Friday, November 22, 2024

ಚೌಲ್ಟ್ರಿಯಲ್ಲಿ ಜಿಮ್ನಾಸ್ಟಿಕ್ ಅಭ್ಯಾಸ ಮಾಡಿ ವಿಶ್ವಕಪ್‌ನಲ್ಲಿ ಮಿಂಚಿದ ಉಜ್ವಲ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಕಳೆದ ತಿಂಗಳು ಕತಾರ್‌ನಲ್ಲಿ ನಡೆದ ವಿಶ್ವಕಪ್ ಜಿಮ್ನಾಸ್ಟಿಕ್‌ನಲ್ಲಿ ಪಾಲ್ಗೊಂಡ ದಕ್ಷಿಣ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿ ಉಜ್ವಲ್ ಚಂದ್ರಶೇಖರ್ ನಾಯ್ಡು ಅವರ ಕ್ರೀಡಾ ಬದುಕಿನ ಹಾದಿ ನಾವಂದುಕೊಂಡಷ್ಟು ಸುಲಲಿತವಾಗಿಲ್ಲ. ಏಕೆಂದರೆ ಇದು ಕರ್ನಾಟಕ. ಇಲ್ಲಿ ಕ್ರೀಡೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ಎಂಬುದು ಕ್ರೀಡಾಪಟುಗಳಿಗೆ ಮಾತ್ರ ಗೊತ್ತು. ಅದರಲ್ಲೂ ಇಲ್ಲಿ ಜನಪ್ರಿಯವಲ್ಲದ ಜಿಮ್ನಾಸ್ಟಿಕ್ ಕ್ರೀಡೆಯನ್ನು  ಕೇಳುವವರೇ ಇಲ್ಲ.

ಚೌಲ್ಟ್ರಿಯ ಊಟದ ಹಾಲ್‌ನಲ್ಲೇ ಅಭ್ಯಾಸ
ಉಜ್ವಲ್ ಅವರ ತಂದೆ ಚಂದ್ರಶೇಖರ್ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಜಿಮ್ನಾಸ್ಟಿಕ್ ಕೋಚ್. ಮೂಲತಃ ಚಿಕ್ಕಮಗಳೂರಿನವರಾದ ಅವರು ತಮ್ಮ ಇಬ್ಬರೂ ಮಕ್ಕಳನ್ನು (ಉಜ್ವಲ್ ಹಾಗೂ ಉದಯ್) ಜಿಮ್ನಾಸ್ಟಿಕ್ ಕ್ರೀಡೆಗೆ ಸೇರಿಸಿದ್ದಾರೆ.  ಬಿಡುವಿನ ವೇಳೆಯಲ್ಲಿ ತಮ್ಮ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಆದರೆ ಬೆಂಗಳೂರಿನಲ್ಲಿ ನಾಯಿ ಕೊಡೆಗಳಂತೆ ಜಿಮ್ ಇದೆ, ಸರಕಾರ ಮತ್ತೂ ಅದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆದರೆ ಉತ್ತಮ ಜಿಮ್ನಾಸ್ಟಿಕ್ ತರಬೇತಿ ಕೇಂದ್ರವಿಲ್ಲ. ಇದರಿಂದಾಗಿ ಚಂದ್ರಶೇಖರ್ ತಮ್ಮ ಮಕ್ಕಳಿಗೆ ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿದ್ದು, ಬೆಂಗಳೂರಿನ ಶ್ರೀನಗರದಲ್ಲಿರುವ ಬಿಬಿಎಂಪಿ ಸಮುದಾಯ ಕೇಂದ್ರವನ್ನು. ಅಲ್ಲಿ ಮದುವೆ ಅಥವಾ ಇನ್ನಿತರ ಕಾರ್ಯಕ್ರಮಗಳು ನಡೆದರೆ ತರಬೇತಿಗೆ ಅವಕಾಶ ನೀಡುತ್ತಿಲ್ಲ. ಏಕೆಂದರೆ ತರಬೇತಿಗೆ ಸ್ವಲ್ಪಮಟ್ಟಿಗೆ ಯೋಗ್ಯವಾದ ಸ್ಥಳ ಇರುವುದು ಚೌಲ್ಟ್ರಿಯ ಊಟದ ಹಾಲ್‌ನಲ್ಲಿ.
‘ಬೆಂಗಳೂರಿನಲ್ಲಿ ಸಾಕಷ್ಟು ಯುವ ಉತ್ಸಾಹಿ ಜಿಮ್ನಾಸ್ಟ್‌ಗಳಿದ್ದಾರೆ. ಆದರೆ ಅವರಿಗೆ ತರಬೇತಿ ನೀಡಲು ಉತ್ತಮ ಕೇಂದ್ರಗಳಿಲ್ಲ. ಇದರಿಂದಾಗಿ ವಿಶಾಲವಾದ ಸ್ಥಳವೆಂದರೆ ಸಾರ್ವಜನಿಕ ಮದುವೆ ಹಾಲ್. ಆದರೆ ಅಲ್ಲಿ ನಿರಂತರ ಅಭ್ಯಾಸಕ್ಕೆ ಅವಕಾಶ ಇರುವುದಿಲ್ಲ. ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ನ ಎಲ್ಲಾ ಪ್ರಕಾರಗಳನ್ನು ಯಶಸ್ವಿಯಾಗಿ ಮಾಡಲು ಇಲ್ಲಿಯೂ ಸಾಧ್ಯವಾಗುತ್ತಿಲ್ಲ. ಅಪಾಯದ ಕ್ಷಣಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ರಜೆ ಇದ್ದಾಗ ಮಕ್ಕಳನ್ನು ಚೆನ್ನೈ ಅಥವಾ ಮುಂಬೈಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ತರಬೇತಿಗೆ ಉತ್ತಮ ರೀತಿಯ ಸೌಲಭ್ಯವಿದೆ,‘ ಎನ್ನುತ್ತಾರೆ ಚಂದ್ರಶೇಖರ್. ಮಕ್ಕಳ ಸಾಧನೆಯಲ್ಲಿ ತಾಯಿ ವನಿತಾ ಚಂದ್ರಶೇಖರ್ ಪಾತ್ರ ಕೂಡ ಪ್ರಮುಖವಾಗದೆ.  ಕೋಚ್ ಚಂದ್ರಶೇಖರ್ ಈಗ ಕೆಲವು ಸಮಯದಿಂದ ಕೋಲ್ಕೊತಾದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಂದೆಯ ತರಬೇತಿಯಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಸಹೋದರರು
19 ವರ್ಷ ಪ್ರಾಯದ ಉಜ್ವಲ್  ರಾಜ್ಯ ಕಂಡ ಅತ್ಯುತ್ತಮ ಜಿಮ್ನಾಸ್ಟ್. ಅವರ ಸಹೋದರ ಕೂಡ ಈಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಸುರಾನ ಕಾಲೇಜಿನಲ್ಲಿ ವಾಣಿಜ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉಜ್ವಲ್ ರಾಜ್ಯಮಟ್ಟದಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಸೇರಿದಂತೆ ಒಟ್ಟು 20 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕತಾರ್‌ನಲ್ಲಿ ನಡೆದ 12ನೇ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್ ಉಜ್ವಲ್ ಪಾಲಿಗೆ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಅಕ್ಟೋಬರ್‌ನಲ್ಲಿ ಜರ್ಮನಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಉಜ್ವಲ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ. ಉದಯ್ ಕೂಡ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಗೆದ್ದು, ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.
‘ಬೆಂಗಳೂರಿನಲ್ಲಿ ಜಿಮ್ನಾಸ್ಟಿಕ್ ತರಬೇತಿ ಕೇಂದ್ರಗಳೇ ಇಲ್ಲ, ನಾವು ಸಮುದಾಯ ಭವನದಲ್ಲಿ ತರಬೇತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಕೂಡ ಎಲ್ಲ ರೀತಿಯ ಮಾದರಿಗಳನ್ನು ಅಭ್ಯಾಸ ಮಾಡಲಾಗುತ್ತಿಲ್ಲ. ಜರ್ಮನಿಯಲ್ಲಿ ಮೂರು ವಿಶ್ವಕಪ್ ನಡೆಯಲಿದೆ. ಅಲ್ಲಿ ಪದಕ ಗೆದ್ದರೆ ಟೊಕಿಯೊ ಒಲಿಂಪಿಕ್ಸ್‌ಗೆ ಉಜ್ವಲ್ ಆಯ್ಕೆಯಾಗಲಿದ್ದಾನೆ. ಅದಕ್ಕಾಗಿ ನಿರಂತರ ಶ್ರಮ ನಡೆದಿದೆ,‘ ಎನ್ನುತ್ತಾರೆ ಚಂದ್ರಶೇಖರ್.
‘ಉತ್ತಮ ಲಿತಾಂಶವನ್ನು ನಿರೀಕ್ಷಿಸಬೇಕಾದರೆ ಉತ್ತಮ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಎಲ್ಲಿಯೂ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ನಾಸ್ಟಿಕ್ ತರಬೇತಿ ಕೇಂದ್ರಗಳಿಲ್ಲ. ತಂದೆಯ ಸ್ವಂತ ವೆಚ್ಚದಲ್ಲಿ ಮುಂಬೈ ಹಾಗೂ ಚೆನ್ನೈನಲ್ಲಿ ತರಬೇತಿ ಪಡೆದಿರುತ್ತೇನೆ. ಅದಕ್ಕೆ ಪೂರಕವೆಂಬಂತೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಬೆಂಗಳೂರಿನ ಸುರಾನ ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಉಪನ್ಯಾಸಕ ವೃಂದಕ್ಕೆ ನಾನು ಚಿರಋಣಿಯಾಗಿದ್ದೇನೆ,‘ ಎಂದು ಉಜ್ವಲ್ ನಾಯ್ಡು ಹೇಳಿದರು.

Related Articles