Saturday, May 11, 2024

ಪ್ರಶಾಂತ್ ಹಿಪ್ಪರಗಿ: ಕಾಮನ್ ಮ್ಯಾನ್ ಟು ಐರನ್ ಮ್ಯಾನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಪ್ರಶಾಂತ್ ಕುಮಾರ್ ಪಿಪ್ಪರಗಿ ಓಟವನ್ನೇ ಉಸಿರಾಗಿಸಿಕೊಂಡು ಇಂದು ದೇಶದ ಐರನ್ ಮ್ಯಾನ್ ಎನಿಸಿಕೊಂಡಿದ್ದಾರೆ. ವಿಶ್ವದಲ್ಲೇ ಅತ್ಯಂತ ಕಠಿಣ ಸ್ಪರ್ಧೆ ಎನಿಸಿರುವ ಐರನ್ ಮ್ಯಾನ್ ಸ್ಪರ್ಧೆಯನ್ನು ಪೂರ್ತಿಗೊಳಿಸಿದ ಪ್ರಶಾಂತ್ ಕುಮಾರ್ ಈ ಕಾರ್ಪೊರೇಟ್ ವಲಯದಲ್ಲಿ ಎಲ್ಲರ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. 3.8 ಕಿ.ಮೀ. ಈಜು, 180 ಕಿ.ಮೀ ಸೈಕ್ಲಿಂಗ್ ಮತ್ತು 42 ಕಿ.ಮೀ ಓಟವನ್ನು ಎಲ್ಲಿಯೂ ವಿಶ್ರಾಂತಿ ಪಡೆಯದೆ ಪೂರ್ಣಗೊಳಿಸಿರುವ ಈ ಹೆಮ್ಮೆಯ ಕನ್ನಡಿಗನ ಸಾಧನೆಗೆ ಒಂದು ಸಲಾಂ.

ಫಿಟ್ನೆಸ್ ನಿಂದ ಆರಂಭ:

ಪ್ರಶಾಂತ್ ಕುಮಾರ್ ಓದಿದ್ದು ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್. REFUdrive ನಲ್ಲಿ ಮೆಕ್ಯಾನಿಕಲ್ ಡಿಸೈನ್ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾರೆ. ನಿತ್ಯದ ಕಚೇರಿ ಕೆಲಸಗಳ ನಡುವೆ  ಆಲಸ್ಯ, ಶಿಸ್ತು ಇಲ್ಲದ ಆಹಾರ ಸೇವನೆ, ದೇಹವನ್ನು ದಂಡಿಸದೇ ಇರುವುದು ಇದರಿಂದಾಗಿ ಪ್ರಶಾಂತ್ ಅವರ ದೇಹದ ತೂಕ 98 ದಾಟಿತ್ತು. ಇದರಿಂದ ಮುಕ್ತಿ ಹೊಂದಲು ಪ್ರಶಾಂತ್ ತಮ್ಮ ಮಗ ಪ್ರಣೀತ್ ಅವರೊಂದಿಗೆ ಓಡುವ ಅಭ್ಯಾಸವನ್ನು ಮೈಗೂಡಿಸಿಕೊಂಡರು. ಪತ್ನಿ ಅನಿತಾ ನ್ಯುಟ್ರಿಷನಿಸ್ಟ್ ಆದ ಕಾರಣ ಅವರ ಮಾತಿಗೆ ಬೆಲೆ ಕೊಟ್ಟು ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಿಕೊಂಡರು. ನಿತ್ಯವೂ 10 ಕಿ.ಮೀ ಆಟವನ್ನು ಪೂರ್ಣಗೊಳಿಸವು ಗುರಿಹೊಂದಿ, ಅದರಲ್ಲಿ ಯಶಸ್ವಿಯಾದರು. 2017ರಲ್ಲಿ ನಿತ್ಯವೂ 10 ಕಿ.ಮೀ. ಅಂತರವನ್ನು ನಿಲುಗಡೆ ಇಲ್ಲದೆ ಪೂರ್ಣಗೊಳಿಸಿದರು.

ಮ್ಯಾರಥಾನ್ ಗಾಗಿ ಅಭ್ಯಾಸ

ಆರಂಭದಲ್ಲಿ ಪ್ರಶಾಂತ್ 1 ಕಿ.ಮೀ. ಓಟವನ್ನು ಬಿಡುವಿಲ್ಲದೆ ಪೂರ್ಣಗೊಳಿಸಲು ವಿಫಲವಾಗುತ್ತಿದ್ದರು. ಎದೆಯ ಬಡಿತ ಹೆಚ್ಚುತ್ತಿತ್ತು, ಉಸಿರಾಟ ವೇಗವಾಗುತ್ತಿತ್ತು. ಇದರಿಂದಾಗಿ ಅಭ್ಯಾಸದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡರು. ಪ್ರತಿನಿತ್ಯ ಬೆಳಿಗ್ಗೆ 4 ಗಂಟೆಗೆ ಎದ್ದು ಬೆಟ್ಟದಲ್ಲಿ ಓಟ, ಏರೋಬಿಕ್ ಓಟದ ಜತೆಯಲ್ಲಿ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಈ ರೀತಿ ವ್ಯವಸ್ಥಿತ ಮತ್ತು ವೈಜ್ಞಾನಿಕ  ರೀತಿಯ ಅಭ್ಯಾಸದಿಂದಾಗಿ ಫಿಟ್ನೆಸ್ ಉತ್ತಮಗೊಳ್ಳಲಾರಂಭಿಸಿತು. ಕೆಲವು ತಿಂಗಳ ಕಠಿಣ ಅಭ್ಯಾಸದ ನಂತರ 5 ಕಿ.ಮೀ. ಓಟವನ್ನು ನಿಲುಗಡೆ ಇಲ್ಲದೆ ಮಗನೊಂದಿಗೆ ಪೂರ್ಣಗೊಳಿಸಿದರು. ಈಗ ತೂಕ 96ಕ್ಕೆ ಇಳಿಯಿತು.

ಹಾಫ್ ಮ್ಯಾರಥಾನ್ ಓಟಗಾರ:

ಉತ್ತಮ ಅಭ್ಯಾಸ, ಆಹಾರ ಪದ್ಧತಿ ಇವುಗಳಿಂದಾಗಿ ಓಟದ ಅಂತರ ಹೆಚ್ಚಲಾರಂಭಿಸಿತು. ದಿನಕ್ಕೆ ಎರಡು ಹೊತ್ತು ಅಭ್ಯಾಸ ಮಾಡಲಾರಂಭಿಸಿದರು. 6 ತಿಂಗಳ ನಿರಂತರ ಅಭ್ಯಾಸದ ಪರಿಣಾಮ ಪ್ರಶಾಂತ 21 ಕಿ.ಮೀ ಅಂತರವನ್ನು ಎಲ್ಲಿಯೂ ತಡೆ ಇಲ್ಲದೆ ಪೂರ್ಣಗೊಳಿಸಿದರು. ಕಚೇರಿಯಲ್ಲಿ ಕುಳಿತು ಆಲಸಿಯಾಗಿದ್ದ ಪ್ರಶಾಂತ ಈಗ ವೃತ್ತಿಪರ ಓಟಗಾರ ಮತ್ತು ಮ್ಯಾರಥಾನ್ ಗಳಲ್ಲಿ ಪಾಲ್ಗೊಳ್ಳುವ ಸ್ಪರ್ಧಿಯಾಗಿ ರೂಪುಗೊಂಡಿದ್ದು ವಿಶೇಷ. ಕಠಿಣ ಶ್ರಮ ನಮ್ಮನ್ನು ಸಾಧನೆಯ ಶಿಖರದ ಕಡೆಗೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಪ್ರಶಾಂತ್ ಹಿಪ್ಪರಗಿ ಉತ್ತಮ ಉದಾಹರಣೆ.

ಫುಲ್ ಮ್ಯಾರಥಾನ್ ಗೆ ಸಜ್ಜು!!!

ಹಾಫ್ ಮ್ಯಾರಥಾನ್ ಅಂತರವನ್ನು 1 ಗಂಟೆ 55 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಪ್ರಶಾಂತ್, 42 ಕಿ.ಮೀ. ಅಂತರವನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿದರು. ಇದು ಪೂರ್ಣ ಮ್ಯಾರಥಾನ್. ಮುಂದಿನ 6 ತಿಂಗಳ ಕಾಲ ಅಭ್ಯಾಸದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಹೆಚ್ಚಿಸಿಕೊಂಡ ಪ್ರಶಾಂತ್, ನಂತರ 42 ಕಿ.ಮೀ. ಅಂತರವನ್ನು 4 ಗಂಟೆ ಮತ್ತು 30 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಸಮಯ ಹೆಚ್ಚು ತೆಗೆದುಕೊಂಡಿದ್ದರೂ ಪೂರ್ಣಗೊಳಿಸುವಲ್ಲಿ ಅವರ ಶ್ರಮ ಮತ್ತು ಬದ್ಧತೆ ಪ್ರಮುಖವಾಗಿತ್ತು. ಅಷ್ಟು ಹೊತ್ತಿಗೆ ಪ್ರಶಾಂತ್ ಅವರ ತೂಕ 75 ಕೆಜಿ ಗೆ ಇಳಿದಿತ್ತು. ಅವರ ಈ ಸಾಧನೆಯನ್ನು ಜನ ಗುರುತಿಸಲಾರಂಭಿಸಿದರು. ಕಂಪೆನಿಯಲ್ಲಿ ಅತ್ಯಂತ ಜವಾಬ್ದಾರಿ ಹುದ್ದೆಯಲ್ಲಿದ್ದ ಪ್ರಶಾಂತ್ ಹಿಪ್ಪರಗಿ ಈ ಸಾಧನೆಗೆ ಸಮಯವನ್ನು ಅನುವುಮಾಡಿಕೊಳ್ಳಬೇಕಾಗಿತ್ತು, ಇದಕ್ಕೆ ಕಂಪೆನಿ ಉತ್ತಮ ರೀತಿಯಲ್ಲಿ ನೆರವು ನೀಡಿತ್ತು ಎಂಬುದನ್ನು ಸ್ಮರಿಸಲು ಪ್ರಶಾಂತ್ ಮರೆತಿಲ್ಲ.

ಐರನ್ ಮ್ಯಾನ್ ಗೆ ಪತ್ನಿಯ ಬೆಂಬಲ!

ಪ್ರಶಾಂತ್ ಕುಮಾರ್ ಹಿಪ್ಪರಗಿ ಅವರ ಸಾಧನೆಯ ಹಾದಿಯಲ್ಲಿ ಕೈ ಜೋಡಿಸಿದ್ದು, ಓಟಕ್ಕೆ ಸ್ಫೂರ್ತಿ ತುಂಬಿದ್ದು ಪತ್ನಿ ಅನಿತಾ. ಇಂದು ಪ್ರಶಾಂತ್ ಐರನ್ ಮ್ಯಾನ್ ಎನಿಸಿಕೊಳ್ಳಲು ಅನಿತಾ  ವಜ್ರದಂತೆ ಆಧಾರವಾದರು. ಅವರ ಸಲಹೆಯಂತೆ ಪ್ರಶಾಂತ್ ಐರನ್ ಮ್ಯಾನ್ ಸಾಧನೆಗೆ ಮುಂದಾದರು. ಒಬ್ಬ ಸಾಮಾನ್ಯ ಓಟಗಾರ ಐರನ್ ಮ್ಯಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಬಲ್ಲ ಎಂಬುದನ್ನು ಪ್ರಶಾಂತ್ ಸಾಬೀತು ಮಾಡಿದರು, ಇದಕ್ಕೆ ಮುಖ್ಯ ಕಾರಣ ನಿರಂತರ ಶ್ರಮ, ಶಿಸ್ತು, ಬದ್ಧತೆ ಮತ್ತು ಛಲ. ಸವಾಲಿನ ಈ ಟ್ರಯಥ್ಲಾನ್ ಸ್ಪರ್ಧೆಗೆ ಪ್ರಶಾಂತ್ ಸಜ್ಜಾದರು. ಇದಕ್ಕಾಗಿ ಟ್ರೈಬನ್ 500 ರೋಡ್ ಬೈಕ್ ಖರೀದಿಸದರು. ಇದು ಆರಂಭಿಸುವವರಗೆ ಇರುವ 50,000 ರೂ, ಮೌಲ್ಯದ ಸೈಕಲ್. ಮೊದಲ ರೈಡ್ ನಲ್ಲೇ 100 ಕಿ.ಮೀ. ಅಂತರವನ್ನು ಪೂರ್ಣಗೊಳಿಸಿದರು. ಇದು ಪ್ರಶಾಂತ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. 2020ರ ಫೆಬ್ರವರಿ 8ರಂದು ನಾಗ್ಪುರದಲ್ಲಿ ನಡೆದ ಒಲಿಂಪಿಕ್ ಡಿಸ್ಟೆನ್ಸ್ ಟ್ರಯಥ್ಲಾನ್ ನಲ್ಲಿ ಪ್ರಶಾಂತ್ ಹೆಸರು ನೋಂದಾಯಿಸಿದರು. 1.5 ಕಿಮೀ ಈಜು, 40 ಕಿ.ಮೀ. ಸೈಕ್ಲಿಂಗ್ ಮತ್ತು 10 ಕಿಮೀ ಓಟ ಈ ಸ್ಪರ್ಧೆಯಲ್ಲಿದ್ದಿತ್ತು.  ಪ್ರಶಾಂತ್ ಈ ಮೂರು ವಿಭಾಗವನ್ನು 2 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿ ತಮ್ಮ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು.

ಕೊರೋನಾ ಅಡ್ಡಿ!

ಕೊರೋನಾ ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿದಾಗಿನಿಂದ ಕ್ರೀಡಾ ಚಟುವಟಿಕೆಗಳೇ ನಿಂತು ಹೋದವು. ಇದು ಪ್ರಶಾಂತ್ ಅವರ ಮುಂದಿನ ಸಾಧನೆಗೂ ಅಡ್ಡಿಯಾಯಿತು. ಆದರೆ ಪ್ರಶಾಂತ್ ತಮ್ಮ ನಿತ್ಯದ ಅಭ್ಯಾಸವನ್ನು ಬಿಡಲಿಲ್ಲ. ಲಾಕ್ ಡೌನ್ ನಲ್ಲಿ ಒಳಾಂಗಣ ಅಭ್ಯಾಸ ಮುಂದುವರಿಸಿದರು. ಮೆಟ್ಟಿಲೇರುವುದು, ಸೂರ್ಯನಮಸ್ಕಾರ, ಬರ್ಪೀಸ್ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಫಿಟ್ನೆಸ್ ಕಾಯ್ದುಕೊಂಡರು.

ಕೊಣಾರ್ಕ್ ಫುಲ್ ಐರನ್ ಮ್ಯಾನ್!!

ಫುಲ್ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳು ಒಂದು ವರ್ಷದ ಕಾಲ ಅಭ್ಯಾಸ ನಡೆಸುತ್ತಾರೆ. ಆದರೆ ಪ್ರಶಾಂತ್ ಕೇವಲ ನಾಲ್ಕು ತಿಂಗಳ ಕಾಲ ಅಭ್ಯಾಸ ನಡೆಸಿದರೂ ಅತ್ಯಂತ ಆತ್ಮವಿಶ್ವಾಸದಲ್ಲಿ ಫೆಬ್ರವರಿ 27, 2021 ರಂದು ಒಡಿಶಾದಲ್ಲಿ ನಡೆದ ಕೊಣಾರ್ಕ್ ಫುಲ್ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದರು. ಅದರಂತೆ ಸಿಕ್ಕದ ಅವಧಿಯಲ್ಲಿಯೇ ಅಭ್ಯಾಸ ನಡೆಸಿದರು. ಈ ನಡುವೆ ನ್ಯೂಯಾರ್ಕ್ ವರ್ಚುವಲ್ ಫುಲ್ ಮ್ಯಾರಥಾನ್ ನಲ್ಲಿ ಹೆಸರು ನೋಂದಾಯಿಸಿದರು. 3 ಗಂಟೆ 36 ನಿಮಿಷಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. ಧಾರವಾಡದ ಸಿಪಿಐ ಮುರುಗೇಶ್ ಚನ್ನಣ್ಣವರ್ ಮತ್ತು ಸದಾನಂದದ ಅಮರ್ಪೂರ್ ಅವರು ರೇಸ್ ಗಾಗಿ ಅಗತ್ಯ ಯೋಜನೆಗಳನ್ನು ರೂಪಿಸುವಲ್ಲಿ ನೆರವಾದರು. ಫುಲ್ ಐರನ್ ಮ್ಯಾನ್ ಸ್ಪರ್ಧೆಗೆ ಅಭ್ಯಾಸ ಆರಂಭಗೊಂಡಿತು. ಕಾಸರ್ಸಾಯಿ ಸರೋವರದಲ್ಲಿ ನಿತ್ಯವೂ 5 ಕಿಮೀ ಈಜು, ಪ್ರತಿ ವಾರ 200 ಕಿ.ಮೀ ಸೈಕ್ಲಿಂಗ್ ಮತ್ತು 100 ಕಿ.ಮೀ ಓಟ. ಈ ನಿರಂತರ ಅಭ್ಯಾಸ ಪ್ರಶಾಂತ್ ಅವರನ್ನು ಒಬ್ಬ ಬಲಿಷ್ಠ ಅಥ್ಲೀಟ್ ಆಗಿ ರೂಪಿಸಿತು. ಇದರ ಫಲವಾಗಿ ಪ್ರಶಾಂತ್ 10 ಕಿಮೀ ಈಜು, 400 ಕಿ.ಮೀ ಸೈಕ್ಲಿಂಗ್ ಮತ್ತು 100 ಕಿ.ಮೀ ತಡೆರಹಿತ ಓಟವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಪಡೆದರು. ಕೊಣಾರ್ಕ್ ಐರನ್ ಮ್ಯಾನ್ ಸ್ಪರ್ಧೆಯ ಮೊದಲಿಗೆ 3.8 ಕಿಮೀ ಅಂತರದ ಕಡಲ ತಟದ ಈಜು, ನಂತರ 180 ಕಿ.ಮೀ ಅಂತರದ ಸೈಕ್ಲಿಂಗ್, ನಂತರ ಉರಿವ ಬಿಸಿಲಿನಲ್ಲಿ 42 ಕಿ.ಮೀ ಓಟ. ಪ್ರಶಾಂತ್ ಹಿಪ್ಪರಗಿ ಈ ಸವಾಲಿನ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. 39ನೇ ವಯಸ್ಸಿನಲ್ಲಿ ಈ ಕಠಿಣ ಸವಾಲನ್ನು ಪೂರ್ತಿಗೊಳಿಸಿದ ಪ್ರಶಾಂತ್ ಹಿಪ್ಪರಗಿ ಅವರಿಗೆ ಎಲ್ಲ ಕಡೆಯಿಂದಲೂ ಪ್ರಶಂಸೆಯ ಸುರಿಮಳೆ.

ಸಾಧಕ ತಂದೆಯಂತೆ ಸಾಹಸಿ ಮಗ!!

ಪ್ರಶಾಂತ್ ಹಿಪ್ಪರಗಿ ಅವರ ತಂದೆ ಪರಪ್ಪ ಬಸಪ್ಪ ಹಿಪ್ಪರಗಿ ಬಾಗಲಕೋಟೆಯ ತುಂಡಾಲ್ ನಿವಾಸಿ. ಅವರು ನಿವೃತ್ತ ಪ್ರಾಂಶುಪಾಲರು, ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯದ ಹಲವು ಕ್ರೀಡಾ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದವರು. ಪ್ರಶಾಂತ್ ಹಿಪ್ಪರಗಿ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಸಂಖ್ ನಲ್ಲಿ ಶಿಕ್ಷಣ ಪಡೆದು ನಂತರ ದಾವಣಗೆರೆಯಲ್ಲಿ ಡಿಪ್ಲೊಮಾ ಮುಗಿಸಿ, ಬಳಿಕ ಬಿಜಾಪುರದಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಪ್ರಶಾಂತ್ ಈಗ ಯುವಕರಲ್ಲಿ ಉತ್ಸಾಹ ತುಂಬು ಸ್ಫೂರ್ತಿಯ ಭಾಷಣಕಾರ. ಪ್ರಶಾಂತ್ ಅವರ ಈ ಸಾಧನೆಯನ್ನು ಗಮನಿಸಿ ಹುಬ್ಬಳ್ಳಿ ಸೈಕ್ಲಿಂಗ್ ಕ್ಲಬ್ ಇವರನ್ನು ಸ್ಫೂರ್ತಿಯ ಭಾಷಣಕ್ಕೆ ಆಹ್ವಾನಿಸಿತು.

ಪ್ರಶಾಂತ್ ಅವರ ಈ ಸಾಧನೆ ಬೇರೆಯವರಿಗೆ ಸ್ಫೂರ್ತಿಯಾಗಲಿ, ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಪ್ರಶಾಂತ್ ನಿರಂತರ ಶ್ರಮದಿಂದ ತೋರಿಸಿದ್ದಾರೆ.

Related Articles