Thursday, November 21, 2024

ಭಾರತದ ಬಲಿಷ್ಠ ಪುರುಷಗೆ ನಾವು ನೀಡಿದ್ದು ಹಮಾಲಿ ಕೆಲಸ

ಸೋಮಶೇಖರ್ ಪಡುಕರೆ, ಬೆಂಗಳೂರು

ಅವರು ಈ ವರ್ಷ ಭಾರತದ ಬಲಿಷ್ಠ ಪುರುಷ, ಕರ್ನಾಟಕದ ಬಲಿಷ್ಠ ಪುರುಷ, ಏಷ್ಯನ್ ಪವರ್‌ಲಿಫ್ಟಿಂಗ್‌ನಲ್ಲಿ ಪದಕ ವಿಜೇತ,  ಎಂಟು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತ…ಆದರೆ ನಾವು ಅವರಿಗೆ ಕೊಟ್ಟ ಕೆಲಸ ಹಮಾಲಿ. ಇದು ದಾವಣಗೆರೆಯ ಶೇಖರಪ್ಪ ನಗರದ ಪವರ್ ಲಿಫ್ಟರ್  ಮಂಜಪ್ಪ ಪಿ. ಅವರ ಕ್ರೀಡಾ ಬದುಕಿನ ದುರಂತ ಕತೆ.

ಭಾನುವಾರ ಲಖನೌದಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ  ಮಂಜಪ್ಪ ಅವರು 670 ಕೆಜಿ ಭಾರವೆತ್ತಿ ಸ್ಟ್ರಾಂಗ್ ಮ್ಯಾನ್ ಆಫ್  ಇಂಡಿಯಾ (ಭಾರತದ ಬಲಿಷ್ಠ ಪುರುಷ) ಗೌರವಕ್ಕೆ ಪಾತ್ರರಾದರು.
ಲಖನೌದಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಮಂಜಪ್ಪ, ‘ನೋಡಿ  ನಮ್ಮ ಬದುಕು, ರೈಲಿನಲಿದ್ದೇನೆ, ಭಾರತದ ಬಲಿಷ್ಠ ಪುರುಷ ಪ್ರಶಸ್ತಿ ಕೈಯಲ್ಲಿದೆ, ನಮಗೆ ವಿಮಾನದಲ್ಲಿ ಹಾರುವ ಯೋಗ್ಯತೆ ಇಲ್ಲ. ಏಕೆಂದರೆ ನಾನೊಬ್ಬ ಹಮಾಲಿ, ಈಗ ಎರಡು ತಿಂಗಳಿಂದ ಕಸದ ವಾಹನದ ಚಾಲಕನಾಗಿ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೋದರೆ ಸಂಬಳಕ್ಕೂ ಕತ್ತರಿ. ಇದು ಕೇವಲ ನನ್ನ ಸಮಸ್ಯೆ ಮಾತ್ರವಲ್ಲ, ಕರ್ನಾಟಕದ ಹೆಚ್ಚಿನ ಕ್ರೀಡಾಪಟುಗಳ ಸಮಸ್ಯೆ,‘ ಎಂದು ಬೇಸರದಿಂದ ನುಡಿದರು.

ಕೈ ಬಿಡದ ಊರಿನವರು

ಮಂಜಪ್ಪ ಯಾವುದೇ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಳ್ಳಲು ಹೊರಟರಗೆ ಊರಿನ ಗೆಳೆಯರು, ಆತ್ಮೀಯರು ತಮ್ಮಿಂದಾದ ನೆರವನ್ನು ನೀಡಿ ಪ್ರೋತ್ಸಾಹ ಮಾಡುತ್ತಾರೆ. ಇದರಿಂದಾಗಿ ಮಂಜಪ್ಪ ಯಾವುದೇ ಚಾಂಪಿಯನ್‌ಷಿಪ್‌ನಿಂದ ದೂರ ಉಳಿಯಲು ಯತ್ನಿಸುವುದಿಲ್ಲ. ‘ಸಾಧನೆ ಮಾಡಲು ಊರಿನ ಜನರು ಉತ್ತಮ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಬೇರೆ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಕ್ರೀಡಾ ಬದುಕಿನ ಬಗ್ಗೆ ಬೇಸರ ಹುಟ್ಟಿದೆ. ಯಾವುದೇ ಪ್ರಯೋಜನ ಇಲ್ಲದ ಮೇಲೆ ಯಾಕೆ ರೀತಿ ಸಾಧನೆ ಮಾಡಬೇಕು ಅನಿಸುತ್ತೆ,‘ ಎಂದರು.

ಗೆದ್ದರೂ ಪ್ರಯೋಜನವಿಲ್ಲ!

ಲಖನೌದಲ್ಲಿ ನಡೆದ ರಾಷ್ಟ್ರೀಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಜಪ್ಪ ಭಾರತದ ಬಲಿಷ್ಠ ಪುರುಷ ಎಂಬ ಗೌರವಕ್ಕೆ ಪಾತ್ರರಾದರೂ ಸಿಕ್ಕಿದ್ದು ಬರೇ ಟ್ರೋಫಿ. ಕರ್ನಾಟಕದಲ್ಲಿ ಈ ರೀತಿಯ ಚಾಂಪಿಯನ್‌ಷಿಪ್ ನಡೆದರೆ  ಬಲಿಷ್ಠ ಪುರುಷನಿಗೆ ನಗದು ಬಹುಮಾನ ಕೊಡುತ್ತಾರೆ. ಆದರೆ ಲಖನೌದಲ್ಲಿ ಸಂಘಟನೆ ಮಾಡಿರುವವರು ಸ್ಪರ್ಧಿಗಳಿಗೆ ಉತ್ತಮ ರೀತಿಯಲ್ಲಿ ಊಟವನ್ನೂ ನೀಡಲಿಲ್ಲ ಎನ್ನುತ್ತಾರೆ ಮಂಜಪ್ಪ.

ಕ್ರೀಡಾ ಸಚಿವರೇ ನೀವೆಲ್ಲಿ?

ಕರ್ನಾಟಕದ ಕ್ರೀಡಾ ಸಚಿವರು ಯಾರೆಂದು ಜನ ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ. ಇನ್ನು ಕೆಲವರು ಕರೆ ಮಾಡಿ ಕೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಈ ರಾಜ್ಯದಲ್ಲಿ ಕ್ರೀಡೆಗೆ ಜನಪ್ರತಿನಿಧಿಗಳು ಎಷ್ಟು ಗೌರವ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಪದಕ ಗೆದ್ದವರಿಗೆ ಅಭಿನಂದನೆ ಸಲ್ಲಿಸಲೂ ಸಮಯ ಇಲ್ಲದ ಜನಪ್ರತಿನಿಧಿಗಳಿಗೆ ಇಂಥ ಸಾಮಾಜಿಕ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಆಸಕ್ತಿಯೇ ಇಲ್ಲದಿರುವುದು ಬೇಸರದ ಸಂಗತಿ. ಕ್ರೀಡೆಯ ಬಗ್ಗೆ ಆಸಕ್ತಿ ಇಲ್ಲದವರನ್ನು ಕ್ರೀಡಾ ಸಚಿವರನ್ನಾಗಿ ಮಾಡಿದರೆ, ಇನ್ನಾರೋ ಅದರಲ್ಲಿ ಆಸಕ್ತಿ ಲಾಭ
ಪಡೆದುಕೊಳ್ಳುತ್ತಾರೆ.  ಪದಕ ಗೆದ್ದವರಿಗೆ ಇನ್ನೂ ಬಹುಮಾನ ಪ್ರಕಟಿಸಲಾಗದ ಅಥವಾ ಅಭಿನಂದಿಸಲಾಗದ ಡಾ. ಜಿ. ಪರಮೇಶ್ವರ್ ಅವರಿಗೆ ನಿಜವಾಗಿಯೂ ಕ್ರೀಡಾ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇದೆಯೇ? ಎಂದು ಪ್ರಶ್ನಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ತಂದೆಯೂ ಹಮಾಲಿ

ಮಂಜಪ್ಪ ಅವರ ತಂದೆ ಪುರುಷೋತ್ತಮ ದಾವಣಗೆರೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕಮಲಮ್ಮಗೆ ಮನೆ ಕೆಲಸ. ರಾಷ್ಟ್ರೀಯ ಮಟ್ಟದಲ್ಲಿ 8 ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಪದಕ ಗೆದ್ದಿರುವ ಮಂಜಪ್ಪ ಅವರು 10ನೇ ತರಗತಿ ಉತ್ತೀರ್ಣವಾಗಿರುತ್ತಾರೆ. ಇಂಥ ಸಾಧಕನಿಗೆ ನಾವು ಬದುಕಿಗೆ ನೆರವಾಗಬಲ್ಲ ಒಂದು ಉದ್ಯೋಗ ನೀಡಿದರೆ ಕಳೆದುಕೊಳ್ಳುವುದು ಏನೂ ಇಲ್ಲ. ಒಂದು ಊರಿನಲ್ಲಿ ಇಂಥ ಸಾಧಕರಿದ್ದರೂ, ಅವರನ್ನು ಕಡೆಗಣಿಸಿ ಬದುಕುತ್ತಿರುವ ಶ್ರೀಮಂತ ವರ್ಗವಿದ್ದರೆ ಅದು ಇದ್ದೂ ಸತ್ತಂತೆ.

Related Articles