Sunday, September 8, 2024

ಶುಕ್ರವಾರದಿಂದ ದಕ್ಷಿಣ ವಲಯ ಹಿರಿಯರ ಕ್ರಿಕೆಟ್‌

ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಫೈನಲ್‌ ತಲುಪಿದ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಈ ನಡುವೆ ದಕ್ಷಿಣ ಭಾರತದ ಹಿರಿಯ ಕ್ರಿಕೆಟಿಗರು ಬೆಂಗಳೂರಿನಲ್ಲಿ ಟಿ20 ಟೂರ್ನಿಯಾಡಲು ಸಜ್ಜಾಗಿದ್ದಾರೆ. ಕೆ.ಜಯರಾಮ ಮತ್ತು ಚೇತನ್‌ ಚೌಹಾನ್‌ ಸ್ಮಾರಕ ದಕ್ಷಿಣ ವಲಯ ಹಿರಿಯರ ಮೂರು ದಿನಗಳ ಟಿ20 ಕ್ರಿಕೆಟ್‌ ಟೂರ್ನಿ ಶುಕ್ರವಾರ ನಗರದ ಸಂಪ್ರಸಿದ್ಧಿ ಸ್ಪೋರ್ಟ್ಸ್‌ ಎಸ್ಟಾಡಿಯೋದಲ್ಲಿ ನಡೆಯಲಿದೆ. South Zone Veterans T20 cricket tournament gets underway at the Samprasiddhi Sports Estadio from Friday.

ದಕ್ಷಿಣ ಭಾರತದ ರಾಜ್ಯಗಳ ಹಿರಿಯ ಆಟಗಾರರು, ಭಾರತ ತಂಡದ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾದ ಪ್ರಮುಖ ಕ್ಲಬ್‌ಗಳು ಈ ಅಂಗಣದಲ್ಲಿ ಸ್ಥಳೀಯ ಕ್ಲಬ್‌ಗಳ ಜೊತೆ ಆಡಿ ಇಲ್ಲಿಯ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ.

ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ, ಸರ್ವಿಸಸ್‌, ಹೈದರಾಬಾದ್‌ ಮತ್ತು ಕರ್ನಾಟಕದ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿವೆ. ಎ ಗುಂಪಿನಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ತಂಡಗಳಿದ್ದು, ಬಿ ಗುಂಪಿನಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಸರ್ವಿಸಸ್‌ ತಂಡಗಳು ಸೇರಿವೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌‌ ಮತ್ತು ಫೈನಲ್‌ಗಾಗಿ ಸೆಣಸಲಿವೆ.

ಹಿಂದೆ ರಾಜ್ಯ ಮತ್ತು ರಾಷ್ಟ್ರಕ್ಕಾಗಿ ಆಡಿದ್ದ ಹಿರಿಯ ಆಟಗಾರರು ವಿವಿಧ ರಾಜ್ಯಗಳ ತಂಡದಲ್ಲಿದ್ದು ತಮ್ಮ ಹಿಂದಿನ ಆಟವನ್ನು ಮತ್ತೊಮ್ಮೆ ಪ್ರದರ್ಶಿಸಲು ಇದು ಉತ್ತಮ ಅವಕಾಶ. ಯುವ ಆಟಗಾರರಿಗೆ ಸ್ಫೂರ್ತಿ ತುಂಬಲು ಈ ಪಂದ್ಯ ಪ್ರಮುಖವೆನಿಸಿದೆ.  ಪ್ರತಿ ದಿನವೂ ಮೂರು ಪಂದ್ಯಗಳಿದ್ದು, ಪಂದ್ಯ ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಆರಂಭವಾಗುತ್ತದೆ. ಎರಡನೇ ಪಂದ್ಯ 11 ಗಂಟೆಗೆ ಹಾಗೂ ಮೂರನೇ ಪಂದ್ಯ ಅಪರಾಹ್ನ 2 ಗಂಟೆಗೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಮತ್ತು ಭಾರತದ ಮಾಜಿ ಆಟಗಾರರಾದ ಸದಾನಂದ ವಿಶ್ವನಾಥ್‌ ಹಾಗೂ ದೊಡ್ಡ ಗಣೇಶ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Related Articles