Thursday, November 21, 2024

ಸ್ವರೂಪದಲ್ಲಿ ಸಚಿನ್ ಆಗಮನ 14ನೇ ವಯಸ್ಸಿನಲ್ಲಿ 25 ಶತಕ!

ಸೋಮಶೇಖರ್ ಪಡುಕರೆ ಬೆಂಗಳೂರು

ಈ ಬಾಲಕ ಒಂದು ವೇಳೆ ಮುಂಬೈಯಲ್ಲಿ ಇರುತ್ತಿದ್ದರೆ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದ. ಆದರೆ ಆತ ಕರ್ನಾಟಕದಲ್ಲಿ ಇದ್ದ ಕಾರಣಕ್ಕೆ ಸುದ್ದಿ ಆಗಲಿಲ್ಲವೋ ಏನೋ. ಬೆಂಗಳೂರಿನ ಜಯನಗರದ ಹೋಲಿ ಸೇಂಟ್ಸ್ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ  ಇದುವರೆಗೂ ಗಳಿಸಿದ್ದು, 24 ಶತಕ, 1 ದ್ವಿಶತಕ, ಒಂದೇ ಋತುವಿನಲ್ಲಿ ಗಳಿಸಿದ್ದು ಬರೋಬ್ಬರಿ 2067 ರನ್!.

ನಾನು ಹೇಳ ಹೊರಟಿದ್ದು ಭಾರತದ ಶ್ರೇಷ್ಠ ಆಟಗಾರನಾಗಬಲ್ಲ ಸಾಮರ್ಥ್ಯಹೊಂದಿರುವ ಪುಟ್ಟ ಕ್ರಿಕೆಟಿಗ ಸ್ವರೂಪ್ ಹಿಪ್ಪರಗಿಯ ಬಗ್ಗೆ.
ಕರ್ನಾಟಕದ ಶ್ರೇಷ್ಠ ಕ್ರಿಕೆಟ್ ತರಬೇತಿ ಕೇಂದ್ರವಾಗಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ ಕ್ರಿಕೆಟ್ (ಕೆಐಒಸಿ)ಯಲ್ಲಿ ತರಬೇತಿ ಪಡೆಯುತ್ತಿರುವ ಸ್ವರೂಪ್‌ಗೆ ಸಚಿನ್ ತೆಂಡೂಲ್ಕರ್ ಅವರೇ ಮಾದರಿ. ಬರೇ ಕ್ರಿಕೆಟ್ ದೇವರ ಬಗ್ಗೆ ಪ್ರೀತಿಯಲ್ಲ, ಅವರಂತೆಯೇ ಸಾಧನೆ ಮಾಡಬೇಕೆಂಬ ಹಂಬಲ. ಅದೇ ಹೆಜ್ಜೆಯಲ್ಲಿ ಮುಂದೆ ಸಾಗುತ್ತಿರುವುದು ವಿಶೇಷ.
ಸಂಜೀವ್ ಕುಮಾರ್ ಹಾಗೂ ಪವಿತ್ರಾ ಅವರ ಮುದ್ದಿನ ಮಗನಾಗಿರುವ ಸ್ವರೂಪ್ ಜವಾನ್ಸ್ ಹಾಗೂ ಶಾಲಾ ತಂಡದಲ್ಲಿ ಆರಂಭಿಕ ಆಟಗಾರ. 24 ಶತಕಗಳು ಹಾಗೂ ಒಂದು ದ್ವಿಶತಕ ಸಿಡಿಸಿದ ಸಾಧನೆ ಈಗಾಗಲೇ ಮಾಡಿದ್ದಾರೆ. ತಂದೆ ಸಂಜೀವ್ ಕೂಡ ಫುಟ್ಬಾಲ್ ಹಾಗೂ ಕಬಡ್ಡಿ ಆಟಗಾರ. ತಾತ ಪರಪ್ಪ ಹಿಪ್ಪರಗಿ ಕೂಡ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದವರು. ಸಂಜೀವ್ ಅವರ ಸಹೋದರ ಪ್ರಶಾಂತ್ ಹಿಪ್ಪರಗಿ ಹಾಗೂ ಅವರ ಮಗ ಪ್ರಣೀತ್ ಹಿಪ್ಪರಗಿ ಮ್ಯಾರಥಾನ್‌ನಲ್ಲಿ ಇತಿಹಾಸ ಬರೆದವರು. ಇದರೊಂದಿಗೆ ಹಿಪ್ಪರಗಿ ಕುಟುಂಬ ಕ್ರೀಡಾಕುಟುಂಬವಾಗಿದೆ.
14 ಮತ್ತು 16 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಸ್ವರೂಪ್ 2017ರ ಒಂದೇ ಋತುವಿನಲ್ಲಿ 2067 ರನ್ ಗಳಿಸಿ ಗಮನ ಸೆಳೆದಿದ್ದಾರೆ. 2017ರಲ್ಲಿ ಮೂರು ಟೂರ್ನಿಗಳಲ್ಲಿ ಜಯದ ರೂವಾರಿ ಎನಿಸಿರುವುದು ವಿಶೇಷ. ಜವಾನ್ಸ್ ತಂಡ ಚಾಂಪಿಯನ್, ಬಿಟಿಆರ್ ಕಪ್‌ನಲ್ಲೂ ಸ್ವರೂಪ್ ಅವರ ಸಾಧನೆ ಮಹತ್ತರವಾದುದು. 16 ವಯೋಮಿತಿಯ ಕೆಎಸ್‌ಸಿಎ ಕಪ್ ಬಿಟಿಆರ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರೂಪ್ ಮಿಂಚಿದ್ದನ್ನು ಮರೆಯುವಂತಿಲ್ಲ. 14 ವರ್ಷವಯೋಮಿತಿಯ ರಾಜ್ಯ ತಂಡದಲ್ಲಿ ಆರಂಭಿಕ ಆಟಗಾರನಾಗಿ ಹಲವು ಪಂದ್ಯಗಳಲ್ಲಿ ತಮ್ಮ ಪ್ರಭುತ್ವ ಸಾಧಿಸಿದ್ದಾರೆ. 16 ವರ್ಷ ವಯೋಮಿತಿಯ ಸ್ಕೂಲ್ ಟೂರ್ನಿಯಲ್ಲಿ ಸ್ವರೂಪ್ ಅವರ ಸಾಧನೆಯಿಂದ ಹೋಲಿ ಸೇಂಟ್ ಶಾಲಾ ತಂಡ ಫೈನಲ್ ತಲುಪಿದೆ.
ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೀಡುವ ವಾರ್ಷಿಕ ಪ್ರಶಸ್ತಿಯಲ್ಲಿ ಸ್ವರೂಪ್ ಹೊರತುಪಡಿಸಿದರೆ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಗೆ ಬೇರೆ ಬ್ಯಾಟ್ಸ್‌ಮನ್ ಆಯ್ಕೆಗೆ ಅವಕಾಶವೇ ಇರಲಿಲ್ಲ. ಸ್ವರೂಪ್ ಎರಡು ಬಾರಿ ಬೆಸ್ಟ್ ಬ್ಯಾಟ್ಸ್‌ಮನ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದರು. 14 ವರ್ಷ ವಯೋಮಿತಿಯ ಇಂಟರ್ ಕ್ಲಬ್ ಹಾಗೂ 16 ವರ್ಷ ವಯೋಮಿತಿಯ 2ನೇ ಡಿವಿಜನ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವುದಕ್ಕಾಗಿ ಸ್ವರೂಪ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬೆಳಿಗ್ಗೆ ೫ ರಿಂದ ರಾತ್ರಿ ೧೦
ಸ್ವರೂಪ್ ಅವರ ಮನೆ ಇರುವುದು ಬೆಂಗಳೂರಿನ ಕೆ.ಆರ್.ಪುರದಲ್ಲಿ. ತಾಯಿ ಪವಿತ್ರ ಅವರಿಗೆ ಬೆಳಿಗ್ಗೆ 4 ಗಂಟೆಗೆ ಎದ್ದು ಮಗನನ್ನು ಸಿದ್ಧಗೊಳಿಸುವುದು ದೊಡ್ಡ ಜವಾಬ್ದಾರಿ. 5 ಗಂಟೆಗೆ ಮನೆ ಬಿಟ್ಟರೆ ಸ್ವರೂಪ್ ಶಾಲೆ, ಕ್ರಿಕೆಟ್ ಅಭ್ಯಾಸ ಸೇರಿದಂತೆ ಮತ್ತೆ ಮನೆ ಸೇರುವುದು ರಾತ್ರಿ 10 ಗಂಟೆಗೆ. ೫ನೇ ವಯಸ್ಸಿನಿಂದ ಪ್ಲಾಸ್ಟಿಕ್ ಬ್ಯಾಟ್ ಹಾಗೂ ಪ್ಲಾಸ್ಟಿಕ್ ಚೆಂಡಿನಲ್ಲಿ ಕ್ರಿಕೆಟ್ ಆರಂಭಿಸಿದ ಸ್ವರೂಪ್ ಅವರನ್ನು ಉತ್ತಮ ಕ್ರಿಕೆಟಿಗನನ್ನಾಗಿ ರೂಪಿಸುವಲ್ಲಿ ಕೆಐಒಸಿಯ ಕೋಚ್ ಇರ್ಫಾನ್ ಶೇಟ್ ಹಾಗೂ ಹೋಲಿ ಸೇಂಟ್ ಶಾಲೆಯ ಕೋಚ್ ರಮೇಶ್ ಅವರ ಪಾತ್ರ ಪ್ರಮುಖವಾಗಿದೆ. ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿರುವ ತಂದೆ ಸಂಜೀವ್ ಕುಮಾರ್ ಮಗನಿಗೆ ಮನೆಯಲ್ಲೂ ದಿನಕ್ಕೆ 200 ಎಸೆತಗಳನ್ನು ಎಸೆದು ಬ್ಯಾಟಿಂಗ್‌ಗೆ ನೆರವು ನೀಡುತ್ತಿದ್ದಾರೆ. 6 ವರ್ಷದ ಮಗುವಿದ್ದಾಗಲೇ ಅಕಾಡೆಮಿ ಸೇರಿಕೊಂಡ ಸ್ವರೂಪ್ ಅವರ ಬ್ಯಾಟಿಂಗ್‌ನಲ್ಲಿ ಹಿರಿಯ ಆಟಗಾರರ ಛಾಪು ಇದೆ. ರನೌಟ್ ಹೊರತುಪಡಿಸಿದರೆ ಸ್ವರೂಪ್ ಅವರನ್ನು ಔಟ್ ಮಾಡುವುದೇ ಬೌಲರ್‌ಗಳಿಗೆ ಕಷ್ಟದ ಕೆಲಸವಾಗಿತ್ತು. ಹತ್ತನೇ ವಯಸ್ಸಿನಲ್ಲೇ ಸ್ವರೂಪ್ ಕ್ರಿಕೆಟ್ ಬದುಕಿನ ಮೊದಲ ಶತಕ ಸಿಡಿಸಿ ಅಚ್ಚರಿ ಮೂಡಿಸಿದರು. ತಂಡದ ಪಾಲಿಗೆ ಸ್ವರೂಪ್ ಮಿಸ್ಟರ್ ಡಿಪೆಂಡೆಬಲ್ ಆಗಿದ್ದಾರೆ.
‘ಕ್ರಿಕೆಟ್ ನನ್ನ ಉಸಿರು, ಸಚಿನ್ ತೆಂಡೂಲ್ಕರ್ ನನಗೆ ಮಾದರಿ. ಆಟದಲ್ಲಿ ಏಕಾಗ್ರತೆ ನನ್ನ ಗುರಿ. ಮುದೊಂದು ದಿನ ಭಾರತವನ್ನು ಪ್ರತಿನಿಧಿಸುವುದು ನನ್ನ ಮುಂದಿರುವ ಸವಾಲು. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತೇನೆ. ನನ್ನ ಅಪ್ಪ ಅಮ್ಮ ಅದಕ್ಕಾಗಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಕೋಚ್ ಇರ್ಫಾನ್ ಶೇಟ್ ನನ್ನ ಕ್ರಿಕೆಟ್ ಬದುಕಿನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಸ್ಥಿರ ಪ್ರದರ್ಶನ ತೋರಿ ಕರ್ನಾಟಕದ ಕ್ರಿಕೆಟ್‌ನಲ್ಲಿ ಸ್ಥಿರವಾಗಿರಬೇಕೆಂಬ ಆಸೆ,‘ ಎಂದು ಹೇಳುವ ಸ್ವರೂಪ್ ಅವರ ಮಾತಿನಲ್ಲಿ ಆತ್ಮವಿಶ್ವಾಸ ಸ್ಪಷ್ಟವಾಗಿತ್ತು.
ಸಚಿನ್ ತೆಂಡೂಲ್ಕರ್ ಅವರನ್ನು ಆದರ್ಶವಾಗಿರಿಸಿಕೊಂಡಿರುವವರು ಅನೇಕ ಕ್ರಿಕೆಟಿಗರು ಹಾಗೂ ಇತರ ಕ್ರೀಡಾಪಟುಗಳು ಸಿಗುತ್ತಾರೆ.  ಆದರೆ ಅವರಂತೆಯೇ ದಿನದಿಂದ ದಿನಕ್ಕೆ ತನ್ನ ಆಟದಲ್ಲಿ ಅವರ ಲಕ್ಷಣಗಳನ್ನು ತೋರಿಸುವವರು ವಿರಳ. ಅಂಥ ವಿರಳ ಪಂಕ್ತಿಯಲ್ಲಿ ಕಾಣಸಿಗುವ ಸ್ವರೂಪ್ ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸಲಿ. ಕರ್ನಾಟಕದಿಂದ ಸಚಿನ್ ತೆಂಡೂಲ್ಕರ್ ಅವರಂಥ ಕ್ರಿಕೆಟಿಗರೊಬ್ಬರು ದೇಶದ ಪರ ಆಡಲಿ ಎಂಬುದೇ ಹಾರೈಕೆ.
ಸ್ವರೂಪ್ ಅವರ ಕ್ರಿಕೆಟ್ ಸಾಧನೆಯ ಹೈಲೈಟ್ಸ್ 
14 ಮತ್ತು 16 ವರ್ಷ ವಯೋಮಿತಿಯ ಪಂದ್ಯಗಳಲ್ಲಿ ಗಳ್ಸಿದ್ದು ಒಟ್ಟು 2067 ರನ್.
24 ಶತಕ ಹಾಗೂ ಒಂದು ದ್ವಿಶತಕ.
ಇದರಲ್ಲಿ 13 ಶತಕ ಹಾಗೂ ದ್ವಿಶತಕ ಕೆಎಸ್ಸಿಎ  14 ಮತ್ತು 16 ವರ್ಷ ವಯೋಮಿತಿಯ ಪಂದ್ಯಗಳಲ್ಲಿ.
ಬೆಂಗಳೂರಿನಲ್ಲಿ ನಡೆದ ಪ್ರಮುಖ ಮೂರು ಟೂರ್ನಿ ಗೆಲ್ಲುವಲ್ಲಿ ಸ್ವರೂಪ್ ಅವರ ಪಾತ್ರ ಪ್ರಮುಖವಾಗಿತ್ತು.
14 ವರ್ಷ ವಯೋಮಿತಿಯ ಇಂಟರ್ ಕ್ಲಬ್ ಟೂರ್ನಿ – ಜವಾನ್ಸ್ ಕ್ಲಬ್ ಚಾಂಪಿಯನ್.
14 ವರ್ಷ ವಯೋಮಿತಿಯ ಬಿ ಟಿ ಆರ್ 2ನೇ ಡಿವಿಜನ್ -ಹೋಲಿ ಸೇಂಟ್ಸ್ ಸ್ಕೂಲ್ ಚಾಂಪಿಯನ್.
16 ವರ್ಷ ವಯೋಮಿತಿಯ ಕೆ ಎಸ್ ಸಿ ಎ ಕಪ್ ಫಸ್ಟ್ ಡಿವಿಜನ್ -ಹೋಲಿ ಸೇಂಟ್ಸ್ ಸ್ಕೂಲ್ ಚಾಂಪಿಯನ್ಸ್.
ಕೆ ಎಸ್ ಸಿ ಎ ವಾರ್ಷಿಕ ಪ್ರಶಸ್ತಿಯಲ್ಲಿ ಎರಡು ಉತ್ತಮ ಬ್ಯಾಟ್ಸಮನ್ ಗೌರವ.

Related Articles