Thursday, March 28, 2024

ರಾಜ್ಯ ವಾಲಿಬಾಲ್ ತಂಡಕ್ಕೆ ಕುಂದಾಪುರದ ರೈಸನ್ ನಾಯಕ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

 ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಈ ಬಾರಿ ಉಡುಪಿ ಜಿಲ್ಲೆಯಿಂದ ಮೂವರು ಆಟಗಾರರರು ಆಯ್ಕೆಯಾಗಿದ್ದಾರೆ. ಅವರಲ್ಲಿ ಕುಂದಾಪುರದ ಹೆಮ್ಮಾಡಿಯ ಮೂವತ್ತು ಮುಡಿಯ ರೈಸನ್ ಬೆನೆಟ್ ರೆಬೆಲ್ಲೊ ನಾಯಕರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಹೆಮ್ಮೆ.

ವಂಡ್ಸೆಯ ನವೀನ್ ಕಾಂಚನ್ ಹಾಗೂ ಆಳ್ವಾಸ್ ನ ಸುಧೀರ್ ಶೆಟ್ಟಿ ರಾಜ್ಯ ತಂಡಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಇತರ ಆಟಗಾರರು. ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯಿಂದ ಮೂವರು ಆಟಗಾರರು ಆಯ್ಕೆಯಾಗಿರುತ್ತಾರೆ.

ರಾಜ್ಯ ತಂಡದ ನಾಯಕರಾಗಿ ಆಯ್ಕೆಯಾದ ಕುಂದಾಪುರ ತಾಲೂಕಿನ ಪುಟ್ಟಗ್ರಾಮವಾದ ಮೂವತ್ತು ಮುಡಿಯ ಬೆನೆಟ್ ರೆಬೆಲ್ಲೋ ಅವರು ಸ್ಪೋರ್ಟ್ಸ್ ಮೇಲ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕ್ರೀಡಾ ಬದುಕಿನಲ್ಲಿ ಸಾಗಿ ಬಂದ ಹಾದಿಯನ್ನು ಸ್ಮರಿಸಿದ್ದಾರೆ. ಅವರೊಂದಿಗಿನ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.

 

ಚಿಕ್ಕಂದಿನಲ್ಲಿಯೇ ವಾಲಿಬಾಲ್ ಆಸಕ್ತಿ: ಹೆಮ್ಮಾಡಿ ಗ್ರಾಮದ ಮೂವತ್ತುಮುಡಿಯಿಂದ ಒಬ್ಬ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಹುಟ್ಟಿಕೊಳ್ಳುತ್ತಾನೆಂದು ಊಹಿಸಲು ಅಸಾಧ್ಯ. ರೈಸನ್ ಅವರಲ್ಲೂ ಅಂತ ಗುರಿಯೇನೂ ಇರಲಿಲ್ಲ. ಶಾಲೆಯಲ್ಲಿ ಉತ್ತಮವಾಗಿ ಆಡುತ್ತಿದ್ದ ಕಾರಣ ಅದೇ ರೀತಿಯಲ್ಲಿ ಹಂತಹಂತವಾಗಿ ಮುಂದುವರಿದರು. ಹೆಮ್ಮಾಡಿಯ ಸರಕಾರಿ ಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ರೈಸನ್ ಬೆಂಗಳೂರಿನ ವಿದ್ಯಾನಗರಿಯಲ್ಲಿರುವ ಕ್ರೀಡಾ ಹಾಸ್ಟೆಲ್ ನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದರು. ಕ್ರೀಡೆಗೆ ಪ್ರೋತ್ಸಾಹನ ನೀಡುವ ಸುರಾನ ಕಾಲೇಜಿಯಲ್ಲಿ ಪಿಯುಸಿ ಹಾಗೂ ಪದವಿಯ ಮೊದಲ ವರ್ಷ ಮುಗಿಸುವಷ್ಟರಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಪೋಸ್ಟಲ್ ತಂಡದ ಆಟಗಾರರಾದರು.

ಕರ್ನಾಟಕದ ಭರವಸೆಯ ಆಟಗಾರ: ಜೂನಿಯ ಮತ್ತು ಸೀನಿಯರ್ ವಿಭಾಗದಲ್ಲಿ ಸುಮಾರು ಹತ್ತು ವರ್ಷಗಳಿಂದ ಆಡುತ್ತಿರುವ ರೈಸನ್ 19 ವರ್ಷ ವಯೋಮಿತಿಯ ಭಾರತ ತಂಡದಲ್ಲಿ ಆಡಿದ ಅಟಗಾರ. ಹಲವಾರು ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಈಗ ರಾಜ್ಯ ಸೀನಿಯರ್ ತಂಡದ ನಾಯಕರಾಗಿದ್ದಾರೆ. ತಮ್ಮ ತಂಡ ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿದ್ದು ಈ ಬಾರಿ ರಾಷ್ಟ್ರೀಯ ಚಾಂಪಿಯನ್ಷಿಪ್ ಗೆಲ್ಲುವ ಗುರಿಹೊಂದಿದ್ದೇವೆ ಎಂದಿದ್ದಾರೆ. “2019ರಲ್ಲಿ ಸುಮಾಆರು 67 ವರ್ಚಷಗಳ ನಂತರ ಕರ್ನಾಟಕ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿತ್ತು. ಅದೊಂದು ಅವಿಸ್ಮರಣೀಯ ಕ್ಷಣ. ಆ ಸಂದರ್ಭದಲ್ಲಿ ಕರ್ನಾಟಕ ತಂಡದಲ್ಲಿದ್ದುದು ನನ್ನ ಕ್ರೀಡಾ ಬದುಕಿನ ಹೆಮ್ಮೆಯ ಕ್ಷಣ. ಮತ್ತೆ ರಾಷ್ಟ್ರೀಯ ಚಾಂಪಿಯನ್ಷಿಪ್ ಗೆಲ್ಲಬೇಕೆಂಬ ಹಂಬಲ. ಅದಕ್ಕಾಗಿ ನಮ್ಮ ತಂಡದಲ್ಲಿ ಉತ್ತಮ ತರಬೇತುದಾರರು ಮತ್ತು ಉತ್ತಮ ಸಶಕ್ತ ಆಟಗಾರರೂ ಇದ್ದಾರೆ. ರಾಷ್ಟ್ರೀಯ ಚಾಂಪಿಯನ್ಷಿಪ್ ಗೆಲ್ಲುವುದು ಗುರಿ,” ಎಂದರು.

ಅಶ್ವಲ್ ರೈ ಇರಬೇಕಿತ್ತು: ಕರ್ನಾಟಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನುಭವಿ ಆಟಗಾರ ಅಶ್ವಲ್ ರೈ ಈಗ ರೈಲ್ವೇಸ್ ಪರ ಆಡುತ್ತಿದ್ದಾರೆ. ಅವರು ರೈಲ್ವೆಯ ಉದ್ಯೋಗಿಯಾಗಿದ್ದ ಕಾರಣ ಅಲ್ಲಿ ಆಡಬೇಕಾದ ಅನಿವಾರ್ಯತೆ ಕೂಡ. ಅವರು ರಾಜ್ಯ ತಂಡದಲ್ಲಿ ಇರುತ್ತಿದ್ದರೆ ನಮ್ಮ ತಂಡ ಇನ್ನು ಬಲಿಷ್ಠವಾಗಿರುತ್ತಿತ್ತು ಎಂದು ರೈಸನ್ ಹೇಳಿದ್ದಾರೆ. ಅಶ್ವಲ್ ಹಲವಾರು ಟೂರ್ನಿಗಳಲ್ಲಿ ರಾಜ್ಯ ತಮಡದ ಜಯದ ರೂವಾರಿ ಎನಿಸಿದ್ದರು.

ಇಂಡಿಯನ್ ವಾಲಿಬಾಲ್ ಲೀಗ್ ಮತ್ತೆ ಬರಲಿ: ಇಂಡಿಯನ್ ವಾಲಿಬಾಲ್ ಲೀಗ್ ನಲ್ಲಿ ರೈಸನ್ ಅವರು ಬ್ಲ್ಯಾಕ್ ಹಾಕ್ಸ್ ಹೈದರಾಬಾದ್ ಪರ ಆಡಿದ್ದರು. ಆದರೆ ಕೊರೊನಾ ಕಾರಣ ಲೀಗ್ ಕಳೆದ ವರ್ಷ ನಡೆದಿರಲಿಲ್ಲ. ಇಂಥ ವೃತ್ತಿಪರ ಲೀಗ್ ನಡೆಯುವುದರಿಂದ ವಾಲಿಬಾಲ್ ಆಟಗಾರರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರ್ಥಕ ನೆರವು ಸಿಗುತ್ತದೆ ಎಂದು ಹೇಳಿದರು. ರೈಸನ್ ಅವರು ಕುವೈತ್, ದುಬೈ ಮತ್ತು ಶ್ರೀಲಂಕಾ ದೇಶಗಳಲ್ಲಿ ಭಾರತ ಹಾಗೂ ಆಹ್ವಾನಿತ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.

ಕುಂದಾಪುರ ತಾಲೂಕಿನ ಹೆಮ್ಮಾಡಿಯಂಥ ಪುಟ್ಟ ಗ್ರಾಮದಲ್ಲಿ ಅರಳಿದ ರೈಸನ್ ಅವರ ವಾಲಿಬಾಲ್ ಕಂಪು ದೇಶ ವಿದೇಶಗಳಲ್ಲಿ ವಿಸ್ತರಿಸಲಿ, ಕರ್ನಾಟಕ ತಂಡ ಮತ್ತೆ ರಾಷ್ಟ್ರೀಯ ಹಾಗೂ ಫೆಡರೇಶನ್ ಕಪ್ ಚಾಂಪಿಯನ್ ಪಟ್ಟ ಗೆಲ್ಲಲಿ. ಉಡುಪಿ ಜಿಲ್ಲೆಯ ಈ ಆಟಗಾರ ರಾಜ್ಯದ ಇತರ ಆಟಗಾರರಿಗೆ ಸ್ಫೂರ್ತಿಯಾಗಲಿ ಎಂಬುದೇ ಹಾರೈಕೆ.

Related Articles