ಬೆಳ್ಳಿಪ್ಪಾಡಿ ಆಳ್ವಾಸ್ ಅಕಾಡೆಮಿಗೆ ಬಂತು ಫ್ರೀಬೌಲರ್ ಬೌಲಿಂಗ್ ಮೆಷಿನ್

0
10
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್
ಕರಾವಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್‌ನ ನೈಜ ಸಂಚಲನ ಉಂಟಾಗಿದ್ದು ಕಳೆದ ವರ್ಷ ಉಡುಪಿ ಜಿಲ್ಲೆಯ ಹಂಗಾರಕಟ್ಟೆಯ ಚೇತನ ಪ್ರೌಢ ಶಾಲೆಯಲ್ಲಿ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಆರಂಭವಾದಾಗಿನಿಂದ ಎಂದರೆ ತಪ್ಪಾಗಲಾರದು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ, ಫಿಟ್ನೆಸ್, ಕ್ರೀಡಾ ಸಂಘಟನೆ, ಕ್ರೀಡಾ ಆಡಳಿತ, ಅಂಗಣದ ನಿರ್ವಹಣೆ, ಅಂಪೈರಿಂಗ್ ಹೀಗೆ ಪ್ರತಿಯೊಂದು ವಿಷಯದಲ್ಲೂ ತರಬೇತಿ ನೀಡುತ್ತಿರುವ ಮಾಜಿ ಕ್ರಿಕೆಟಿಗ ವಿಜಯ ಆಳ್ವಾ ಅವರ ನೇತೃತ್ವದ ಈ ಅಕಾಡೆಮಿ ಈಗ ಉಡುಪಿ ಜಿಲ್ಲೆಯಲ್ಲೇ ಪ್ರಥಮ ಬಾರಿ ಎಂಬಂತೆ ವಿದ್ಯುತ್ ಅಗತ್ಯವಿಲ್ಲದ ಬೌಲಿಂಗ್ ಮೆಷಿನ್ ಅನ್ನು ಅಕಾಡೆಮಿಯಲ್ಲಿ ಅಳವಡಿಸಿದ ಕೀರ್ತಿಗೆ ಪಾತ್ರವಾಗಿದೆ.

ಬೌಲಿಂಗ್ ಮೆಷಿನ್ ಹೆಚ್ಚಿನ ಅಕಾಡೆಮಿಯಲ್ಲಿ ಇರುತ್ತವೆ. ಆದರೆ ಕರಾಪಳಿಯಲ್ಲಿ ವಿರಳ. ಆದರೆ ಬೆಳ್ಳಿಪ್ಪಾಡಿ ಅಕಾಡೆಮಿಯಲ್ಲಿ ಅಳವಡಿಸಲಾಗಿರುವ ಬೌಲಿಂಗ್ ಮೆಷಿನ್ ಒಬ್ಬ  ಉತ್ಸಾಹಿ ಕನ್ನಡಿಗ  ಮೆಕ್ಯಾನಿಕಲ್ ಎಂಜಿನಿಯರ್ ಪ್ರತೀಕ್ ಪಾಲನೇತೃ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಬೌಲಿಂಗ್ ಮೆಷಿನ್,  ‘ಫ್ರೀಬೌಲರ್‌‘ ಇದಾಗಿದೆ. ಸುಲಭವಾಗಿ, ಸರಳವಾಗಿ ಯಾವುದೇ ಅಪಾಯವಿಲ್ಲದೆ, ಗಂಟೆಗೆ 130ಕಿ.ಮೀ. ಗೂ ಹೆಚ್ಚು ವೇಗದಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಈ ಬೌಲಿಂಗ್ ಮೆಷಿನ್ ಹೊಂದಿರುವುದು ವಿಶೇಷವಾಗಿದೆ. ಇದರ ವೆಚ್ಚ ಇತರ ಬೌಲಿಂಗ್ ಮೆಷಿನ್ ಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಸದ್ಯ ಬರೇ 30 ಸಾವಿರ ರೂ.ಗಳಿಗೆ ಖರೀದಿಸಬಹುದು.
ಬೆಳ್ಳಿಪ್ಪಾಡಿ ಕ್ರಿಕೆಟ್  ಅಕಾಡೆಮಿಯ  ಪ್ರಧಾನ ಕೋಚ್, ವಿಜಯ ಆಳ್ವಾ ಅವರು ಫ್ರೀ ಬೌಲರ್ ಮೆಷಿನ್ ಬಗ್ಗೆ ಮಾತನಾಡಿ, ‘ಇದೊಂದು ಅದ್ಭುತ ಬೌಲಿಂಗ್ ಮೆಷಿನ್. ಲಕ್ಷಾಂತರ ರೂ. ವೆಚ್ಚ ಮಾಡುವುದಕ್ಕಿಂತ ವಿದ್ಯುತ್ ಬಳಕೆ ಇಲ್ಲದೆ ಉಪಯೋಗಿಸಬಹುದಾದ ಈ ಮೆಷಿನ್ ಚಿಕ್ಕ ಮಕ್ಕಳಿಗೆ ಅಗತ್ಯ ರೀತಿಯಲ್ಲಿ ಬಳಸಬಹುದು, ಸ್ಪೀಡ್ ಹಾಗೂ ಸ್ಲೋ ಸೇರಿದಂತೆ ನಮಗೆ ಬೇಕಾಗುವ ರೀತಿಯಲ್ಲಿ ಅಳವಡಿಸಿಕೊಂಡು ಬ್ಯಾಟಿಂಗ್ ಅಭ್ಯಾಸ ಮಾಡಬಹುದು. ನಮ್ಮ ಮಕ್ಕಳು ಉತ್ತಮ ರೀತಿಯಲ್ಲಿ ಇದಕ್ಕೆ ಹೊಂದಿಕೊಂಡಿದ್ದಾರೆ. ಕ್ರಿಕೆಟ್ ಜಗತ್ತಿಗೆ ಇದನ್ನು ನೀಡಿದ ಪ್ರತೀಕ್ ಪಾಲನೇತೃ ಅವರ ಶ್ರಮ ನಿಜವಾಗಿಯೂ ಮೆಚ್ಚುವಂಥದ್ದು, ಕ್ರಿಕೆಟೇ ಉಸಿರಾಗಿರುವ ಭಾರತದಲ್ಲಿ ಇಂಥ ಅನ್ವೇಷಣೆಯಿಂದ ಜಗತ್ತಿನ ಇತರ ರಾಷ್ಟ್ರಗಳಿಗೆ  ಭಾರತ ಮಾದರಿಯಾಗಿದೆ,‘ ಎಂದರು.
ಫ್ರೀ ಬೌಲರ್ ಮೆಷಿನ್ ಹುಟ್ಟಿದ್ದು ಹೇಗೆ?
ಪ್ರತೀಕ್ ಪಾಲನೇತೃ ಬೆಂಗಳೂರಿನವರು. ಜೂನಿಯರ್ ಹಂತದಲ್ಲಿ ತುಮಕೂರು ವಲಯದ ಪರ ಕ್ರಿಕೆಟ್ ಆಡಿದವರು. ಆದರೆ ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ಕ್ರಿಕೆಟ್ ನಿಂದ ಸ್ವಲ್ಪ ದೂರ ಉಳಿದರು. ಬೆಂಗಳೂರಿನ ಆರ್.ವಿ. ಕಾಲೇಜ್  ಆಫ್ ಎಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಮುಗಿಸಿ ಅಮೆರಿಕದ ಲೆಹೈ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳಿದರು. ಅಮೆರಿಕದಲ್ಲಿ ಕ್ರಿಕೆಟ್ ಅಷ್ಟು ಜನಪ್ರಿಯ ಕ್ರೀಡೆಯಾಗಿಲ್ಲ. ಬೌಲಿಂಗ್ ಮಾಡಲು ಉತ್ತಮ ಬೌಲರ್ ಗಳೂ ಇರಲಿಲ್ಲ. ಆ ಕಾರಣ ಕ್ರಿಕೆಟ್ ಆಡಬೇಕೆಂಬ ತವಕದಿಂದ ಒಂದು ಬೌಲಿಂಗ್ ಮೆಷಿನ್ ಖರೀದಿಸಲು ಮನಸ್ಸು ಮಾಡಿದರು. ಆದರೆ ಅದರ ಬೆಲೆ ಬಹಳ ದುಬಾರಿಯಾಗಿತ್ತು. ಪ್ರತೀಕ್ ಅಷ್ಟಕ್ಕೇ ಸುಮ್ಮನಿರಲಿಲ್ಲ. ತಮ್ಮ ಪ್ಯಾಸಂಗದ ಪ್ರಾಜೆಕ್ಟ್‌ನಲ್ಲಿ ಬೌಲಿಂಗ್ ಮೆಷಿನ್ ನಿರ್ಮಿಸುವ ಯೋಜನೆಗೆ ಮುಂದಾದರು. ಗೆಳೆಯ ಜಸ್ಟಿನ್ ಜಾಕೋಬ್ ಅವರೊಂದಿಗೆ ಸೇರಿಕೊಂಡು ಕೆಲಸ ಆರಂಭಿಸಿದರು. ಅದು ಯಶಸ್ಸು ಕಂಡಿತು. ಅಭ್ಯಾಸಕ್ಕೆ ಬಂದು ಉದ್ಯಮವನ್ನೇ ಆರಂಭಿಸಿದರು. ಈಗ ಫ್ರೀ ಬೌಲರ್ ಬೆಂಗಳೂರು, ದಿಲ್ಲಿ, ಮುಂಬೈ ಹಾಗೂ ದೇಶದ ಇತರ ನರಗಳಲ್ಲಿರುವ ಕ್ರಿಕೆಟ್ ಅಕಾಡೆಮಿಗಳಲ್ಲಿ ಮನೆ ಮಾತಾಗಿದೆ. ಕನ್ನಡಿಗನ ಈ ಹೊಸ ಆವಿಷ್ಕಾರಕ್ಕೆ ಇಂಗ್ಲೆಂಡ, ದಕ್ಷಿಣ ಆಫ್ರಿಕಾ, ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದಲೂ ಬೇಡಿಕೆ ಬಂದಿದೆ.  ಹೀಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ವಿದ್ಯಾರ್ಥಿಯಾಗಿದ್ದ ಪ್ರತೀಕ್ ಈಗ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದರು.
ಕ್ಲಬ್ ಗಳ ಜತೆಯಲ್ಲಿ  ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಕೆಎಲ್ ರಾಹುಲ್ ಕೂಡ ಫ್ರೀ ಬೌಲರ್ ಬೌಲಿಂಗ್ ಮೆಷಿನ್‌ನ  ಅನುಭವ ಪಡೆದಿದ್ದಾರೆ. ಕ್ರಿಕೆಟ್ ಆಟವನ್ನು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಕೊಂಡೊಯ್ಯಲು ಯತ್ನಿಸುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇಂಥ ಸುಲಭ , ಸರಳ ಹಾಗೂ ಸುಲಲಿತ ಯಂತ್ರವನ್ನು ಬಳಸಿದರೆ ಎಲ್ಲರಿಗೂ ಅನುಕೂಲವಾದಂತೆ.
ಬೆಳ್ಳಿಪ್ಪಾಡಿ ಅಕಾಡೆಮಿಯಲ್ಲಿ ಉದ್ಘಾಟೆ
ಬೆಳ್ಳಿಪ್ಪಾಡಿ ಅಕಾಡೆಮಿಯಲ್ಲಿ ಅಳವಡಿಸಲಾದ ಫ್ರೀಬಾಲ್ ಬೌಲಿಂಗ್ ಮೆಷಿನ್ ನಲ್ಲಿ ಮೊದಲ ಎಸೆತವನ್ನು ಆಳ್ವಾಸ್ ಕಾಲೇಜಿನ ಆಟಗಾರ ಮಿಥುನ್ ಸತೀಶ್ ಎದುರಿಸಿದರು. ನಂತರ ಸಂತೋಷ್, ಸುಗಮ್ ಶೆಟ್ಟಿ, ಯತೀನ್, ಧೀರಜ್ ಹಾಗೂ ತಾಬೀಶ್ ಶೇಕ್ ಎದುರಿಸಿದರು. ಉದ್ಘಾಟನೆ ವೇಳೆ ಮೊದಲ ಎಸೆತವನ್ನು ಎದುರಿಸಿದ ಮಿಥುನ್ ಸತೀಶ್, ‘ಮೆಷಿನ್ ನಿಂದ ಬಂದ ಚೆಂಡಿನ ಏಸ್ ಬಹಳ ಉತ್ತಮವಾಗಿದೆ. ಪಂದ್ಯದಲ್ಲೇ ಆಡಿದ  ಅನುಭವ ನೀಡುತ್ತದೆ. ನೇರ ಮತ್ತು ನಿಖರತೆ ಉತ್ತಮವಾಗಿದೆ. ಇದರೊಂದಿಗೆ ಗುರುಗಳ ತರಬೇತಿ ಸಿಕ್ಕರೆ ಉತ್ತಮ ಬ್ಯಾಟ್ಸ್ ಮನ್ ಆಗಿ ರೂಪುಗೊಳ್ಳಲು ಸಾಧ್ಯ,‘ ಎಂದರು.