Thursday, November 21, 2024

ಟೆಸ್ಟ್‌ ಪಂದ್ಯವನ್ನೇ ಆಡದವನಿಗೆ ನಾಯಕನ ಪಟ್ಟ!

ಜೊಹಾನ್ಸ್‌ಬರ್ಗ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂರಾರು ಪಂದ್ಯಗಳನ್ನಾಡಿದವರಿಗೇ ನಾಯಕನ ಪಟ್ಟ ಸಿಗುವುದು ಕಷ್ಟ, ಅದರಲ್ಲೂ ಒಂದೂ ಟೆಸ್ಟ್‌ ಪಂದ್ಯವನ್ನಾಡದವರಿಗೆ ನಾಯಕನ ಪಟ್ಟ ಕೊಟ್ಟರೆ? ಹೌದು ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಇದುವರೆಗೂ ಒಂದೇ ಒಂದು ಟೆಸ್ಟ್‌ ಪಂದ್ಯವನ್ನಾಡದ ನೀಲ್‌ ಬ್ರಾಂಡ್‌ ಅವರಿಗೆ ಚೊಚ್ಚಲ ಪಂದ್ಯದಲ್ಲೇ ಟೆಸ್ಟ್‌ ತಂಡದ ನಾಯಕತ್ವ ನೀಡಿದೆ. South Africa’s Neil Brand will lead the country in debut test match.

ದಕ್ಷಿಣ ಆಫ್ರಿಕಾದ ಹೆಚ್ಚಿನ ಹಿರಿಯ ಆಟಗಾರರು ದಕ್ಷಿಣ ಆಫ್ರಿಕಾ 20 ಲೀಗ್‌ನಲ್ಲಿ ವಿವಿಧ ಫ್ರಾಂಚೈಸಿಗಳ ಪರ ಆಡುತ್ತಿರುವುದರಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಈ ತೀರ್ಮಾನವನ್ನು ಕೈಗೊಂಡಿದೆ. ಸುಮಾರು ಏಳು ಮಂದಿ ಆಟಗಾರರು ಚೊಚ್ಚಲ ಟೆಸ್ಟ್‌ ಪಂದ್ಯವನ್ನು ಆಡಲಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡದ 27 ವರ್ಷದ ಬ್ರಾಂಡ್‌ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.

51 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ಬ್ರಾಂಡ್‌ ಚೊಚ್ಚಲ ಪಂದ್ಯದಲ್ಲೇ ನಾಯಕತ್ವವನ್ನು ವಹಿಸಿದ ಕ್ರಿಕೆಟ್‌ ಜಗತ್ತಿನ 35ನೇ ಆಟಗಾರರೆನಿಸಿದ್ದಾರೆ. 1877ರಲ್ಲಿ ಜೇಮ್ಸ್‌ ಲಿಲ್ಲಿವೈಟ್‌ ಜೂನಿಯರ್‌ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಇಂಗ್ಲೆಂಡ್‌ ತಂಡವನ್ನು ಚೊಚ್ಚಲ ಪಂದ್ಯದಲ್ಲೇ ಮುನ್ನಡಿಸಿದ್ದರು. 1889ರಲ್ಲಿ ಓವೆನ್‌ ಡುನ್ನೆಲ್‌ ದಕ್ಷಿಣ ಆಫ್ರಿಕಾವನ್ನು, 1928ರಲ್ಲಿ ರಾಬರ್ಟ್‌ ಕಾರ್ಲ್‌ ನನ್ಸ್‌ ವೆಸ್ಟ್‌ಇಂಡೀಸ್‌ ತಂಡವನ್ನು, 1930 ರಲ್ಲಿ ಟಾಮ್‌ ಲಾರಿ ನ್ಯೂಜಿಲೆಂಡ್‌ ತಂಡವನ್ನು, 1932ರಲ್ಲಿ ಸಿ.ಕೆ. ನಾಯ್ಡು ಭಾರತವನ್ನು ಚೊಚ್ಚಲ ಪಂದ್ಯದಲ್ಲಿ ಮುನ್ನಡೆಸಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಆಯಾ ರಾಷ್ಟ್ರಗಳು ಮೊದಲ ಟೆಸ್ಟ್‌ ಪಂದ್ಯವನ್ನಾಡುವಾಗ ಚೊಚ್ಚಲ ಪಂದ್ಯದಲ್ಲೇ ದೇಶವನ್ನು ಮುನ್ನಡೆಸುವ ಸಂದರ್ಭ ಬಂದಿತ್ತು. ಆದರೆ 20ನೇ ಶತಮಾನದಲ್ಲಿ ಶ್ರೀಲಂಕಾದ ಬಂದುಲಾ ವರ್ಣಪುರ 1982ರಲ್ಲಿ ಶ್ರೀಲಂಕಾ ತಂಡದ ನಾಯಕತ್ವವನ್ನು ಚೊಚ್ಚಲ ಪಂದ್ಯದಲ್ಲೇ ವಹಿಸಿದ್ದರು. 1992ರಲ್ಲಿ ಜಿಂಬಾಬ್ವೆಯ ಡೇವಿಡ್‌ ಹಾಟನ್‌ ಜಿಂಬಾಬ್ವೆ ತಂಡವನ್ನು ಮೊದಲ ಪಂದ್ಯದಲ್ಲೇ ಮುನ್ನಡೆಸಿದ್ದರು.

21ನೇ ಶತಮಾನಕ್ಕೆ ಬಂದಾಗ, ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಆರಂಭಿಕ ಟೆಸ್ಟ್‌ ಪಂದ್ಯವನ್ನಾಡುವಾಗ ನೈಮೂರ್‌ ರೆಹಮಾನ್‌ (2000ದಲ್ಲಿ) ಬಾಂಗ್ಲಾ ತಂಡದ ನಾಯಕತ್ವನ್ನು ಚೊಚ್ಚಲ ಪಂದ್ಯದಲ್ಲೇ ವಹಿಸದ್ದರು. ದೇಶದ ಮೊದಲ ಟೆಸ್ಟ್‌ ಪಂದ್ಯವನ್ನಾಡುವಾಗ ಐರ್ಲೆಂಡ್‌ನ ವಿಲಿಯಮ್‌ ಫೋರ್ಟ್‌ಫೀಲ್ಡ್‌ ಮತ್ತು ಅಫಘಾನಿಸ್ತಾನದ ಅಸ್ಗರ್‌ ಅಫ್ಘಾನ್‌ 2018ರಲ್ಲಿ ಚೊಚ್ಚಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದರು.

ಚೊಚ್ಚಲ ಪಂದ್ಯದಲ್ಲೇ ಟೆಸ್ಟ್‌ ನಾಯಕತ್ವ ವಹಿಸುವುದು ಇತ್ತೀಚಿನ ವರ್ಷಗಳಲ್ಲಿ ವಿರಳ. ಮೇಲಿನ ಆಟಗಾರರ ಹೊರತಾಗಿ ಕಳೆದ ಐವತ್ತು ವರ್ಷಗಳಲ್ಲಿ ಚೊಚ್ಚಲ ಪಂದ್ಯದಲ್ಲೇ ನಾಯಕತ್ವ ವಹಿಸಿದವರಲ್ಲಿ ಬ್ರಾಂಡ್‌ ಎರಡನೇ ಆಟಗಾರೆನಿಸಿದ್ದಾರೆ. 1995ರಲ್ಲಿ ನ್ಯೂಜಿಲೆಂಡ್‌ನ ಲೀ ಜರ್ಮನ್‌ ಚೊಚ್ಚಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದರು.

Related Articles