Friday, April 19, 2024

ರಾಜ್ಯಕ್ಕೆ ಕೀರ್ತಿ ತಂದ ಯೋಧ ಪರಸಪ್ಪ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಬದುಕಿನ ಓಟದಲ್ಲಿ ಸೋಲು-ಗೆಲುವು ಇದ್ದದ್ದೇ. ಅದೇ ರೀತಿ ಸ್ಪರ್ಧೆಯಲ್ಲಿ ಓಡುವಾಗಲೂ ಸೋಲು ಗೆಲುವು ಇದ್ದೇ ಇರುತ್ತದೆ. ಆದರೆ  ಕರ್ನಾಟದಕ ಯೋಧರೊಬ್ಬರು ಓಡಿದ ಓಟದಲ್ಲೆಲ್ಲ ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದುವರೆಗೂ ಐವತ್ತಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಈ ಓಟಗಾರನಲ್ಲಿ ಇರುವುದು ಒಂದು ಕಂಚಿನ ಪದಕ ಮಾತ್ರ, ಉಳಿದುದೆಲ್ಲವೂ ಚಿನ್ನ.

ನಾನು ಹೇಳ ಹೊರಟಿದ್ದು ವಿಜಯಪುರ ಜಿಲ್ಲೆಯ, ಕೋಲಾರ್ ತಾಲೂಕಿನ ಮಟ್ಟಿಹಾಳ ಗ್ರಾಮದ ಕೃಷಿ ಕುಟುಂಬ ವೀರ ಯೋಧ ಪರಸಪ್ಪ ಮಾದೇವಪ್ಪ ಹಾಜಿಲಾಲ್ ಅವರ ಕುರಿತು. ಕಳೆದೆರಡು ದಿನಗಳ ಹಿಂದೆ ಚಂಡೀಗಢದಲ್ಲಿ ನಡೆದ 55ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕರ್ನಾಟಕದ ಇನ್ನೋರ್ವ ಓಟಗಾರ್ತಿ ಪ್ರಿಯಾಂಕ ಮಡಿವಾಳಪ್ಪ 16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಕಷ್ಟಗಳ ನಡುವೆ ಅರಳಿದ ಪರಸಪ್ಪ ಚಿಕ್ಕಂದಿನಿಂದಲೂ ಓಟವನ್ನೇ ಬದುಕಾಗಿಸಿಕೊಂಡವರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 5 ಮತ್ತು 10 ಕಿ.ಮೀ ಓಟದಲ್ಲಿ ಮಿಂಚಿ, ಓಟದ ಕೋಟಾದಲ್ಲಿಯೇ ಸೇನೆಯನ್ನು ಸೇರಿ ಈಗ ಊಟಿಯಲ್ಲಿರುವ ಮದ್ರಾಸ್ ರೆಜಿಮೆಂಟ್ ಸೆಂಟರ್ –ವೆಲ್ಲಿಂಗ್ಟನ್ (Madras Regimental Centre Wellington) ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಒ. ಗುರುಪ್ರಕಾಶ್ ಮತ್ತು ಲೆಫ್ಟಿನೆಂಟ್ ಕರ್ನಲ್ ಹೇಮಂತ್ ರಾಜ್ ಅವರಲ್ಲಿ ತರಬೇತಿ ಪಡೆಯುತ್ತಿರು ಪರಸಪ್ಪ ಅವರನ್ನು ಒಬ್ಬ ಅಂತಾರಾಷ್ಟ್ರೀಯ ಓಟಗಾರರನ್ನಾಗಿ ರೂಪಿಸಿದ್ದಾರೆ. ಥಾಯ್ಲೆಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಾಸ್ ಕಂಟ್ರಿರೇಸ್ ಲ್ಲಿ ಪಾಲ್ಗೊಳ್ಳು ಪರಸಪ್ಪ ಆಯ್ಕೆಯಾಗಿದ್ದಾರೆ. ಅಲ್ಲದೆ ಸ್ಯಾಫ್ ಗೇಮ್ಸ್ ಗೂ ಆಯ್ಕೆಯಾಗಿರುತ್ತಾರೆ. ಕಾಲೇಜು ದಿನಗಳಲ್ಲೇ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪದಕ ಗೆಲ್ಲುತ್ತಿದ್ದ ಪರಸಪ್ಪ ಹೆಚ್ಚು ಪದಕಗಳನ್ನು ಗೆದ್ದಿದ್ದು ಸರ್ವಿಸಸ್ ಗಾಗಿ.

ಅಣ್ಣಂದಿರ ಪ್ರೋತ್ಸಾಹ: ಪರಸಪ್ಪ ಅವರ ಕ್ರೀಡಾ ಸಾಧನೆಗೆ ಅಣ್ಣಂದಿರಾದ ನಿಂಗಪ್ಪ ಮತ್ತು ಬಾಳಪ್ಪ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. “ಅಣ್ಣಂದಿರ ಬೆಂಬಲ ಇಲ್ಲದೆ ಇರುತ್ತಿದ್ದರೆ ಮತ್ತು ಸೇನಿಯ ಹಿರಿಯ ಅಧಿಕಾರ ಪ್ರೋತ್ಸಾಹ ಸಿಗದಿರುತ್ತಿದ್ದರೆ ಈ ಸಾಧನೆ ಮಾಡಲು ಆಗುತ್ತಿರಲಿಲ್ಲ,” ಎಂದು ಹೇಳುವ ಪರಸಪ್ಪ ಅವರ ಮಾತಿನಲ್ಲಿ ಧನ್ಯತಾ ಭಾವವಿದೆ.

ಅತಿರಥರ ಮಣಿಸಿದ ಪರಸಪ್ಪ: ಈ ಬಾರಿ ರಾಷ್ಟ್ರೀಯ ಕ್ರಾಸ್ ಕಂಟ್ರಿ ಹಾದಿ ಅತ್ಯಂತ ಕಠಿಣವಾಗಿತ್ತು. ಪರಸಪ್ಪ 10 ಕಿ.ಮೀ. ಅಂತರವನ್ನು 31 ನಿಮಿಷ 13.21 ಸೆಕೆಂಡುಗಳಲ್ಲಿ ತಲುಪಿ ಅಚ್ಚರಿ ಮೂಡಿಸಿದರು. ಋತುವಿನ ಉತ್ತಮ ಓಟಗಾರ ಮಧ್ಯಪ್ರದೇಶದ ವಿಕ್ರಂ ಬಾಂಗ್ರಿಯಾ, ಮಹಾರಾಷ್ಟ್ರದ ಸ್ಟೀಪಲ್ ಚೇಸರ್ ಆದೇಶ್ ಯಾದವ್, ರೈಲ್ವೆಯ ಆಭಿಷೇಕ್ ಪಾಲ್, ಎ,ಬಿ ಬೆಳ್ಳಿಯಪ್ಪ, ದರ್ಶನ್ ಸಿಂಗ್, ಹರಿ ಸಿಂಗ್ ಹಾಗೂ ಹಾಲಿ ಚಾಂಪಿಯನ್ ಸರ್ವಿಸಸ್ ನ ಅನೀಶ್ ತಾಪಾ ಮಾಗರ್ ಅವರನ್ನು ಹಿಂದಿಕ್ಕಿದ ಪರಸಪ್ಪ ಚಿನ್ನಕ್ಕೆ ಮುತ್ತಿಟ್ಟರು.

ಕೆಲವು ದಿನಗಳ ಹಿಂದೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಪರಸಪ್ಪ ಸೇನೆಯ ಪರವಾಗಿ ಸ್ಪರ್ಧಿಸಿದರೂ ಓಟವನ್ನು ಪೂರ್ಣಗೊಳಿಸಲಾಗದೆ ಕಣ್ಣೀರಿಟ್ಟಿದ್ದರು. ಆದರೆ ತರಬೇತದಾರರ ಸಲಹೆ ಮೇರೆಗೆ ಕರ್ನಾಟಕವನ್ನು ಪ್ರತಿನಿಧಿಸಿ ಇಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು.

Related Articles