ಅವರ ಬದುಕಿಗಾಗಿ ಇವರ ಓಟ!

0
608

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಈ ಬದುಕೇ ಒಂದು ಓಟ ಇದ್ದಂತೆ.  ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲೇ ನಮ್ಮ ಬದುಕಿನ ಓಟ ಸಾಗುತ್ತಿರುತ್ತದೆ…ಪೂರ್ಣಗೊಳ್ಳುತ್ತದೆ. ಕೆಲವೊಮ್ಮೆ ಗುರಿ ತಲುಪದೆ ವಿರಮಿಸುತ್ತೇವೆ. ಈ ನಡುವೆ ಬೇರೆಯವರ ಬದುಕಿಗಾಗಿ ಓಡಬೇಕೆಂದರೆ? ಅದು ಕಷ್ಟ ಸಾಧ್ಯ. ತಮ್ಮ ಬದುಕಿನ ನಡುವೆ ನಿತ್ಯವೂ ಬೇರೆಯವರ ಬದುಕಿಗಾಗಿ ಓಡುವವರಿದ್ದಾರೆಂದರೆ ಈ ನಾಡು ಅದೆಷ್ಟು ಪುಣ್ಯ ಭೂಮಿ ಎಂದೆನಿಸುತ್ತದೆ. ಈ ಆಟಗಾರರು ಕೋವಿಡ್ -19 ಗೆ ತುತ್ತಾದ ಕುಟುಂಬಗಳ ನೆರವಿಗಾಗಿ ಆಡುತ್ತಿದ್ದಾರೆ.

ಹೌದು ಬಡ ಮಕ್ಕಳ ಬದುಕಿಗಾಗಿ 20 ಓಟಗಾರರ ತಂಡವೊಂದು ಬೆಂಗಳೂರಿನ ಬೇರೆ ಬೇರೆ ಸ್ಥಳಗಳಲ್ಲಿ ನಿತ್ಯವೂ 20 ಕಿ.ಮೀ. ಓಡುತ್ತಿದ್ದಾರೆ, ಈ ಓಟದ ಹೆಸರು ‘RUN2FEED’ 20 ದಿನಗಳಲ್ಲಿ ಈ 20 ಓಟಗಾರರು ತಲಾ ಕನಿಷ್ಠ 20,000 ರೂ,ಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಪ್ರತಿಯೊಬ್ಬರೂ 400 ಕಿ.ಮೀ. ಓಟವನ್ನು ಪೂರ್ಣಗೊಳಿಸಲಿದ್ದಾರೆ.

ಮಹಾ ಮಾರಿ ಕೋವಿದ್ ಸೋಂಕಿನ ನಡುವೆಯೂ ಈ ಚಾಂಪಿಯನ್ ಓಟಗಾರರು ದಿನವೂ 20 ಕಿ.ಮೀ. ಓಟ ಪೂರ್ಣಗೊಳಿಸುತ್ತಿದ್ದಾರೆ. ಅಲ್ಲದೆ ತಾವು ಎಷ್ಟು ಹಣವನ್ನು ಸಂಗ್ರಹಿಸಬೇಕೆಂಬ ಗುರಿ ಹೊಂದಿದ್ದಾರೋ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿರುವುದು ಖುಷಿಯ ಸಂಗತಿ,

72 ಕಿ.ಮೀ. ದೂರದ, ಗುಡ್ಡಗಾಡು ಪ್ರದೇಶದ ಅಲ್ಟ್ರಾ ಮ್ಯಾರಥಾನ್ ಓಡಿ ರಾಜ್ಯಕ್ಕೆ ಕೀರ್ತಿ ತಂದಿರುವ ವೃತ್ತಿಪರ ಓಟಗಾರ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆಯ ಸುಖೇಶ್ ಅಮೀನ್ ನಿತ್ಯವೂ 20 ಕಿ.ಮೀ. ಓಡಿ ತನ್ನ ಬದುಕಿನ ನಡುವೆಯೂ ಸಂಕಷ್ಟದಲ್ಲಿರುವವರ ಬದುಕಿಗಾಗಿ ಶ್ರಮಿಸುತ್ತಿದ್ದಾರೆ. ಕೆಲವರು ತಮ್ಮನ್ನು ಹುಟ್ಟು ಹೋರಾಟಗಾರ ಎಂದು ಬಿಂಬಿಸಿಕೊಳ್ಳುವುದಿದೆ, ಆದರೆ ಸುಖೇಶ್ ತಮ್ಮನ್ನು ‘ಹುಟ್ಟು ಓಟಗಾರ’ ಎಂದು ಕರೆದು ಕೊಂಡಿದ್ದಾರೆ, ಅದೇ ರೀತಿ ಓಡುತ್ತಿದ್ದಾರೆ. ಶಾಲಾ ದಿನಗಳಲ್ಲಿ ಸುಖೇಶ್ ಕಡಿಮೆ ಅಂರದ ಓಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಅವರು ಹೆಚ್ಚು ಅಕರ್ಷಿತರಾದದ್ದು ದೂರದ ಓಟದಲ್ಲಿ. ‘’ಓಟ ಆರಂಭಿಸಿದಾಗಿನಿಂದ ಧನಾತ್ಮಕ ಚಿಂತನೆಯುಳ್ಳ ಜನರ ಪರಿಚಯವಾಯಿತು. ಅಲ್ಲದೆ ಸಮಾಜದಲ್ಲಿ ಹೆಚ್ಚು ಜನರ ಪರಿಚಯವಾಯಿತು,’’ ಎನ್ನುತ್ತಾರೆ ಸುಖೇಶ್.

ಸಣ್ಣ ಪುಟ್ಟ ಕಾರ್ಪೊರೇಟ್ ಓಟಗಳಿಂದ ಹಿಡಿದು 72 ಕಿ,ಮೀ. ದೂರದ ಮ್ಯಾರಥಾನ್ ಗಳನ್ನ ಪೂರ್ಣಗೊಳಿಸಿದ್ದಾರೆ. 12, 24 ಮತ್ತು 36 ಗಂಟೆಗಳ ಸ್ಟೇಡಿಯಂ ರನ್ ನಲ್ಲೂ ಸುಖೇಶ್ ತಮ್ಮ ಛಾಪು ಮೂಡಿಸಿದ್ದಾರೆ.  2019ರಲ್ಲಿ ದೇಶದ ಅತ್ಯಂತ ಕಠಿಣ ಓಟವೆನಸಿಸರುವ ಖಾರ್ಡಂಗ್ ಲಾ ಚಾಲೆಂಜ್ ಪೂರ್ಣಗೊಳಿಸಿದ್ದು ಸುಖೇಶ್ ಅವರ ಓಟದ ಬದುಕಿನ ಅತ್ಯಂತ ಸವಾಲಿನ ಓಟವೆನಸಿದೆ.

2014ರಲ್ಲಿ ಐಬಿಎಂ ಬ್ಲೂಮಿಕ್ಸ್  5ಕೆ ಓಟದ ವೇಳೆ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರನ್ನು ಭೇಟಿಮಾಡುವ ಅವಕಾಶ ಸಿಕ್ಕಿದ್ದು ತನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ ಸುಖೇಶ್. ಬಿಟೆಕ್ ಪದವಿ ಪಡೆದಿರುವ ಸುಖೇಶ್ ಟಿವಿಎಸ್ ಮೋಟಾರ್ಸ್ ನಲ್ಲಿ ಉದ್ಯೋಗಿಯಾಗಿದ್ದು ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ನೆರವು ನೀಡಿತ್ತಿರುವ ಟಿವಿಎಸ್ ತಮಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ ಎನ್ನುತ್ತಾರೆ ಸುಖೇಶ್.  ಮಂಗಳೂರಿನ ದೇವಿ ಮತ್ತು ಪ್ರವೀಣ್ ಕೂಡ ಈ 20 ಓಟಗಾರರ ತಂಡದಲ್ಲಿದ್ದು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ, ಮ್ಯಾನಥಾನ್ ಓಟಗಾರ್ತಿ ಸುಮನ್ ನಗರ್ಕರ್ ಕೂಡ ಈ ನೆರವಿನ ಓಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.