Sunday, September 8, 2024

ನ್ಯೂಜಿಲೆಂಡ್‌ ಅಥವಾ ದಕ್ಷಿಣ ಆಫ್ರಿಕಾ ವಿಶ್ವಕಪ್‌ ಗೆಲ್ಲಬೇಕು!

ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ಅಥವಾ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆಲ್ಲಬೇಕೆಂಬುದು ನೈಜ ಕ್ರಿಕೆಟ್‌ ಪ್ರೇಮಿಯ ಆಶಯ ಆಗಿರುತ್ತದೆ. ಏಕೆಂದರೆ ಎರಡು ರಾಷ್ಟ್ರಗಳು ಕ್ರಿಕೆಟ್‌ನಲ್ಲಿ ಸಾಗಿ ಬಂದ ಹಾದಿಯನ್ನು ಗಮನಿಸಿದಾಗ ಈ ರಾಷ್ಟ್ರಗಳಿಗೆ ಜಯದ ಅಗತ್ಯವಿದೆ ಅನಿಸುತ್ತದೆ. South Africa or New Zealand must won the world cup Cricket 2023.

ನ್ಯೂಜಿಲೆಂಡ್‌ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆರು ಬಾರಿ ಸೆಮಿಫೈನಲ್‌ ಹಾಗೂ ಎರಡು ಬಾರಿ ಫೈನಲ್‌ ಪ್ರವೇಶಿಸಿದೆ. ಎಷ್ಟೇ ಗೆದ್ದರೂ ಈ ತಂಡ ಸೆಮಿಫೈನಲ್‌ನಲ್ಲಿ ಸೋಲುತ್ತದೆ ಎಂಬುದು ಸಾಮಾನ್ಯ ಕ್ರಿಕೆಟ್‌ ಅಭಿಮಾನಿಯ ನಿಲುವು. ಆದರೆ ಎರಡು ಬಾರಿ ಸೆಮಿಫೈನಲ್‌ನಲ್ಲಿ ಸೋಲುವ ಕೆಟ್ಟ ಚಾಳಿಯನ್ನು ಬ್ರೇಕ್‌ ಮಾಡಿ ಫೈನಲ್‌ನಲ್ಲಿ ಸೋತಿದೆ. ಕಳೆದ ಎರಡು ವಿಶ್ವಕಪ್‌ (2015 ಮತ್ತು 2019) ಗಳಲ್ಲಿ ಫೈನಲ್‌ ತಲುಪಿ ಅತ್ಯಂತ ನಿರಾಸೆಯಿಂದ ಮನೆ ತಲುಪಿದ ತಂಡ ನ್ಯೂಜಿಲೆಂಡ್‌.  ಇಂಗ್ಲೆಂಡ್‌ ವಿರುದ್ಧ ಕಳೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲ್ಲುತ್ತದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಸ್ಕೋರ್‌ನಲ್ಲೂ ಸಮಬಲ, ಸೂಪರ್‌ ಓವರ್‌ನಲ್ಲೂ ಸಮಬಲ ಸಾಧಿಸಿದ ಕಾರಣ ಬೌಂಡರಿಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಪಟ್ಟ ಗೆದ್ದಿತು. ಆದರೆ ನಿಜವಾಗಿಯೂ ನ್ಯೂಜಿಲೆಂಡ್‌ ಚಾಂಪಿಯನ್‌ ಎಂಬುದನ್ನು ಕ್ರಿಕೆಟ್‌‌ ಜಗತ್ತು ಮರೆತಿಲ್ಲ.

ನ್ಯೂಜಿಲೆಂಡ್‌ ತಂಡದ ಇನ್ನೊಂದು ದುರಂತವೆಂದರೆ ವಿಶ್ವಕಪ್‌ನಲ್ಲಿ ಆತಿಥೇಯ ತಂಡದ ವಿರುದ್ಧ ಸೋಲು ಚಾಳಿ. 2011ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ರಾಷ್ಟ್ರಗಳಲ್ಲಿ ಒಂದಾಗಿರುವ ಶ್ರೀಲಂಕಾ ವಿರುದ್ಧ ಆತಿಥೇಯರ ನೆಲದಲ್ಲಿಯೇ ಸೋತಿತು. ಕೊಲಂಬೊದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೋತ ನ್ಯೂಜಿಲೆಂಡ್‌ ಫೈನಲ್‌ ತಲಪುವಲ್ಲಿ ವಿಫಲವಾಯಿತು. 2015ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯ ಆಸ್ಟ್ರೇಲಿಯಾ ಎದುರಾಳಿ. ಮೆಲ್ಬೋರ್ನ್‌ನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಲೆಂಡ್‌ ತಂಡ ಆಸೀಸ್‌ ವಿರುದ್ಧ 7 ವಿಕೆಟ್‌ ಅಂತರದಲ್ಲಿ ಸೋತು ಮತ್ತೊಮ್ಮೆ ಫೈನಲ್‌ನಿಂದ ವಂಚಿತವಾಯಿತು. ಇಲ್ಲಿಯೂ ಆತಿಥೇಯರ ಮನೆಯಂಗಣದಲ್ಲಿ ಸೋಲು. 2019ರಲ್ಲಿಯೂ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋಲು. ಇಲ್ಲಿಯೂ ಇಂಗ್ಲೆಂಡ್‌ ಆತಿಥ್ಯ. ಈಗ 2023 ಮತ್ತೊಮ್ಮೆ ಆತಿಥೇಯ ಭಾರತದ ನೆಲದಲ್ಲಿ ಸೆಮಿಫೈನಲ್‌ ಪಂದ್ಯ. ನ್ಯೂಜಿಲೆಂಡ್‌ ಮೂರು ಬಾರಿ ಆತಿಥೇಯರ ನೆಲದಲ್ಲಿ ಪ್ರಮುಖ ಹಂತದಲ್ಲಿ ಸೋಲುವ ಕೆಟ್ಟ ಚಾಳಿಯನ್ನು ದಾಟಿ ಬಂದಿದೆ. ಆದ್ದರಿಂದ ಈ ಬಾರಿ ಗೆಲ್ಲುವ ಸಾಧ್ಯತೆ ಇದೆ.

ಕ್ರಿಕೆಟ್‌ ಜಗತ್ತಿಗೆ ದಕ್ಷಿಣ ಆಫ್ರಿಕಾದ ಕೊಡುಗೆ ಅಪಾರ. ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಸೆಮಿಫೈನಲ್‌ ತಲುಪಿಯೂ ಸೋಲನುಭವಿಸಿದ ತಂಡ. ಈ ಬಾರಿ  ತನ್ನ ಚೋಕರ್ಸ್‌ ಪಟ್ಟವನ್ನು ಕಡಿದು ಹಾಕುವ ರೀತಿಯಲ್ಲಿ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸಿದೆ. ಆಸ್ಟ್ರೇಲಿಯಾ ವಿರುದ್ಧ 1999ರ ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಅಲನ್‌ ಡೊನಾಲ್ಡ್‌ ರನೌಟ್‌ ಮೂಲಕ ವಿಶ್ವಕಪ್‌ ಫೈನಲ್‌ ತಲಪುವ ಅವಕಾಶ ಕಳೆದುಕೊಂಡ ದಕ್ಷಿಣ ಆಫ್ರಿಕಾ ಈ ಬಾರಿ ಸೇಡು ತೀರಿಸಿಕೊಂಡರೆ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಲಿದೆ. ಕ್ರಿಕೆಟ್‌ ಜಗತ್ತು ಮತ್ತಷ್ಟು ವಿಸ್ತಾರವಾಗಬೇಕಾದರೆ ಈ ನ್ಯೂಜಿಲೆಂಡ್‌ ಅಥವಾ ದಕ್ಷಿಣ ಆಫ್ರಿಕಾ ವಿಶ್ವಕಪ್‌ ಗೆಲ್ಲಬೇಕು.

Related Articles