ಸೋಮಶೇಖರ್ ಪಡುಕರೆ, ಬೆಂಗಳೂರು
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇವೆಲ್ಲವನ್ನೂ ಮೀರಿ ನಿಲ್ಲುವಂತೆ ಆಮೆರಿಕದಲ್ಲಿ ಕ್ರಿಕೆಟ್ ಬೆಳೆಯುತ್ತಿದೆ. ಕ್ರಿಕೆಟ್ ಜಗತ್ತಿನ ಅನೇಕ ಯುವ ಆಟಗಾರರು ಅಮೆರಿಕವನ್ನು ಸೇರಿಕೊಳ್ಳುತ್ತಿದ್ದಾರೆ.
ಈಗಾಗಲೇ ಮೈನರ್ ಲೀಗ್ ಗಳಲ್ಲಿ ಯುವ ಕ್ರಿಕೆಟಿಗರು ಮಿಂಚುತ್ತಿದ್ದಾರೆ. ಮೇಜರ್ ಲೀಗ್ ಗೆ ವೇದಿಕೆ ಸಜ್ಜಾಗಿದೆ. ಅಮೆರಿಕದ ಈ ಸಂಭ್ರಮದಲ್ಲಿ ಕರ್ನಾಟಕದ ಕ್ರಿಕೆಟಿಗರು ಇಲ್ಲವೆಂದರೆ ಅದು ಅಪೂರ್ಣ. ಹಲವಾರು ಆಟಗಾರರು ಇಲ್ಲಿ ಕ್ಲಬ್ ಗಳಲ್ಲಿ ಲೀಗ್ ಪಂದ್ಯಗಳನ್ನು ಆಡುತ್ತಿದ್ದಾರೆ. ಅಂಥ ಯುವ ಕ್ರಿಕೆಟಿಗರಲ್ಲಿ ಬೆಂಗಳೂರಿನ ಸಂಜಯ್ ಕೃಷ್ಣಮೂರ್ತಿ ಅಮೆರಿಕ ತಂಡದಲ್ಲಿ ಮಿಂಚುತ್ತಿದ್ದಾರೆ. 18ರ ಹರೆಯದ ಸಂಜಯ್ ಈಗಾಗಲೇ ಲೀಗ್ ಪಂದ್ಯಗಳಲ್ಲಿ ಮಿಂಚಿ ಒಮನ್ ವಿರುದ್ಧದ ಅಂತಾರಾಷ್ಟ್ರೀಯ ಟಿ20 ಸರಣಿಗೆ ಆಯ್ಕೆಯಾದರು.
ಸದ್ಯ ಅಮೆರಿಕದಲ್ಲೇ ವ್ಯಾಸಂಗ ಮಾಡತ್ತಿರುವ ಸಂಜಯ್ ಕೃಷ್ಣಮೂರ್ತಿ ಅ.3 ರಂದು ಮುಕ್ತಾಯಗೊಂಡ ಮೈನರ್ ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿದ್ದರು, ಆದರೆ ಅಮೇರಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ಮೈನರ್ ಲೀಗ್ ನಲ್ಲಿ ಇವರ ತಂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಭಾರತದ ಉನ್ಮುಕ್ತ್ ಚಾಂದ್ ನಾಯಕತ್ವ ಸಿಲಕಾನ್ ವ್ಯಾಲಿ ಸ್ಟ್ರೈಕರ್ಸ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
18 ವರ್ಷದ ಸಂಜಯ್ ಕೃಷ್ಣಮೂರ್ತಿ ಅಮೆರಿಕ ತಂಡದಲ್ಲೇ ಅತ್ಯಂತ ಕಿರಿಯ ಆಟಗಾರ. ಉತ್ತಮ ಆಲ್ರೌಂಡರ್. ಚಿಕ್ಕಂದಿನಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದ ಅವರು ಪಳಗಿದ್ದು ಕರ್ನಾಟಕದ ಖ್ಯಾತ ಕ್ರಿಕೆಟಿಗ ಜೆ. ಅರುಣ್ ಕುಮಾರ್ ಅವರ ಗರಡಿಯಲ್ಲಿ. ಕುತೂಹಲದ ಸಂಗತಿಯೆಂದರೆ ಜೆ. ಅರುಣ್ ಕುಮಾರ್ ಈಗ ಅಮೆರಿಕ ಕ್ರಿಕೆಟ್ ತಂಡದ ಪ್ರಧಾನ ಕೋಚ್. ಕರ್ನಾಟಟಕ ರಣಜಿ ತಂಡದ ಕೋಚ್ ಆಗಿದ್ದ ‘ಜಾಕ್’ ಈಗ ಅಮೆರಿಕ ಕ್ರಿಕೆಟ್ ಗೆ ಹೊಸ ಜೀವ ತುಂಬುತ್ತಿದ್ದಾರೆ.
ಬೆಂಗಳೂರಿನಲ್ಲಿ ಪ್ರಕಾಶ್ ಪಡುಕೋಣೆ-ರಾಹುಲ್ ದ್ರಾವಿಡ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಸಂಜಯ್ ಕೃಷ್ಣಮೂರ್ತಿ ಅವರಿಗೆ ಚಿಕ್ಕಂದಿನಲ್ಲೇ ಉತ್ತಮ ವೇದಿಕೆ ಸಿಕ್ಕಿ, ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಈಗ ಅಮೆರಿಕ ತಂಡದಲ್ಲಿ ಮಿಂಚುತ್ತಿರುವ ಅವರು ತನ್ನ ತಾಯ್ನಾಡ ಕೊಡುಗೆಯನ್ನು ಸ್ಮರಿಸುತ್ತಾರೆ.
ಕನ್ನಡ ಭಾಷೆ ಕಲಿತು ಆಮೇಲೆ ಮದುವೆ!!
ಸಂಜಯ್ ಕೃಷ್ಣಮೂರ್ತಿ ಅವರೊಂದಿಗೆ ಮಾತನಾಡಲು ಕರೆ ಮಾಡಿದಾಗ ಮಾತಿಗೆ ಸಿಕ್ಕಿದ್ದು ಅವರ ತಂದೆ ಕೃಷ್ಣಮೂರ್ತಿ. ಅಪ್ಪಟ ಕನ್ನಡ ಅಭಿಮಾನಿ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೂ ಅವರ ಮಾತಿನಲ್ಲಿ ಎಲ್ಲಿಯೂ ಇಂಗ್ಲಿಷ್ ಪದಗಳು ನುಸುಳುತ್ತಿರಲಿಲ್ಲ. ಮಗನ ಕ್ರಿಕೆಟ್ ಬದುಕು ಮತ್ತು ಅಮೆರಿಕದ ಕ್ರಿಕೆಟ್ ನ ಬಗ್ಗೆ ಸಾಕಷ್ಟು ಹೊತ್ತು ಮಾತನಾಡಿದ ಕೃಷ್ಣಮೂರ್ತಿ ಅವರಲ್ಲಿ ಕುಟುಂಬದ ಬಗ್ಗೆ ಮಾತನಾಡಿದಾಗ ಕುತೂಹಲದ ಲವ್ ಸ್ಟೋರಿಯೊಂದು ಮನಸ್ಸಿಗೆ ಮುದ ನೀಡಿತು. ಮದುವೆ ಆಗಲು ಸಾಮಾನ್ಯವಾಗಿ ಆಸ್ತಿ, ಅಂತಸ್ತು, ಹಣ, ಸೌಂದರ್ಯ ಇವನ್ನೆಲ್ಲ ನೋಡುತ್ತಾರೆ ಹಾಗೂ ಡಿಮ್ಯಾಂಡ್ ಮಾಡುತ್ತಾರೆ, ಆದರೆ ಇಲ್ಲೊಬ್ಬರು ಮೊದಲು ಕನ್ನಡ ಭಾಷೆ ಕಲಿಯುವೆ ಆಮೇಲೆ ನಿಮ್ಮ ಮದುವೆಯಾಗುವೆ ಎಂದು ಹೇಳಿರುವುದು ನಿಜವಾಗಿಯೂ ಅಪೂರ್ವ ಸನ್ನಿವೇಶ.
ಸಂಜಯ್ ಅವರ ತಂದೆ ಕೃಷ್ಣಮೂರ್ತಿ ಬೆಂಗಳೂರಿನವರು. ಬಹಳಷ್ಟು ಕಾಲ ಬೆಂಗಳೂರು ಮತ್ತು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದವರು. ಈ ಸಂದರ್ಭದಲ್ಲಿ ಅಮೆರಿಕದ ಜೂಲಿ ಅವರ ಪರಿಚಯವಾಯಿತು. ಅದು ಪ್ರೇಮಕ್ಕೆ ತಿರುಗಿ ಮದುವೆ ಹಂತದವರೆಗೂ ತಲುಪಿತು. ಮದುವೆ ಪ್ರಸ್ತಾಪ ಬಂದಾಗ ಜೂಲಿಯವರು ಕೂಡಲೇ ಒಪ್ಪಲಿಲ್ಲ. ಮೊದಲು ನಿಮ್ಮ ಮಾತೃಭಾಷೆ ಕನ್ನಡವನ್ನು ಕಲಿತು ಆಮೇಲೆ ನಿಮ್ಮನ್ನು ಮದುವೆಯಾಗುವೆ ಎಂದರಂತೆ. ಕೃಷ್ಣಮೂರ್ತಿ ಅವರಿಗೆ ಇದು ಅಚ್ಚರಿಯನ್ನುಂಟುಮಾಡಿತು. ಸುಮಾರು ಒಂದು ವರ್ಷಗಳ ಕಾಲ ಕನ್ನಡವನ್ನು ಕಲಿತು ಆ ಮೇಲೆ ಮದುವೆ ನಡೆಯಿತು. “ಒಬ್ಬರನ್ನು ಅರ್ಥೈಸಿಕೊಳ್ಳಬೇಕಾದರೆ ಅವರ ಭಾಷೆ ಮೊದಲು ಗೊತ್ತಿರಬೇಕು. ಅದರಲ್ಲೂ ಮಾತೃಭಾಷೆ ಗೊತ್ತಾದರೆ ಸಂಸಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಇರುವುದಿಲ್ಲ. ಸಂವಹನದ ಕೊರತೆಯಿಂದ ಹಲವಾರು ಸಂದೇಹಗಳು ಹುಟ್ಟಿಕೊಳ್ಳುತ್ತವೆ, ಈ ಕಾರಣದಿಂದಾಗಿ ಅವರು ಭಾಷೆ ಕಲಿತ ನಂತರವೇ ಮದುವೆಯಾಗುವುದಾಗಿ ಬೇಡಿಕೆ ಇತ್ತರು, ಅದರಂತೆ ಮದುವೆಯಾದವೆವು,” ಎನ್ನುತ್ತಾರೆ ಕೃಷ್ಣಮೂರ್ತಿ. ಜೂಲಿ ಅವರು ಈಗ ಅಪ್ಪಟ ಕನ್ನಡತಿ. ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ಕೃಷ್ಣಮೂರ್ತಿ ದಂಪತಿಗೆ ಮೂವರು ಮಕ್ಕಳು. ಸಂಜಯ್, ವಿಜಯ್ ಮತ್ತು ಪ್ರಣಯ್.
ಅಮೆರಿಕದಲ್ಲಿ ಕರ್ನಾಟಕದ ಕ್ರಿಕೆಟಿಗ ಸಂಜಯ್ ಕೃಷ್ಣಮೂರ್ತಿ ಯಶಸ್ಸು ಕಾಣಲಿ.