Friday, April 19, 2024

ಅಂಗಣದ ಹೊರಗಡೆಯೇ ಓಡಿ ವಿಶ್ವ ಗೇಮ್ಸ್‌ಗೆ ಆಯ್ಕೆಯಾದ ನವಮಿ ಗೌಡ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 

ಆಕೆಗೆ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಓಡುವ ಅವಕಾಶ ಸಿಗಲಿಲ್ಲ. ಏಕೆಂದರೆ ಅವರಿಗೆ ತರಬೇತಿ ನೀಡುತ್ತಿದ್ದ ಕೋಚ್‌ಗೆ ಅಲ್ಲಿ ಪ್ರವೇಶಕ್ಕೆ ಆಸ್ಪದ ನೀಡುತ್ತಿಲ್ಲ. ಆದರೂ ತನಗೆ ತರಬೇತಿ ನೀಡುತ್ತಿರುವ ತರಬೇತುದಾರರನ್ನೇ ನಂಬಿಕೊಂಡು, ಕ್ರೀಡಾಂಗಣದ ಹೊರ ಭಾಗದಲ್ಲೇ ಓಡಿ, ಇಟಲಿಯಲ್ಲಿ ನಡೆಯಲಿರುವ ವಿಶ್ವ ಯುನಿವರ್ಸಿಟಿ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ ಮಂಗಳೂರು ವಿಶ್ವವಿದ್ಯಾನಿಲಯದ ವೇಗದ ಓಟಗಾರ್ತಿ ನವಮಿ ಗೌಡ.

ಕೋಚ್ ಅತ್ಲ್ಯಾನ್ ಫ್ಲೀಟ್ ಒಲಿಂಪಸ್ ಯತೀಶ್ ಕುಮಾರ್ ಹಾಗೂ ಕ್ರೀಡಾ ಇಲಾಖೆಯ ನಡುವಿನ ಗೊಂದಲ ಹಾಗೆಯೇ ಮುಂದುವರಿದಿದೆ. ಯತೀಶ್ ಕುಮಾರ್  ಹಾಗೂ ಅವರೊಂದಿಗೆ ತರಬೇತಿ ಪಡೆಯುತ್ತಿದ್ದ ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ. ಆದರೆ ಯತೀಶ್ ಹಾಗೂ ಅವರೊಂದಿಗೆ ತರಬೇತಿ ಪಡೆಯುತ್ತಿದ್ದ ಕ್ರೀಡಾಪಟುಗಳು ತಮ್ಮ ಹೋರಾಟವನ್ನು ಅಲ್ಲಿಗೇ ನಿಲ್ಲಿಸಲಿಲ್ಲ. ನಗರದಲ್ಲಿರುವ ಫ್ಲೈ ಓವರ್, ಕಬ್ಬನ್ ಪಾರ್ಕ್ ಹಾಗೂ ರಸ್ತೆಗಳಲ್ಲಿ ಅ‘್ಯಾಸ ಮಾಡಿ ರಾಜ್ಯ, ರಾಷ್ಟ್ರೀಯ ಹಾಗೂ ಫೆಡರೇಷನ್ ಕಪ್‌ಗಳಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈಗ 100 ಮೀ. ಓಟಗಾರ್ತಿ ಚಿಕ್ಕಮಗಳೂರಿನ ಹಳವಳ್ಳಿಯ ನವಮಿ ಗೌಡ ಅಖಿಲ ಭಾರತ ಅಂತರ್ ವಿಶ್ವದ್ಯಾನಿಲಯ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದು ಮೇ ತಿಂಗಳಲ್ಲಿ ಇಟಲಿಯಲ್ಲಿ ನಡೆಯಲಿರುವ ವಿಶ್ವ ಯುನಿವರ್ಸಿಟಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಡಯಟ್‌ಗಾಗಿ ಸಿಗುತ್ತಿದ್ದ ಹಣದಲ್ಲಿ ಕುಟುಂಬ ನಿರ್ವಹಣೆ
ನವಮಿ ಗೌಡ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ಎಂಎ ವಿದ್ಯಾರ್ಥಿನಿ. ಮೂಡಬಿದಿರೆಯ ಆಳ್ವಾಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ನವಮಿಗೆ ಈಗ ಕ್ರೀಡಾ ಸಾಧನೆ ಮಾಡುವುದರ ಜತೆಯಲ್ಲಿ ತಾಯಿ ಹಾಗೂ ತಮ್ಮನ ಆರೈಕೆ ಮಾಡಬೇಕಾಗಿದೆ. ಸಾವಿರಾರು ಮಂದಿ ಕ್ರೀಡಾಪಟುಗಳಿಗೆ ಉಚಿತವಾಗಿ ಶಿಕ್ಷಣ ನೀಡಿ, ಅವರ ಕ್ರೀಡಾ ಬದುಕಿಗೆ ಬೆಂಬಲವಾಗಿ ನಿಂತಿರುವ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರು ನವಮಿ ಗೌಡ ಅವರಿಗೆ ಪ್ರತಿ ತಿಂಗಳು ಫಿಟ್ನೆಸ್ ಹಾಗೂ ಆಹಾರ ಸೌಲಭ್ಯಕ್ಕಾಗಿ 15,000 ರೂ. ನೀಡುತ್ತಿದ್ದಾರೆ. ನವಮಿ ಆ ಹಣದಲ್ಲಿ ತಮ್ಮನ ಶಿಕ್ಷಣ ಹಾಗೂ ಮನೆಯ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಮತ್ತೆ ಡಯಟ್‌ಗೆ ಏನು ಮಾಡುತ್ತೀರಿ ಎಂದು ಕೇಳಿದರೆ, ‘ಬೆಂಗಳೂರಿನಲ್ಲಿ ತರಬೇತಿಗಾಗಿ ಪಿಜಿಯಲ್ಲಿದ್ದೇನೆ, ಅಲ್ಲೇ ಅಡುಗೆ ಮಾಡಿಕೊಳ್ಳುತ್ತೇನೆ,‘ ಎಂದು ಹೇಳುವ ಅವರ ಮಾತಿನಲ್ಲಿ ರಾಜ್ಯದಲ್ಲಿರುವ ಕ್ರೀಡಾಪಟುಗಳ ಬದುಕಿನ ನೈಜ ಚಿತ್ರಣವೊಂದು ಕಣ್ಣ ಮುಂದೆ ಬಂದು ನಿಲ್ಲುತ್ತದೆ.
‘ನಿಜವಾಗಿಯೂ ಯತೀಶ್ ಸರ್ ನಮಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಮೊದಲು 400 ಮೀ. ಓಡುತ್ತಿದ್ದೆ, ಆದರೆ ಎತ್ತರ ಕಡಿಮೆ ಇದ್ದ ಕಾರಣ ದೂರದ ಓಟ ಕಷ್ಟವಾಗುತ್ತಿತ್ತು, ಆಗ ಯತೀಶ್ ಸರ್ 100 ಮೀ. ಓಡುವಂತೆ ಸಲಹೆ ನೀಡಿದರಲ್ಲದೆ, ಅದಕ್ಕೆ ಅಗತ್ಯವಿರುವ ತರಬೇತಿಯನ್ನೂ ನೀಡಿದರು. ಇದರಿಂದಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಲು ಸಾಧ್ಯವಾಯಿತು,‘ ಎಂದು ನವಮಿ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದರು.
೧೦೦ ಮೀ. ಓಟವನ್ನು 12.4 ಸೆಕೆಂಡುಗಳಲ್ಲಿ ಪೂರ್ಣಗೊಳಿಸುತ್ತಿದ್ದ ನವಮಿ ಈಗ 11.5 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಅಚ್ಚರಿ ಮೂಡಿಸಿದ್ದಾರೆ. ‘ಕಂಠೀರವ ಕ್ರೀಡಾಂಗಣದ ಒಳಗಡೆ ನಮಗೆ ಪ್ರವೇಶ ಇಲ್ಲ, ಹೊರಗಡೆ ಅಭ್ಯಾಸ ಮಾಡುತ್ತೇನೆ, ಆದರೆ 100 ಮೀ. ಟ್ರ್ಯಾಕ್‌ನಲ್ಲಿ ತರಬೇತಿ ಪಡೆದರೆ ಸಮಯದಲ್ಲಿ ಇನ್ನೂ ಉತ್ತಮ ಸುಧಾರಣೆ ಕಂಡುಕೊಳ್ಳಬಹುದು,‘ ಎಂದು ನವಮಿ ನುಡಿದರು.
‘ಭುವನೇಶ್ವರದಲ್ಲಿ ನಡೆದ ಓಪನ್ ನ್ಯಾಷನಲ್ಸ್‌ನ ೧೦೦ ಮೀ. ಓಟದಲ್ಲಿ ನವಮಿ 12.4 ಸೆಕೆಂಡುಗಳಲ್ಲಿ ಗುರಿ ತಲುಪಿ ಏಳನೇ ಸ್ಥಾನ ಪಡೆದರು. ಆದರೆ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಸುಧಾರಣೆ ಕಂಡು 11.9 ಸೆಕೆಂಡುಗಳಲ್ಲಿ ಗುರಿ ತಲುಪಿ ಆರನೇ ಸ್ಥಾನ ಗಳಿಸಿದರು. ಕಳೆದ ವಾರ ‘ಭುವನೇಶ್ವರದಲ್ಲಿ ವಿಶ್ವ ಯುನಿವರ್ಸಿಟಿ ಗೇಮ್ಸ್‌ಗಾಗಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ  100 ಮೀ. ಓಟದಲ್ಲಿ ನವಮಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇಟಲಿಗೆ ಅರ್ಹತೆ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿರುವ ನವಮಿ ಗೌಡ ಅವರಿಗೆ ಸರಕಾರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ.

Related Articles