ಹಸಿವು ಪಾಠ ಕಲಿಸಿತು… ಹಾಕಿ ಬದುಕು ನೀಡಿತು…
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್
ಒಡಿಶಾದಲ್ಲಿ ನಡೆದ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದ ಮಿಡ್‌ಫೀಲ್ಡರ್ ಸುಮಿತ್ ಕುಮಾರ್ ಅವರೊಂದಿಗೆ ಮಾತನಾಡಬೇಕೆಂಬುದು ಬಹಳ ದಿನಗಳ ಆಸೆಯಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಕಳೆದ ವಾರ ಮಾತಿಗೆ ಸಿಕ್ಕ ಸುಮಿತ್ ಬದುಕು ಹಾಕಿ ಚೆಂಡಿನಂತೆ ಕಠಿಣವಾಗಿತ್ತು. ಕುಸ್ತಿ ಆಡಲು ಹೊಟ್ಟೆಗೇ ಗತಿ ಇಲ್ಲವೆಂದು ಹಾಕಿ ಸ್ಟಿಕ್ ಹಿಡಿದ ಹುಡುಗ ಈಗ ದೇಶದ ಉತ್ತಮ ಹಾಕಿ ಆಟಗಾರ.
ವಿಶ್ವಕಪ್ ಆಡುವುದಕ್ಕೆ ಮುನ್ನ ಸುಮಿತ್ ಅವರ ಬದುಕಿನ ಹಾದಿಯಲ್ಲಿ ಕಂಡಿದ್ದು ಬರೇ ಹಸಿವಿನ ನಿಲ್ದಾಣ. ಹತ್ತು ವರ್ಷಗಳ ಹಿಂದೆ ಬೆಳಿಗ್ಗೆ ಬೇಗನೆ ಎದ್ದು ಪಕ್ಕದ ಊರಿನಲ್ಲಿದ್ದ ಹೊಟೇಲಿನ ನೆಲವನ್ನು ತೊಳೆದು ಅವರು ನೀಡುವ ಆಹಾರವನ್ನು ಮನೆಯವರಿಗೆ ನೀಡಿ ಅಲ್ಲಿಂದ ತರಬೇತಿಗೆ ಓಡುತ್ತಿದ್ದ ಸುಮಿತ್ ಈಗ ಭಾರತ ತಂಡದ ಭ ರವಸೆಯ ಮಿಡ್‌ಫೀಲ್ಡರ್.
‘ಆರಂಭದಲ್ಲಿ ಕುಸ್ತಿ ಆಡುತ್ತಿದ್ದೆ, ಆದರೆ ಕುಸ್ತಿ ಪಟುಗಳಿಗೆ ತಿನ್ನಲು ಸಾಕಷ್ಟು ಆಹಾರ ಬೇಕು. ಆದರೆ ನಮ್ಮ ಮನೆಯಲ್ಲಿ ಆಹಾರವೇ ಕಷ್ಟವಾಗುತ್ತಿತ್ತು, ಇನ್ನು ಪೌಷ್ಠಿಕ ಆಹಾರ ಎಲ್ಲಿಂದ ಸಿಗುತ್ತದೆ?, ಅದಕ್ಕಾಗಿ ಊರಿನಲ್ಲಿ ಹೊಸದಾಗಿ ಆರಂಭಗೊಂಡ ಹಾಕಿ ಅಕಾಡೆಮಿ ಸೇರಿಕೊಂಡೆ, ನನ್ನ ಉದ್ದೇಶ ಮನೆಯವರಿಗೆ ಆಹಾರ ಒದಗಿಸುವುದೇ ಆಗಿತ್ತೇ ವಿನಃ ಬೇರೇನೂ ದೊಡ್ಡ ಆಸೆ ಇದ್ದಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ, ಕಷ್ಟದ ದಿನಗಳನ್ನು ಮರೆಯುವಂತಾಗಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ನಾವೀಗ ಹೊಸ ಮನೆಯ ಯೋಜನೆಯಲ್ಲಿದ್ದೇವೆ,‘ ಎಂದು ಸುಮಿತ್ ಹೇಳುವಾಗ ನಿಜವಾದ ಚಾಂಪಿಯನ್ನರು ಹುಟ್ಟುವುದು ಬಡತನದಲ್ಲಿ ಎಂಬುದು ಮತ್ತೊಮ್ಮೆ ಸ್ಪಷ್ಟವಾಯಿತು.

ಹರಿಯಾಣದ ಸೋನೆಪತ್ ಜಿಲ್ಲೆಯ ಕುರಾಡ್ ಗ್ರಾಮದಲ್ಲಿ ಪುಟ್ಟ ಗುಡಿಸಲಿನಲ್ಲಿ ಸುಮಿತ್ ಅವರ ಕುಟುಂಬ ವಾಸಿಸುತ್ತಿದೆ. ಈ ಪ್ರದೇಶ ಕುಸ್ತಿಪಟುಗಳ ಕಣಜ. ದಲಿತ ಸಮುದಾಯಕ್ಕೆ ಸೇರಿದ ಸುಮಿತ್‌ಗೆ ಕ್ರೀಡೆಯ ಬಗ್ಗೆ ಅರಿವಿರಲಿಲ್ಲ. ಹೆತ್ತವರ ಹಸಿವು ನೀಗಿಸಲು ತಾನು ಅಣ್ಣ ಅಮಿತ್ ಜತೆ ಸೇರಿಕೊಂಡು ಏನಾದರೊಂದು ಸಾಧನೆ ಮಾಡಬೇಕೆಂಬುದು ಛಲವಾಗಿತ್ತು. ‘ಕಡಿಮೆ ಆಹಾರ ತಿಂದು ಹೆಚ್ಚು ಹೊತ್ತು ಆಡುವ ಆಟ ಯಾವುದಿದೆಯೋ ಅದನ್ನು ಸೇರಬೇಕೆಂಬ ಹಂಬಲ. ಊರಿನಿಂದ ಹತ್ತು ಕಿ.ಮೀ. ದೂರದಲ್ಲಿ ಆರಂಭಗೊಂಡ ಅಕಾಡೆಮಿಯಲ್ಲಿ ಸೇರಲು ಹಣದ ಅಗತ್ಯ ಇದ್ದಿರಲಿಲ್ಲ. ಆಹಾರದ ಬಗ್ಗೆಯೂ ಹೆಚ್ಚು ಯೋಚಿಸಬೇಕಾಗಿರಲಿಲ್ಲ. ಅಣ್ಣನೂ ಅಲ್ಲಿ ಆಡುತ್ತಿದ್ದ ಕಾರಣ ನೇರವಾಗಿ ಹೋಗಿ ಸೇರಿಕೊಂಡೆ. ಊರಿನಲ್ಲಿ ಹೊಸದಾಗಿ ಆರಂಭಗೊಂಡ ಹಾಕಿ ತರಬೇತಿ ಕೇಂದ್ರಕ್ಕೆ ಹೆಚ್ಚಿನವರು ಸೇರಿಕೊಂಡಿರಲಿಲ್ಲ. ಎಲ್ಲರೂ ಕುಸ್ತಿಯಲ್ಲೇ ಮಗ್ನರಾಗಿದ್ದರು. ಹಾಗಾಗಿ ಸುಲಭವಾಗಿ ಅವಕಾಶ ಸಿಕ್ಕಿತು, ಆಟದ ಜತೆಗೆ ಊಟವೂ ಸಿಗುತ್ತಿತ್ತು, ಅದೇ ಖುಷಿಯ ವಿಚಾರ,‘ ಎಂದು ಸುಮಿತ್ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.
‘ಹಾಕಿಯಿಂದ ನಿಜವಾದ ಸಂಭ್ರಮ ಸಿಕ್ಕಿದ್ದು ಜೂನಿಯರ್ ವಿಶ್ವಕಪ್ ಗೆದ್ದಾಗ, ಏಷ್ಯನ್ ಗೇಮ್ಸ್ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಹಿರಿಯ ಆಟಗಾರರ ಸಾಧನೆಯನ್ನೇ ಸ್ಪೂರ್ತಿಯಾಗಿರಿಸಿಕೊಂಡೆ, ಒಡಿಶಾದಲ್ಲಿ ನಡೆದ ವಿಶ್ವಕಪ್ ಹಾಕಿ ಬದುಕಿನ ಅವಿಸ್ಮರಣೀಯ ಕ್ಷಣ, ಈಗ ತಂದೆಯನ್ನು ಕೆಲಸಕ್ಕೆ ಕಳುಹಿಸುತ್ತಿಲ್ಲ. ಮನೆಯವರೆಲ್ಲರೂ ಖುಷಿಯಾಗಿದ್ದಾರೆ. ಹೊಸ ಮನೆ ಸೇರುವ ತವಕದಲ್ಲಿದ್ದಾರೆ. ಹಾಕಿ ನಮ್ಮ ಕುಟುಂಬದ ಸ್ಥಿತಿಯನ್ನು ಉತ್ತಮಗೊಳಿಸಿತು. ಅದೇ ನನಗೆ ಖುಷಿ, ಕಷ್ಟದ ದಿನಗಳು ನನ್ನನ್ನು ಮತ್ತಷ್ಟು ಬಲಿಷ್ಠನನ್ನಾಗಿ ಮಾಡಿದೆ. ಹಾಕಿ ಇಂಡಿಯಾ ಲೀಗ್ ಸೇರಿದ ನಂತರ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಕ್ಕಿತು. ಆಟದಲ್ಲಿ ನನಗೆ ಉತ್ತಮ ರೀತಿಯಲ್ಲಿ ಸಲಹೆ ನೀಡಿದ ಕೋಚ್ ಹರೇಂದರ್ ಸಿಂಗ್ ಅವರನ್ನು ಬದುಕಿನುದ್ದಕ್ಕೂ ಸ್ಮರಿಸುವೆ,‘ ಎಂದು ಸುಮಿತ್ ಹಾಕಿಯಿಂದ ಬದುಕು ಬದಲಾದುದನ್ನು ತಿಳಿಸಿದರು.
ಜೂನಿಯರ್ ಹಾಗೂ ಸೀನಿಯರ್ ಸೇರಿ ಒಟ್ಟು ೫೩ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸುಮಿತ್ ಅವರು ಈಗ ಕುರಾಡ್ ಗ್ರಾಮದ ಹೀರೋ. ಬೇರೆಯವರ ಮನೆಯಲ್ಲಿ ಕೂಲಿ ಮಾಡುತ್ತಿದ್ದ ದಲಿತ ಕುಟುಂಬದ ಒಬ್ಬ ಹುಡುಗನ ಯಶಸ್ಸು ಈಗ ಎಲ್ಲರ ಮನೆ ಮಾತು. ಸುಮಿತ್ ಅವರ ಯಶಸ್ಸು ಕಂಡ ಇತರ ದಲಿತ ಹುಡುಗರು ಹಾಕಿ ಆಡಲು ಮುಂದಾಗಿದ್ದಾರೆ. ಹತ್ತಾರು ಮಂದಿ ಜೂನಿಯರ್ ಹಾಕಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಒಂದು ಬಡ ಕುಟುಂಬದಿಂದ ಬಂದ ಕ್ರೀಡಾಪಟುವಿನ ಯಶಸ್ಸು ಒಂದು ಗ್ರಾಮದಲ್ಲಿ ಈ ರೀತಿಯ ಪರಿಣಾಮ ಬೀರಿದರೆ ಇದಕ್ಕಿಂತ ಬೇರೇನು ಬೇಕು?.