Thursday, November 21, 2024

ಈ ಯಶಸ್ಸಿಗೆ ತಂದೆಯ ಪ್ರೋತ್ಸಾಹವೇ ಕಾರಣ : ಗಣೇಶ್ ಸತೀಶ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಕರ್ನಾಟಕದ ಖ್ಯಾತ ವೈದ್ಯ ಡಾ. ಸತೀಶ್ ಅವರ ಪುತ್ರ ಗಣೇಶ್ ಸತೀಶ್ ವಿದರ್ಭ ಕ್ರಿಕೆಟ್ ತಂಡ ರಣಜಿ ಹಾಗೂ ಇರಾನಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡಿಗನಾಗಿ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲವೆಂಬ ನೋವು ಇದ್ದರೂ ಕ್ರಿಕೆಟ್‌ಗಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟ ಆಟಗಾರನಿಗೆ ಯಶಸ್ಸು ಎಲ್ಲಿ ಸಿಕ್ಕರೂ ಒಂದೇ.

ವಿದರ್ಭ ತಂಡ ಸತತ ಎರಡನೇ ಬಾರಿಗೆ ರಣಜಿ ಚಾಂಪಿಯನ್ ಪಟ್ಟ ಗೆದ್ದು ನಂತರ ಇರಾನಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇರಾನಿ ಟ್ರೋಫಿಯಲ್ಲಿ ಗೆದ್ದ ನಗದು ಬಹುಮಾನವನ್ನು ತಂಡ ಇತ್ತೀಚಿಗೆ ಭಯೋತ್ಪಾದಕರ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ನೀಡಿದೆ. ವಿವಿಧ  ವಯೋಮಿತಿಯಲ್ಲಿ ಚಿಕ್ಕಂದಿನಿಂದಲೂ ಕರ್ನಾಟಕ ತಂಡದ ಪರ ಆಡುತ್ತಿದ್ದ ಗಣೇಶ್ ಸತೀಶ್ ಈಗ ವಿದರ್ಭದಲ್ಲಿ ಮನೆ ಮಾತು. www.wordpress-451521-1958220.cloudwaysapps.com  ಜತೆ ಗಣೇಶ್ ಸತೀಶ್ ಇತ್ತೀಚಿನ ಕ್ರಿಕೆಟ್ ಸಾಧನೆಯ ಬಗ್ಗೆ ಮಾತನಾಡಿದ್ದು, ಅದರ ಮುಖ್ಯ ಭಾಗ ಇಲ್ಲಿದೆ.
ತಂದೆಯ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ
ನನ್ನ ಪ್ರತಿಯೊಂದು ನಿರ್ಧಾರಗಳಿಗೂ ತಂದೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೇ ಪಂದ್ಯ ನಡೆದರೂ ತಮ್ಮ ಕೆಲಸದ ಒತ್ತಡಗಳ ನಡುವೆ ಸ್ವಲ್ಪಹೊತ್ತಾದರೂ ಬಂದು ನನ್ನ ಆಟವನ್ನು ನೋಡಿ ಖುಷಿ ಪಡುತ್ತಿದ್ದರು. ವಿದರ್ಭ ತಂಡದ ಪರ ಆಡುತ್ತೇನೆ ಎಂದು ಕೇಳಿಕೊಂಡಾಗ ಎಲ್ಲಿಯೂ ವಿರೋಧ ವ್ಯಕ್ತಪಡಿಸಲಿಲ್ಲ. ಬದಲಾಗಿ ಎಲ್ಲೇ ಆಡಿದರೂ ಶಿಸ್ತು ಮತ್ತು ಬದ್ಧತೆ ಇರಲಿ ಎಂದು ಶುಭ ಕೋರಿದ್ದರು. ಈ ಬಾರಿ ರಣಜಿ ಫೈನಲ್ ಪಂದ್ಯಕ್ಕಾಗಿ ಕುಟುಂಬದೊಂದಿಗೆ ಆಗಮಿಸಿದ್ದರು. ಗೆದ್ದಾರ ಅವರ ಸಂಭ್ರಮ ನೋಡಿ  ಖುಷಿಪಟ್ಟಿದ್ದೆ. ವೈಲ್ಯಗಳು ಕಂಡಾಗ ಎಲ್ಲಿಯೂ ಬೇಸರ ವ್ಯಕ್ತಪಡಿಸದೆ, ಇದೆಲ್ಲ ಸಾಮಾನ್ಯ ಎಂದು ಬೆನ್ನುತಟ್ಟುತಿದ್ದರು. ಅವರ ಈ ರೀತಿಯ ಪ್ರೋತ್ಸಾಹವೇ ನನ್ನನ್ನು ಇಲ್ಲಿಯ ತನಕ ಕರೆತಂದಿದೆ ಎಂದು ಗಣೇಶ್ ಸತೀಶ್ ಹೇಳಿದಾಗ ಅವರ ಕ್ರಿಕೆಟ್ ಸಾಧನೆಯ ಹಿಂದಿರುವ ಶಕ್ತಿ ಯಾರೆಂಬುದು ಸ್ಪಷ್ಟವಾಗುತ್ತದೆ.
ಈ ಬಾರಿ ಪ್ರಶಸ್ತಿ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದ್ದಿತ್ತು..
ವಿದರ್ಭ ತಂಡ ಸತತ ಎರಡನೇ ಬಾರಿ ರಣಜಿ ಟ್ರೋಫಿ ಗೆದ್ದಿರುವ ಬಗ್ಗೆ ಮಾತನಾಡಿದ ಗಣೇಶ್ ಸತೀಶ್, ಕಳೆದ ಬಾರಿ ನಾವು ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿ ಋತುವನ್ನು ಆರಂಭಿಸಿರಲಿಲ್ಲ. ಆದರೆ ಸಂಘಟಿತ ಹೋರಾಟ ನೀಡಿ ಪ್ರಶಸ್ತಿ ಗೆದ್ದಿರುವೆವು, ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದ್ದಿತ್ತು. ಅದೇ ರೀತಿ ಪ್ರತಿಯೊಂದು ಪಂದ್ಯದಲ್ಲಿ ಒಬ್ಬರಲ್ಲ ಒಬ್ಬರು ಸ್ಥಿರ ಪ್ರದರ್ಶನ ತೋರಿ ತಂಡದ ಯಶಸ್ಸಿಗೆ ಕಾರಣಾದರು. ವೈಯಕ್ತಿಕವಾಗಿ ಒಂದೆರಡು ಇನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಲಾಗಲಿಲ್ಲ. ಇದು ಪ್ರತಿಯೊಂದು ಕ್ರೀಡೆಯಲ್ಲೂ ಸಾಮಾನ್ಯವಾಗಿರುತ್ತದೆ. ಅಂತಿಮವಾಗಿ ನಮ್ಮ ತಂಡ ಪ್ರಶಸ್ತಿ ಗೆದ್ದಿದೆ, ಇದು ಎಲ್ಲರ ಶ್ರಮದ ಫಲವಾಗಿದೆ, ಎಂದರು.
ಕರ್ನಾಟಕದ ಪರ ಆಡುತ್ತಿಲ್ಲವೆಂಬ ನೋವು ಇರುವುದು ಸಹಜ…
ಸುಮಾರು 12 ವರ್ಷಗಳ ಕಾಲ ರಾಜ್ಯದ ಪರ ಆಡಿರುವೆ. ಈಗ ವಿದರ್ಭ ಪರ ಆಡುತ್ತಿರುವೆ. ಕರ್ನಾಟಕ ಸೋತಾಗ ಈಗಲೂ ಮನಸ್ಸಿಗೆ ನೋವಾಗುತ್ತದೆ. ಆದರೆ ಪ್ರತಿಯೊಬ್ಬ ಆಟಗಾರನಿಗೂ ತಾನು ಆಡುತ್ತಿರುವ ತಂಡ ಗೆಲ್ಲಬೇಕೆಂಬ ಹಂಬಲ ಇದ್ದೇ ಇರುತ್ತದೆ. ವಿದರ್ಭ ತಂಡದಲ್ಲಿ ನನ್ನನ್ನು ಅತ್ಯಂತ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಇಲ್ಲಿ ಆಡುತ್ತಿರುವೆ. ಎಲ್ಲರೂ ಆತ್ಮೀಯರಾಗಿದ್ದಾರೆ. ತಂಡ ಯಾವುದೇ ಇರಲಿ, ಆಡುವ ಅವಕಾಶ ಮುಖ್ಯ, ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ತಂಡದ ಯಶಸ್ಸಿಗಾಗಿ ಶ್ರಮಿಸುವುದು ಪ್ರಮುಖವಾಗುತ್ತದೆ.
ಗೆದ್ದ ಬಹಮಾನವನ್ನು ಮೃತ ಯೋಧರಿಗೆ ನೀಡಿದ ಕ್ಷಣ ಅವಿಸ್ಮರಣೀಯ…
ಈ ಬಾರಿಯ ಇರಾನಿ ಟ್ರೋಫಿ ನಮ್ಮ ಕ್ರಿಕೆಟ್ ಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಪ್ರಶಸ್ತಿ ಗೆದ್ದಿರುವುದು ಒಂದು ಖುಷಿಯಾದರೆ, ಗೆದ್ದ ಬಹುಮಾನದ ಮೊತ್ತವನ್ನು ಮೃತ ಯೋಧರ ಕುಟುಂಬಕ್ಕೆ ನೀಡಿರುವುದು ಧನ್ಯತಾ ಭಾವ. ಇದು ವಿದರ್ಭ ಕ್ರಿಕೆಟ್ ತಂಡದ ನಾಯಕ ಹಾಗೂ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಕೈಗೊಂಡ ತೀರ್ಮಾನ. ಈ ತೀರ್ಮಾನ ಎಲ್ಲರಿಗೂ ಖುಷಿ ಕೊಟ್ಟಿದೆ. ಇಂಥ ಒಂದು ಉತ್ತಮ ಕಾರ್ಯ ಮಾಡಿದ ತಂಡದ ಭಾಗವಾಗಿದ್ದೇನೆ ಎಂಬುದಕ್ಕೆ ಹೆಮ್ಮೆ ಅನಿಸುತ್ತಿದೆ.
ಪಂದ್ಯ ವೀಕ್ಷಿಸಿದ ಡಾ. ಸತೀಶ್ ಕುಟುಂಬ…
ಡಾ. ಸತೀಶ್ ತಮ್ಮ ಕೆಲಸದ ಒತ್ತಡಗಳ ನಡುವೆಯೂ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಈ ಬಾರಿ ವಿದರ್ಭ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಫೈನಲ್ ಪಂದ್ಯವನ್ನು ಕುಟುಂಬ ಸಮೇತರಾಗಿ ನೋಡಿದ್ದಾರೆ. ಪತ್ನಿ  ಡಾ. ಮಮತಾ, ಸೊಸೆ ಕೀರ್ತನಾ ಸತೀಶ್ ಅವರೊಂದಿಗೆ ಪಂದ್ಯ ವೀಕ್ಷಿಸಿದರಲ್ಲದೆ, ಮಗ ಗಣೇಶ್ ಗೆದ್ದ ರಣಜಿ ಟ್ರೋಫಿಯೊಂದಿಗೆ ಅಂಗಣದಲ್ಲಿ ಕುಟುಂಬ ಸಮೇತ ಫೋಟೋ ಕ್ಲಿಕ್ಕಿಸಿ ಐತಿಹಾಸಿಕ ಸಾಧನೆಗೆ ಸಾಕ್ಷಿಯಾದರು.

Related Articles