವರು ಸಹೋದರರು ಅಮೆಡೆ, ಗ್ಯಾಟ್ಸನ್ ಮತ್ತು ಜಾಕ್ಸ್ ಥುಬೆ ಯಾಚಿಂಗ್‌ನಲ್ಲಿ ಜಯ ಗಳಿಸಿ ಪದಕ ಗೆದ್ದಿದ್ದಾರೆ.
ಇಟಲಿಯ ಆಲ್ಡೋ ಮತ್ತು ನೆಡೋ ನಾಡಿ ಫೆನ್ಸಿಂಗ್‌ನಲ್ಲಿ ಒಂದಾಗಿ ಒಟ್ಟು 9 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ. ಒಂದು ಬಾರಿ ಆಲ್ಡೋ ಫೈನಲ್‌ನಲ್ಲಿ ನೆಡೋ ವಿರುದ್ಧ ಸೋತಿದ್ದ. (1912 & 1920ರ ಒಲಿಂಪಿಕ್ಸ್‌ನಲ್ಲಿ).
1968ರ ಒಲಿಂಪಿಕ್ಸ್‌ನ ಸೈಲಿಂಗ್ ವಿಭಾಗದಲ್ಲಿ ಸ್ವೀಡನ್‌ನ ಅಲ್ಫ್, ಪೀಟರ್ ಮತ್ತು ಜಾರ್ಗನ್ ಸಂಡೆಲಿನ್ ಚಿನ್ನದ ಪದಕ ಗೆದ್ದರು. ಇದೇ ಒಲಿಂಪಿಕ್ಸ್‌ನ ಸೈಕ್ಲಿಂಗ್‌ನಲ್ಲಿ ಸ್ವೀಡನ್‌ನ ತಂಡ ಎರಿಕ್, ಗೋಸ್ಟಾ, ಸ್ಟ್ರು ಥಾಮಸ್ ಪಿಟರ್ಸನ್ ಎಂಬ ಸಹೋದರರಿಂದ ಕೂಡಿತ್ತು. ಈ ತಂಡ ಚಿನ್ನ ಗೆದ್ದಿತ್ತು. 1964ರ ಒಲಿಂಪಿಕ್ಸ್‌ನಲ್ಲೂ ತಂಡದಲ್ಲಿ ಈ ನಾಲ್ವರು ಸಹೋದರರಲ್ಲಿ ಮೂವರಿದ್ದು, ಕಂಚಿನ ಪದಕ ಗೆದ್ದಿತ್ತು.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬ್ರಿಟನ್‌ನ ಅಲಿಸ್ಟರ್ ಬ್ರೌನ್‌ಲೀ ಮತ್ತು ಅವರ ಕಿರಿಯ ಸಹೋದರ ಜಾನಿ ಬ್ರೌನ್‌ಲೀ ಪುರುಷರ ಟ್ರಯಥ್ಲಾನ್‌ನಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಈ ಸಹೋದರರು ಮೊದಲ ಮತ್ತು ಮೂರನೇ ಸ್ಥಾನ ಗಳಿಸಿದ್ದರು.
2016ರ ಒಲಿಂಪಿಕ್ಸ್‌ನಲ್ಲಿ ಜರ್ಮನಿಯ ಕ್ರಿಸ್ಟೋಫರ್ ಹಾರ್ಟಿಂಗ್ ಪುರುಷರ ಡಿಸ್ಕಸ್‌ನಲ್ಲಿ ಚಿನ್ನ ಗೆದ್ದಿದ್ದರು, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರ ಸಹೋದರ ರಾಬರ್ಟ್ ಹಾರ್ಟಿಂಗ್ ಚಿನ್ನ ಗೆದ್ದಿದ್ದರು. ಕ್ರೊಯೇಷಿಯಾದ ಸಹೋದರರಾದ ಮಾರ್ಟಿನ್ ಮತ್ತು ವಾಲೆಂಟ್ ಸಿಂಕೋವಿಕ್ ರೋಯಿಂಗ್‌ನಲ್ಲಿ 2012ರಲ್ಲಿ ಬೆಳ್ಳಿ, 2016ರಲ್ಲಿ ಚಿನ್ನ, ಟೋಕಿಯೋದಲ್ಲಿ ಚಿನ್ನ ಹಾಗೂ ಈಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸುತ್ತಿದ್ದಾರೆ.
ಅವಳಿ ಜವಳಿ: 1912ರ ಒಲಿಂಪಿಕ್ಸ್‌ನಲ್ಲಿ ಸ್ವೀಡನ್‌ನ ಸಹೋದರರಾದ ವಿಲ್‌ಹೆಲ್ಮ್ ಕಾರ್ಲ್‌ಬರ್ಗ್ (3 ಚಿನ್ನ), ಮತ್ತು ಎರಿಕ್ ಕಾರ್ಲ್‌ಬರ್ಗ್ (2 ಚಿನ್ನ) ಚಿನ್ನದ ಸಾಧನೆ ಮಾಡುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಅವಳಿ ಸಹೋದರರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
1980ರ ಮಾಸ್ಕೋ ಒಲಿಂಪಿಕ್ಸ್‌ನ ರೋಯಿಂಗ್‌ನಲ್ಲಿ ಪೂರ್ವ ಜರ್ಮನಿಯ ತದ್ರೂಪಿ ಅವಳಿ ಬರ್ನ್ಡ್ ಮತ್ತು ಜಾರ್ಗ್ ಲಾಂಗ್‌ವೈಟ್ ಚಿನ್ನ ಗೆದ್ದರೆ, ಸೋವಿಯತ್ ಯೂನಿಯನ್‌ನ ನಿಕೊಲಾಯ್ ಮತ್ತು ಯೂರಿ ಪಿಮೆನೊವ್ ಜೋಡಿ ಚಿನ್ನ ಗೆದ್ದರು. 2004 ಹಾಗೂ 2008ರ ಒಲಿಂಪಿಕ್ಸ್‌ನಲ್ಲಿ ತದ್ರೂಪಿ ಅವಳಿ ಜಾರ್ಜಿನಾ ಎರ್ಲ್ ಮತ್ತು ಕರೋಲಿನ್ ಮೆಯರ್ ರೋಯಿಂಗ್ ಡಬಲ್ ಸ್ಕಲ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.
ಎಸ್ಟೋನಿಯಾದ ತ್ರಿವಳಿಗಳಾದ ಲೈಲಾ, ಲೈನಾ ಮತ್ತು ಲಿಲೀ ಲೂಕ್ ರಿಯೋ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಒಲಿಂಪಿಕ್ಸ್ ಇತಿಹಾಸಲ್ಲೇ ಸ್ಪರ್ಧೆ ಮಾಡಿದ ಮೊದಲ ತ್ರಿವಳಿಗಳೆನಿಸಿದರು. ಜರ್ಮನಿ ಅವಳಿ ಅನ್ನಾ ಹ್ಯಾನ್ನರ್ ಮತ್ತು ಲೀಸಾ ಹ್ಯಾನ್ನರ್ ಕೈ ಕೈ ಹಿಡಿದು ಮ್ಯಾರಥಾನ್ ಪೂರ್ಣಗೊಳಿಸಿ 81 & 82ನೇ ಸ್ಥಾನ ಗಳಿಸಿದರು. ಕೊರಿಯಾದ ಅವಳಿ ಕಿಮ್ ಹೇಯ್ ಸಾಂಗ್ ಮತ್ತು ಕಿಮ್ ಹೇಯ್ ಗ್ಯಾಂಗ್ ಒಂದಾಗಿ ಪೂರ್ಣಗೊಳಿಸಿ 10 ಮತ್ತು 11ನೇ ಸ್ಥಾನ ಗಳಿಸಿದರು. ಟ್ಯೂನಿಷಿಯಾದ ಇಯಾ ಗ್ಯೂಝ್ ಗ್ಯೂಝ್ ಮತ್ತು ಸಾರ್ರಾ ಗ್ಯೂಝ್ ಗ್ಯೂಝ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅತ್ಯಂತ ಕಿರಿಯ ಮಹಿಳಾ ಅವಳಿ ಎಂಬ ದಾಖಲೆ ಬರೆದಿದ್ದಾರೆ.
ತಾಯಿ ಮತ್ತು ಮಗ: ಜಾರ್ಜಿಯಾದ ನಿನೋ ಸಲುಕ್ವೇಜ್ ಸತತ 10 ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಪದಕ ಗೆದ್ದ ಮಹಿಳಾ ಶೂಟರ್. ಆಕೆಯ ಮಗ ಸೋತ್ನೆ ಮಚವಾರಿಯಾನಿ 2016ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ. ಇದರಿಂದಾಗಿ ತಾಯಿ ಮತ್ತು ಮಗ ಒಂದಾಗಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಹೊಸ ದಾಖಲೆ ನಿರ್ಮಾಣವಾಯಿತು.
ತಾಯಿ ಮತ್ತು ಮಗಳು: 1900ರ ಒಲಿಂಪಿಕ್ಸ್‌ನ ಗಾಲ್ಫ್ ವಿಭಾಗದಲ್ಲಿ ತಾಯಿ ಮತ್ತು ಮಗಳು ಪಾಲ್ಗೊಂಡ ದಾಖಲೆ ನಿರ್ಮಾಣವಾಯಿತು. ಅಮೆರಿದಕ ಮಾರ್ಗರೆಟ್ ಅಬೋಟ್ ಮತ್ತು ಮೇರಿ ಅಬೋಟ್. ಮಗಳು ಮಾರ್ಗರೆಟ್ ಅಬೋಟ್ ಚಿನ್ನ ಗೆದ್ದರು. 1908ರ ಒಲಿಂಪಿಕ್ಸ್‌ನ ಆರ್ಚರಿಯಲ್ಲಿ ಇಂಗ್ಲೆಂಡ್‌ನ ಜೆಸ್ಸಿ ಮತ್ತು ಬ್ರೆಂಡಾ ವಾಡ್ವರ್ಥ್ ತಾಯಿ ಮಗಳು ಸ್ಪರ್ಧಿಸಿದರು.
ತಂದೆ ಮತ್ತು ಮಗ: ಸ್ವೀಡನ್‌ನ ಆಸ್ಕರ್ ಸ್ವಾಹನ್ ಮತ್ತು ಅವರ ಮಗ ಅಲ್ಫ್ರೆಡ್ ಸ್ವಾಹನ್ 1912, 1920, &1924ರ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಒಂದಾಗಿ ಸ್ಪರ್ಧಿಸಿದ್ದರು.
ಅಮೆರಿದಕ ಜಾಕ್ ಕೆಲ್ಲಿ (1920) ಮತ್ತು ಅವರ ಮಗ ಜಾಕ್ ಜೂನಿಯರ್ ಕೆಲ್ಲಿ (1956) ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. 1924ರ ಒಲಿಂಪಿಕ್ಸ್‌ನಲ್ಲಿ ಕೆನಡದ ವಿಲಿಯಮ್ ಬಾರ್ನೆಸ್ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಅವರ ಮಗ ರೋಲ್ಫ್ ಬಾರ್ನೆಸ್ ಅದೇ ಒಲಿಂಪಿಕ್ಸ್‌ನಲ್ಲಿ 1500 ಮೀ. ಓಟದಲ್ಲಿ ಸ್ಪರ್ಧಿಸಿದ್ದರು. ಫಿಜಿಯ ಕೊಲಿನ್ ಫಿಲಿಪ್ ಸೀನಿಯರ್ ತನ್ನ ಮಗ ಟೋನಿ ಫಿಲಿಪ್ ಜೊತೆಗೂಡಿ ಸೈಲಿಂಗ್‌ನಲ್ಲಿ ಸ್ಪರ್ಧಿಸಿದ್ದರು. ಅಮೆರಿದಕ ಚಾರ್ಲೆ ಜೆಂಕಿನ್ಸ್ 1956ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. 36 ವರ್ಷಗಳ ನಂತರ ಅವರ ಮಗ ಚಾರ್ಲ್ಸ್ ಚಿಪ್ ಜೆಂಕಿನ್ಸ್ ರಿಲೇಯಲ್ಲಿ ಚಿನ್ನ ಗೆದ್ದರು. ಇದು ಒಂದೇ ವಿಭಾಗದ ಸ್ಪರ್ಧೆಯಲ್ಲಿ ತಂದೆ ಮತ್ತು ಮಗ ಚಿನ್ನ ಗೆದ್ದಿರುವುದು ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲು. 1984ರ ಒಲಿಂಪಿಕ್ಸ್‌ನಲ್ಲಿ ನೆದರ್ಲೆಂಡ್ಸ್‌ನ ವಿಲಿಯಮ್ ಎರ್ಲ್ ಬುಕಾನ್ ಮತ್ತು ಅವರ ಮಗ ವಿಲಿಯಮ್ ಕಾರ್ಲ್ ಬುಕಾನ್ ಸೈಲಿಂಗ್‌ನಲ್ಲಿ ಚಿನ್ನ ಗೆದ್ದಿದ್ದರು. ಅಜ್ಜ, ಅಪ್ಪ ಮತ್ತು ಮಗ ಒಲಿಂಪಿಕ್ಸ್ ಪದಕ ಗೆದ್ದಿರುವ ಇತಿಹಾಸವೂ ಇದೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಆಂಡ್ರೆಸ್ ಕೆಲ್ಲರ್ ಜರ್ಮನಿ ಹಾಕಿ ತಂಡದಲ್ಲಿ ಚಿನ್ನ ಗೆದ್ದರು. ಅವರ ತಂದೆ 1972ರ ಒಲಿಂಪಿಕ್ಸ್‌ನಲ್ಲಿ ತಂದೆ ಕಾರ್ಸ್ಟನ್ ಕೆಲ್ಲರ್ ಚಿನ್ನ ಗೆದ್ದಿದ್ದರು. 1936ರ ಒಲಿಂಪಿಕ್ಸ್‌ನಲ್ಲಿ ಅಜ್ಜ ಎರ್ವಿನ್ ಕೆಲ್ಲರ್ ಬೆಳ್ಳಿ ಗೆದ್ದಿದ್ದರು.
ತಂದೆ ಮತ್ತು ಮಗಳು: ಡೆನ್ಮಾರ್ಕ್‌ನ ಸೈಲರ್ಸ್ ಪೌಲ್ ಎಲ್ವೆಸ್ಟ್ರಾಮ್ ಮತ್ತು ಅವರ ಮಗಳು ಟ್ರೈನೆ ಎಲ್ವೆಸ್ಟ್ರಾಮ್ ಮೈರಾಲ್ಫ್ ಒಂದಾಗಿ 1984 &1988ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ನಾಲ್ಕು ಮತ್ತು ಹದಿನೈದನೇ ಸ್ಥಾನ ಗಳಿಸಿದ್ದರು. ಪೌಲ್ 1948-1960ರ ವರೆಗೆ ನಾಲ್ಕು ಬಾರಿ ಪದಕ ಗೆದ್ದಿದ್ದರು.
ಪತಿ ಪತ್ನಿ ಸ್ಪರ್ಧೆ: 1900ರ ಒಲಿಂಪಿಕ್ಸ್‌ನ ರೋಯಿಂಗ್‌ನಲ್ಲಿ ಸ್ವಿಜರ್ಲೆಂಡ್‌ನ ರಾಯಲ್ ಕುಟುಂಬದ ಕೌಂಟ್ ಹೆರ್ಮನ್ ಅಲೆಕ್ಸಾಂಡ್ರೆ ಡೆ ಪೌರ್ಟಲೆಸ್ ಮತ್ತು ಅವರ ಪತ್ನಿ ಕೌಂಟೆಸ್ ಹೆಲ್ನೆ ಡೆ ಪೌರ್ಟಲೆಸ್ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದರು. ಇಂಗ್ಲೆಂಡ್‌ನ ಪ್ರಿನ್ಸೆಸ್ ಅನ್ನೆ ಮತ್ತು ಕ್ಯಾಪ್ಟನ್ ಮಾರ್ಕ್ ಫಿಲಿಪ್ಸ್ ಇಂಗ್ಲೆಂಡ್‌ನ ಇಕ್ವೆಸ್ಟ್ರಿಯನ್ ತಂಡವನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದರು.