ಸ್ಪೋರ್ಟ್ಸ್ ಮೇಲ್ ವರದಿ
ಜಗತ್ತಿನ ಅತ್ಯಂತ ಅಪಾಯಕಾರಿ ಮೋಟಾರ್ ರ್ಯಾಲಿಗಳಲ್ಲಿ ಒಂದೆನಿಸಿರುವ ರೈಡ್ ಡೆ ಹಿಮಾಲಯಕ್ಕೆ ಇನ್ನೆರಡು ದಿನಗಳಲ್ಲಿ ಚಾಲನೆ ಸಿಗಲಿದೆ. ಈ ರ್ಯಾಲಿಯಲ್ಲಿ ಸಾಮಾನ್ಯರೇ ಸ್ಪರ್ಧಿಸುವುದು ಕಷ್ಟ. ಅದಲ್ಲೂ ಕಾಲು ಕಳೆದಕೊಂಡವರು ಸ್ಪರ್ಧಿಸುತ್ತಿದ್ದಾರೆಂದರೆ ಅಚ್ಚರಿಯೇ ಸರಿ.
ಹೌದು ಈ ಬಾರಿಯ ರ್ಯಾಲಿಯಲ್ಲಿ ಇಬ್ಬರು ವಿಶೇಷ ಸಾಧಕರು ಪಾಲ್ಗೊಳ್ಳುತ್ತಿದ್ದಾರೆ. ರೈಡ್ ಡೆ ಹಿಮಾಲಯ ಜಗತ್ತಿನ ಅತ್ಯಂತ ಎತ್ತರದ ಪ್ರದೇಶದಲ್ಲಿ ನಡೆಯುವ ರ್ಯಾಲಿ ಎಂದರೆ ಅದು ರೈಡ್ ಡೆ ಹಿಮಾಲಯ. ಈ ಜಾಗತಿಕ ರಾಲಿಯಲ್ಲಿ ಇತಿಹಾಸ ಬರೆಯುತ್ತಿರುವವರು ಮುಂಬೈಯ ವಿನೋದ್ ರಾವತ್ ಹಾಗೂ ನಾಗ್ಪುರದ ಅಶೋಕ್ ಮುನ್ನೆ. ದೇಶದಲ್ಲಿರುವ ರಾಲಿಪಟುಗಳ ನೈಜ ಸಾಮರ್ಥ್ಯವನ್ನು ಪರೀಕ್ಷಿಸುವ ಈ ರಾಲಿಯಲ್ಲಿ ಕಾಲಿಲ್ಲದವರು ಏನು ಮಾಡಿಯಾರು? ಎಂಬ ಪ್ರಶ್ನೆ ಸಾಮಾನ್ಯರನ್ನು ಕಾಡಬಹುದು. ಆದರೆ ವಿನೋದ್ ಹಾಗೂ ಅಶೋಕ್ ಅವರು ನಾವು ಸಾಧಿಸಬಲ್ಲೆವು ಎಂಬುದನ್ನು ತೋರಿಸಿಕೊಡಲು ಮುಂದಾಗಿದ್ದಾರೆ.
ಇದೇ 8ರಂದು ಆರಂಭಗೊಳ್ಳಲಿರುವ ರಾಲಿ 14ರಂದು ಕೊನೆಗೊಳ್ಳಲಿದೆ. ಲೆಹ್‌ದಿಂದ ಆರಂಭಗೊಳ್ಳಲಿರುವ ರೇಸ್ ಹಿಮಾಲಯದ ಕಠಿಣ ಹಾದಿಯಲ್ಲಿ ಸಾಗಲಿದೆ, ಕಾರ್ಗಿಲ್, ಜನ್‌ಸ್ಕಾರ್ ಹಾಗೂ ಲಡಾಕ್‌ನಿಂದ ಕೂಡಿದ ಬಂಡೆ, ಕಣಿವೆ ಹಾಗೂ ದೂಳಿನ ಹಾದಿಯನ್ನು ಒಳಗೊಂಡಿರುತ್ತದೆ.
ಕಾಲು ಕಸಿದುಕೊಂಡ ರೈಲು ಅಪಘಾತ
ವಿನೋದ್ ಹಾಗೂ ಅಶೋಕ್ ರ್ಯಾಲಿಯ ಕಠಿಣ ಭಾಗವಾಗಿರುವ ರೈಡ್-ಎಕ್ಸ್‌ಟ್ರೀಮ್ ಮೋಟೋ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಮುದ್ರಮಟ್ಟದಿಂದ ಅತ್ಯಂತ ಎತ್ತರದಲ್ಲಿ ಸಾಗುವ ಈ ರ್ಯಾಲಿಯಲ್ಲಿ ಕೆಲವರು ಮಾತ್ರ ಯಶಸ್ಸು ಕಾಣಬಹುದು. ನಾಗ್ಪುರದ ಸವಾರ ಅಶೋಕ್ ಮುನ್ನೆ ರೈಡ್ ಡೆ ಹಿಮಾಲಯದಲ್ಲಿ ಪಾಲ್ಗೊಳ್ಳುತ್ತಾರೆಂದು ಯಾರೂ ಊಹಿಸಿರಲಿಲ್ಲ. ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಮಿಂಚಿರುವ ಅಶೋಕ್ ಸಾಮಾನ್ಯರೊಂದಿಗೂ ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದಿರುತ್ತಾರೆ. 34 ವರ್ಷದ ಅಶೋಕ್ ಮುನ್ನೆ ಪರ್ವತಾರೋಹಿ, ತಜ್ಞ ಪ್ಯಾರಾ ಗ್ಲೈಡರ್, ಸ್ಕ್ಯೂಬಾ ಡೈವರ್, ಮ್ಯಾರಥಾನ್ ರನ್ನರ್, ಮಾರ್ಷಲ್ ಆರ್ಟ್ಸ್‌ಲ್ಲಿ ಬ್ಲ್ಯಾಕ್ ಬೆಲ್ಟ್, ಜಿಮ್ನಾಸ್ಟ್ ಹಾಗೂ ಕಯಾಕ್ ತಜ್ಞ, ಯೋಗ ಪಟು, ಜತೆಯಲ್ಲಿ ಉತ್ತಮ ಈಜುಗಾರ.
ಅಶೋಕ್ ಮುನ್ನೆ ೨೦೧೬ರಲ್ಲಿ ಮೌಂಟ್ ಎವರೆಸ್ಟ್ ಏರಿದ್ದು, ೨೦೧೯ರಲ್ಲಿ ಮತ್ತೆ ಆ ಸಾಧನೆ ಮಾಡಲಿದ್ದಾರೆ. ೨೦೦೮ರಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಅಶೋಕ್ ಬದುಕಿನ ಪ್ರತಿಯೊಂದು ಸವಾಲನ್ನೂ ಸ್ವೀಕರಿಸಿದ್ದಾರೆ. ಎಲ್ಲಿಯೂ ತಾನೊಬ್ಬ ಅಂಗವಿಕಲ ಎಂಬುದನ್ನು ತೋರಿಸಿಕೊಳ್ಳಲಿಲ್ಲ. ಈಗ ಅವರ ಮುಂದಿರುವ ಗುರಿ ರೈಡ್ ಡೇ ಹಿಮಾಲಯ ರ್ಯಾಲಿಯನ್ನು ಪೂರ್ಣಗೊಳಿಸುವುದು.
‘ರೈಲು ದುರಂತದಲ್ಲಿ ಕಾಲು ಕಳೆದುಕೊಂಡಾಗ ನನಗೆ ೨೪ ವರ್ಷ. ನನ್ನ ಬದುಕೇ ಕೊನೆಗೊಂಡಿತು ಎಂಬ ರೀತಿಯಲ್ಲಿ ಜನ ಆಡಿಕೊಂಡಿದ್ದರು. ಆದರೆ ಬದುಕಿನಲ್ಲಿ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ನಾನು ಜನರಿಗೆ ತೋರಿಸಿಕೊಟ್ಟಿರುವೆ. ದೈಹಿಕವಾಗಿ ನಾನು ಅಸಮರ್ಥನಿರಬಹುದು, ಆದರೆ ನಾನು ಹೇಗೆ ಬದುಕುಬೇಕು ಹಾಗೆ ಬದುಕುತ್ತಿದ್ದೇನೆ,‘ ಎಂದು ಅಶೋಕ್ ಮುನ್ನೆ ಹೇಳಿದ್ದಾರೆ.
ಮುನ್ನೇ ಬ್ಲೇಡ್ ಕಾಲು ಬಳಸಿ ಸಾಧನೆ ಮಾಡುತ್ತಾರೆ. ಅವರು ಕೃತಕ ಕಾಲು ಉತ್ಪಾದಿಸುವ ಎರಡು ಬಹುರಾಷ್ಟ್ರೀಯ ಕಂಪೆನಿಗಳ ರಾಯಭಾರಿಯಾಗಿರುತ್ತಾರೆ. ನೇಪಾಳದಲ್ಲಿ ಸಮುದ್ರಮಟ್ಟದಿಂದ ೬೪೭೬ ಮೀ. ಎತ್ತರದಲ್ಲಿರುವ ಮೀರಾ ಶಿಖರವನ್ನು ಏರಿದ್ದಾರೆ. ಅದೂ ಆಮ್ಲಜನಕದ ಸಿಲಿಂಡರ್ ಬಳಸದೆ. ೨೦೧೩ರಲ್ಲಿ ಮೋಟಾರ್ ಬೈಕ್‌ನಲ್ಲಿ ಲಡಾಕ್‌ನಲ್ಲಿ ೩೦೦೦ ಕಿ.ಮೀ. ರೈಡ್ ಮಾಡಿರುತ್ತಾರೆ.
‘ಈಗ ಬದುಕಿನಲ್ಲಿ ಪ್ರತಿಯೊಂದು ಕೂಡ ಅಚ್ಚರಿ. ಪ್ರತಿಯೊಂದು ಕೂಡ ಹೊಸ ಸಂಭ್ರಮ. ಈ ವರ್ಷ ರೈಡ್ ಡೇ ಹಿಮಾಲಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂಭ್ರಮವನ್ನುಂಟು ಮಾಡಿದೆ. ಈ ರೀತಿಯ ಕುತೂಹಲದಿಂದ ಕೂಡಿದ ದಿನಗಳನ್ನು ನೋಡುತ್ತೇನೆಂದೂ ಊಹಿಸಿರಲಿಲ್ಲ,‘ ಎಂದರು.
ಚಿಕ್ಕಂದಿನಲ್ಲೇ ಕಾಲು ಕಳೆದುಕೊಂಡ ರಾವತ್
ವಿನೋದ್ ರಾವತ್ ಮುಂಬೈ ಮೂಲದವರು. ಕಳೆದ ಒಂಬತ್ತು ವರ್ಷಗಳಿಂದ ರೈಡ್ ಡೇ ಹಿಮಾಲಯದಲ್ಲಿ ಪಾಲ್ಗೊಳ್ಳುವ ಕನಸು ಕಾಣುತ್ತಿದ್ದರು. ವಿನೋದ್ ಚಿಕ್ಕವರಿರುವಾಗಲೇ ಕಾಲು ಕಳೆದುಕೊಂಡಿದ್ದರು. ೨೦೦೦ನೇ ಇಸವಿಯಲ್ಲಿ ಅವರು ಡ್ರೈವಿಂಗ್ ಲೈಸನ್ಸ್ ಪಡೆದಿದ್ದರು. ೨೦೧೦ರಲ್ಲಿ ರೈಡ್ ಡೇ ಹಿಮಾಲಯದ ಬಗ್ಗೆ ತಿಳಿದುಕೊಂಡಿದ್ದ ವಿನೋದ್ ಅಲ್ಲಿಂದ ಇಲ್ಲಿಯವರೆಗೂ ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಕನಸು ಕಂಡಿದ್ದರು.ಈಗ ಅವರ ಕನಸು ನನಸಾಗಿದ್ದು, ರ್ಯಾಲಿಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
ರಾವತ್ ಕಂಡಿರುವ ಕನಸುಗಳನ್ನು ಹಗುರವಾಗಿ ಪರಿಗಣಿಸಿದವರಲ್ಲ. ೨೦೧೧ರಿಂದ ಅವರು ಪ್ರತಿ ವರ್ಷ ಲೆಹ್‌ಗೆ ಪ್ರಯಾಣಿಸಿ ಬರುತ್ತಿದ್ದಾರೆ. ಪ್ರತಿಯೊಂದು ಮೋಟಾರ್ ರ್ಯಾಲಿಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಅವರ ಮನೋಬಲ ಹೆಚ್ಚಿದೆ. ರೈಡ್ ಡೇ ಹಿಮಾಲಯ ರ್ಯಾಲಿಗಾಗಿ ಸಿದ್ಧತೆ ಮಾಡುವ ಉದ್ದೇಶದಿಂದ ಸೈಕಲ್‌ನಲ್ಲಿ ಮನಾಲಿಯಿಂದ ಖಾರ್‌ದುಂಗ್ ಲಾ ಮೂಲಕ ಲೆಹ್ ತಲುಪಿದ್ದರು.