Friday, November 22, 2024

ಮ್ಯಾರಥಾನ್: ತಂದೆ ಮಗನ ಸಾಧನೆ ಮಹಾನ್!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ತಂದೆ ಪ್ರಶಾಂತ್ ಹಿಪ್ಪರಗಿ ಎಂಜಿನಿಯರ್ 37 ವರ್ಷ, ಮಗ ಪ್ರಣೀತ್ ಹಿಪ್ಪರಗಿ ಎಂಟು ವರ್ಷ, ಪುಣೆಯಲ್ಲಿ ನೆಲೆಸಿರುವ ವಿಜಯಪುರ ಮೂಲದವರಾದ ಈ ತಂದೆ ಮಗ ಕಳೆದ ಒಂದೂವರೆ ವರ್ಷದಲ್ಲಿ 50ಕ್ಕೂ ಹೆಚ್ಚು ಮ್ಯಾರಥಾನ್ ಓಟವನ್ನು ಮುಗಿಸಿದ್ದು ಭಾರತದ ಕ್ರೀಡಾ ಇತಿಹಾಸದಲ್ಲಿ ಒಂದು ವಿಶೇಷ ಸಾಧನೆ ಮಾಡಿದ್ದಾರೆ.

ಬಿಜಾಪುರದ ಆದರ್ಶ ನಗರದ ನಿವಾಸಿ ಪ್ರಶಾಂತ್ ಹಿಪ್ಪರಗಿ ಹಾಗೂ ಪ್ರಣೀತ್ ಹಿಪ್ಪರಗಿ ನವೆಂಬರ್ 18ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಹಾಫ್  ಮ್ಯಾರಥಾನ್‌ನಲ್ಲಿ ಓಡಲಿದ್ದಾರೆ. ಮ್ಯಾರಥಾನ್‌ನ ವಂಡರ್ ಬಾಯ್ ಎಂದೇ ಗುರುತಿಸಲ್ಪಟ್ಟಿರುವ ಪ್ರಣೀತ್ ಓಟಕ್ಕೆ  ಫ್ಲೈಯಿಂಗ್ ಸಿಖ್ ಖ್ಯಾತಿಯ ಓಟಗಾರ ಮಿಲ್ಖಾ ಸಿಂಗ್ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಕ್ಯಾನಿಕಲ್ ಎಂಜಿನಿಯರ್ ಆಗಿರುವ ಪ್ರಶಾಂತ್ ಹಿಪ್ಪರಗಿ ಪುಣೆಯಲ್ಲಿರುವ ರಿು ಎಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಅನಿತಾ ಪತಿ ಹಾಗೂ ಮಗನ ಮ್ಯಾರಥಾನ್ ಯಶಸ್ಸಿಗೆ ಅಗತ್ಯವಿರುವ ಆಹಾರ ಕ್ರಮವನ್ನು ನೋಡಿಕೊಳ್ಳುತ್ತಾರೆ. ಇದರೊಂದಿಗೆ ಈ ಪುಟ್ಟ ಕುಟುಂಬ ಪಣೆಯಲ್ಲಿ ಕ್ರೀಡಾ ಕುಟುಂಬವಾಗಿ ರೂಪುಗೊಂಡಿದೆ.
ಓಡುವುದೇ ಬದುಕಾಗಿದೆ
ಪುಣೆಯಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಪ್ರಶಾಂತ್ ಹಿಪ್ಪರಗಿ, ‘ಇಬ್ಬರೂ ಬೆಳಿಗ್ಗೆ 4 ಗಂಟೆಗೆ ಓಟವನ್ನು ಆರಂಭಿಸುತ್ತೇವೆ,ಹವ್ಯಾಸವಾಗಿ ಆರಂಭಗೊಂಡ ಈ ಓಟ ಈಗ ನಮಗೆ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಬ್ಬರೂ 50ಕ್ಕೂ ಹೆಚ್ಚು ಮ್ಯಾರಥಾನ್ ಪೂರ್ಣಗೊಳಿಸಿದ್ದೇವೆ. 21.1 ಕಿ.ಮೀ. ಮ್ಯಾರಥಾನ್ ಪೂರ್ಣಗೊಳಿಸಲು ಪ್ರೋತ್ಸಾಹ ನೀಡುವುದಕ್ಕಾಗಿ ಅಂತಿಮ 400 ಮೀ. ಓಟವನ್ನು ತಾಯಿ ಅನಿತಾ ಕೂಡ ಓಡಿದರು. ಇದರೊಂದಿಗೆ ನಮ್ಮದು ಓಟದ ಕುಟುಂಬ,‘ ಎಂದು ಪ್ರಶಾಂತ್  ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಪ್ರಶಾಂತ್‌ಗೆ ಈಗ 37 ವರ್ಷ. ಅವರಿಗೆ ಮ್ಯಾರಥಾನ್‌ನಲ್ಲಿ ಯಾವುದೇ ಪದಕ ಗೆಲ್ಲಬೇಕೆಂಬ ಹಂಬಲವಿಲ್ಲ. ಆದರೆ ಓಟವನ್ನು ಬದುಕಿನ ಒಂದು ನಿತ್ಯದ ಚಟುವಟಿಕೆಯಾಗಿ ರೂಪಿಸಿಕೊಂಡಿದ್ದಾರೆ, ಮಗನಿಗಾಗಿ, ಆತನ ಸಾಧನೆಗಾಗಿ ನಿತ್ಯವೂ ಕನಿಷ್ಠ 25 ಕಿ.ಮೀ. ಓಡುತ್ತಾರೆ.
ಪ್ರಮುಖ ಸಾಧನೆ
ಕಳೆದ ಒಂದೂವರೆ ವರ್ಷದಲ್ಲಿ ಪ್ರಣೀತ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮ್ಯಾರಥಾನ್ ಓಡುವವರನ್ನು ನೋಡಿದರೆ ಸುಲಭವಂತೆ ಕಾಣುತ್ತದೆ. ಆದರೆ ನಾವೇ ಓಡುವಾಗ ಅದರ ನಿಜಾಂಶ ಸ್ಪಷ್ಟವಾಗುತ್ತದೆ. ತಂದೆ ಮಗ ಇಬ್ಬರೂ ಒಂದಾಗಿ ಇದುವರೆಗೂ 50 ಓಟವನ್ನು ಪೂರ್ಣಗೊಳಿಸಿದ್ದಾರೆ. ಅದರಲ್ಲಿ ಪ್ರಣೀತ್ ಸಾಧನೆ ಗಮನಾರ್ಹ ಏಕೆಂದರೆ ಆತನ ಓಟವನ್ನು ಇಡೀ ಭಾರತವೇ ಗಮನಿಸುತ್ತಿದೆ. ಮ್ಯಾರಥಾನ್ ಓಡಿದವರೆಲ್ಲ ಆತನನ್ನು ವಂಡರ್ ಬಾಯ್ ಎಂದೇ ಕರೆಯುತ್ತಾರೆ. ನಮ್ಮ ಉದ್ದೇಶ ದಾಖಲೆ ಮಾಡುವುದಲ್ಲ, ಬದಲಾಗಿ ಇದು ಬದುಕಿನ ಓಟದಂತೆ ಸಾಗಬೇಕು ಎನ್ನುತ್ತಾರೆ ಪ್ರಶಾಂತ್ ಹಿಪ್ಪರಗಿ.
1. 1. ಕಿ.ಮೀ (4 ನಿಮಿಷ 24 ಸೆಕೆಂಡು, ಟ್ರೈನಿಂಗ್ ಟೈಮ್ಡ್ ರನ್)
2. 2 ಕಿ.ಮೀ. (9 ನಿಮಿಷ 20 ಸೆಕೆಂಡು, ರೋಡ್ ರನ್ನರ್ಸ್ ಕಿಡ್ಡಥಾನ್)
3. 3 ಕಿಮೀ. 13 ನಿಮಿಷ 58 ಸೆಕೆಂಡು, ಸಿಂಪಲ್ ಡಿಡ್ಸ್, ಸೀಸನ್ 3)
4. 5 ಕಿ.ಮೀ (25 ನಿಮಿಷ, 25 ಸೆಕೆಂಡು, ಡೆಕಾಥ್ಲಾನ್ ರನ್ 4)
5. 5. ಕಿ.ಮೀ (25 ನಿಮಮಿಷ 05 ಸೆಕೆಂಡು, ಪುಣೆ ಸಿಟಿ ಮ್ಯಾರಥಾನ್)
6. 10 ಕಿ.ಮೀ. (56 ನಿಮಿಷ,  ರನ್ ಫಾರ್ ಅರ್ಥ್).
7. 10 ಕಿ.ಮೀ. (54 ನಿಮಿಷ, 34 ಸೆಕೆಂಡು), ರೆಡ್ ಮ್ಯಾರಥಾನ್)
8. 21.1 ಕಿ.ಮೀ. (ಮೊದಲ  ಮ್ಯಾರಥಾನ್, 2 ಗಂಟೆ 12 ನಿಮಿಷ)
9. 21.1 ಕಿ.ಮೀ. (ಎಫ್ ಐ ಸಿ ಸಿ ಐ  ಹಾಫ್ ಮ್ಯಾರಥಾನ್, 2 ಗಂಟೆ, 4. ನಿಮಿಷ. 20 ಸೆಕೆಂಡು).
10. ಸತಾರಾ ಹಿಲ್ ರನ್
11. ರನ್ನಿಂಗ್ ಬಿಹೈಂಡ್ ಮೈ ಸೆಲ್ಫ್
12. 5ಕಿ.ಮೀ. ರನ್ ಡ್ರಾಪ್ಸ್.

Related Articles