ಸೋಮಶೇಖರ್ ಪಡುಕರೆ ಬೆಂಗಳೂರು
ಕಳೆದ ವಾರ ಮೈಸೂರಿನಲ್ಲಿ ದಸರಾ ವಾಲಿಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದ ಕುಮಾರ್ ಆಟಗಾರರನ್ನು ಪರಿಚಯಿಸುತ್ತ, ’ನೋಡಿ ಸರ್ ಅವರು ತ್ರಿವೇಣಿ, ಅಂತ. ಒಂದಲ್ಲ… ಎರಡಲ್ಲ ಸಿನಿಮಾದಲ್ಲಿ ನಟಿಸಿದ್ದಾರೆ. ಉತ್ತಮ ನಟಿ. ರಂಗಕರ್ಮಿ’ ಎಂದರು
. ಕುತೂಹಲವೆನಿಸಿತು. ಪಂದ್ಯ ಮುಗಿದ ನಂತರ ಮಾತನಾಡಿಸಿದೆ. ತ್ರಿವೇಣಿ ಅವರ ಬದುಕಿನ ಕತೆಯನ್ನು ಕೇಳಿದಾಗ ಅಚ್ಚರಿಯಾಯಿತು. ಒಬ್ಬ ಕ್ರೀಡಾಪಟು, ಒಬ್ಬ ರಂಗಕರ್ಮಿ ಹಾಗೂ ಒಬ್ಬ ಸಿನಿಮಾ ತಾರೆ ಎಲ್ಲರೂ ಅವರೊಬ್ಬರಲ್ಲೇ ಒಂದಾಗಿರುವುದು ವಿಶೇಷವೆನಿಸಿತು.
ರಂಗಭೂಮಿಯಲ್ಲಿ ಸಕ್ರಿಯರಾಗಿರುವ ತ್ರಿವೇಣಿ ಇದುವರೆಗೂ 80ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ರಾಮಾರೇರಾಮಾ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ಚಿತ್ರ ಒಂದಲ್ಲಾ ಎರಡಲ್ಲಾ ಅರದಲ್ಲಿ ಬರುವ ಫಾತಿಮಾ ಪಾತ್ರದಲ್ಲಿ ಮಿಂಚಿರುವ ತ್ರಿವೇಣಿ ರಾಜ್ಯದ ಪ್ರತಿಭಾವಂತ ವಾಲಿಬಾಲ್ ಆಟಗಾರ್ತಿ.ಡಿಫೆನ್ಸ್ ವಿಭಾಗದಲ್ಲಿ ಆಡುವ ತ್ರಿವೇಣಿ, ಎದುರಾಳಿ ತಂಡಕ್ಕೆ ದಿಟ್ಟ ಸವಾಲು ಹಾಕಬಲ್ಲ ದಿಟ್ಟೆ.
ಅಕ್ಕ ಜಾಹ್ನವಿ ಕೂಡ ಕ್ರೀಡೆ ಹಾಗೂ ರಂಗಭೂಮಿಯಲ್ಲಿ ತೊಡಗಿಕೊಂಡವರು. ಅಕ್ಕನೇ ತ್ರಿವೇಣಿಗೆ ಸ್ಫೂರ್ತಿ. ದಾಕ್ಷಾಯಿಣಿ ಭಟ್ ಅವರ ದೃಶ್ಯರಂಗ ತಂಡದಲ್ಲಿ ತ್ರಿವೇಣಿ ಸಕ್ರಿಯ ಸದಸ್ಯೆ. ಸಂಜೆ 3 ರಿಂದ 5 ರವರೆಗೆ ವಾಲಿಬಾಲ್, 5 ರಿಂದ 8ರವರೆಗೆ ನಾಟಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಂದೆ ಮಂಜುನಾಥ್ ಬಿ.ಕೆ. ಹಾಗೂ ತಾಯಿ ಶ್ರೀಲಕ್ಷ್ಮೀ ಮಗಳಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ನಾಟಕ ಹಾಗೂ ವಾಲಿಬಾಲ್ ಎರಡರಲ್ಲೂ ತೊಡಗಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ತ್ರಿವೇಣಿ.
ದಕ್ಷಿಣ ವಲಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿರುವ ತ್ರಿವೇಣಿಗೆ ನಟ ಉಪೇಂದ್ರ ಅವರ ಅಭಿನಯ ಬಹಳ ಇಷ್ಟವಂತೆ. ಕ್ಲಾಸಿಕ್ ಸಿನಿಮಾ ಹೊರತಾಗಿ ಬೇರೆ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ ಎಂದರು.
ತ್ರಿವೇಣಿ ಉತ್ತಮ ಆಟಗಾರ್ತಿ. ಪ್ರತಿಯೊಂದು ಪಂದ್ಯದಲ್ಲೂ ಮಿಂಚುತ್ತಾರೆ. ಅವರು ಕರ್ನಾಟಕ ತಂಡದಲ್ಲಿರುವುದೇ ನಮ್ಮೆಲ್ಲರ ಹೆಮ್ಮೆ. ಕ್ರೀಡೆ ಹಾಗೂ ಕಲೆ ಎರಡರಲ್ಲೂ ಮಿಂಚುತ್ತಿರುವ ಪ್ರತಿ‘ೆಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಅವಕಾಶ ಸಿಗಲಿದೆ ಎಂದು ರಾಜ್ಯ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದ ಕುಮಾರ್ ಹೇಳಿದ್ದಾರೆ.