Friday, November 22, 2024

ತಮ್ಮನಿಗೆ 1.45 ಕೋಟಿ, ಅಣ್ಣನಿಗೆ ಬರೇ 10 ಲಕ್ಷ ! ಪ್ರೊ ಕಬಡ್ಡಿಯಲ್ಲಿ ಅಪೂರ್ವ ಸಹೋದರರು

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

2009ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದ್ದು, ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ವಿಶೇಷವೆಂದರೆ ಇಬ್ಬರು ಸಹೋದರರು ಒಂದೇ ತಂಡದಲ್ಲಿ ಆಡುತ್ತಿದ್ದಾರೆ. ತಮ್ಮ ಬೃಹತ್ ಮೊತ್ತಕ್ಕೆ ಹರಾಜಾದರೆ ಅಣ್ಣ ಅತಿ ಕಡಿಮೆ ಮೊತ್ತಕ್ಕೆ ಅದೇ ತಂಡವನ್ನು ಸೇರಿಕೊಂಡಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನ ಸಹೋದರರಾದ ಸಿದ್ಧಾರ್ಥ ದೇಸಾಯಿ ಹಾಗೂ ಸೂರಜ್ ದೇಸಾಯಿ ಅವರ ಕಬಡ್ಡಿ ಬದುಕಿನ ಕತೆ ಇಲ್ಲಿದೆ.

ಮೂಲತಃ ಮಹಾರಾಷ್ಟ್ರದ ಕೋಲ್ಹಾಪುರದವರಾದರೂ ಸೂರಜ್ ಹಾಗೂ ಸಿದ್ಧಾರ್ಥ್ ನೆಲೆಸಿದ್ದು ಬೆಳಗಾವಿಯಲ್ಲಿ. ಚಿಕ್ಕಂದಿನಿಂದಲೂ ಈ ಇಬ್ಬರು ಸಹೋದರರು ಕಬಡ್ಡಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇದಕ್ಕೆ ಮುಖ್ಯ ಕಾರಣ ತಂದೆ ಶಿರಿಶ್ ದೇಸಾಯಿ ಕೂಡ ರಾಜ್ಯಮಟ್ಟದ ಕಬಡ್ಡಿ ಆಟಗಾರ. ಅಣ್ಣ ಸೂರಜ್ ರಾಷ್ಟ್ರೀಯ ಕಬಡ್ಡಿಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಸರ್ವಿಸಸ್‌ನಲ್ಲಿ ಉದ್ಯೋಗಿ. ತಮ್ಮ ಸಿದ್ಧಾರ್ಥ್ ಯು ಮುಂಬಾ ಪರ ಆಡಿ ಎಲ್ಲರ ಗಮನ ಸೆಳೆದ ಆಟಗಾರ. ಸೂರಜ್ ದೇಸಾಯಿ ದಬಾಂಗ್ ಡೆಲ್ಲಿ ತಂಡವನ್ನು ಆರಂಭದಲ್ಲಿ ಸೇರಿಕೊಂಡಿದ್ದರೂ ಸರ್ವಿಸಸ್‌ನಿಂದ ಅನುಮತಿ ಸಿಗದ ಕಾರಣ ಹಿಂದೆ ಸರಿಯಬೇಕಾಯಿತು. ಪ್ರೊ ಕಬಡ್ಡಿ ಲೀಗ್ ಆಡದ ಕಾರಣ ಅವರು ಉತ್ತಮ ಮೊತ್ತಕ್ಕೆ ಮಾರಾಟವಾಗಲಿಲ್ಲ. ಇಬ್ಬರೂ ತೆಲುಗು ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದು, ತಮ್ಮ 1.45 ಕೋಟಿ ರೂ.ಗಳಿಗೆ ಸೇರಿಕೊಂಡರೆ, ಅಣ್ಣನ ಬೆಲೆ ಕೇವಲ 10 ಲಕ್ಷ ರೂ.
ಕನಸು ನನಸಾಗಿದೆ
ಶುಕ್ರವಾರ ಹೈದರಾಬಾದ್‌ನಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಸಹೋದರರಿಬ್ಬರೂ ತಮ್ಮ ಬಾಲ್ಯದ ಕನಸು ನನಸಾಗಿದೆ ಎಂದಿದ್ದಾರೆ. ‘ಹರಾಜಿನಲ್ಲಿ ನಮ್ಮ ಆಟಕ್ಕೆ ಬೆಲೆ ಕಟ್ಟಿದ್ದಾರೆ, ಆದರೆ ನಮಗೆ ಅದಕ್ಕಿಂತ ಖುಷಿಯಾದುದು ಇಬ್ಬರೂ ಒಂದೇ ತಂಡದಲ್ಲಿ ಇದ್ದೇವೆಂಬುದು, ಇದಕ್ಕೆ ಬೆಲೆ ಕಟ್ಟಲಾಗದು, ಸೂರಜ್ ಕೇವಲ 10 ಲಕ್ಷಕ್ಕೆ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ನನ್ನ ಪಾಲಿಗೆ ಅದು ಕೋಟಿಗಿಂತಲೂ ಹೆಚ್ಚು. ನಾವಿಬ್ಬರೂ ಒಂದೇ ತಂಡದಲ್ಲಿ ಆಡಬೇಕೆಂದು ಕನಸು ಕಂಡಿದ್ದೆವು. ಅದು ಇದುವರೆಗೂ ಸಾಧ್ಯವಾಗಿರಲಿಲ್ಲ. ಇಬ್ಬರೂ ಒಟ್ಟಿಗೇ ಆಡುತ್ತಿದ್ದೆವು. ಒಟ್ಟಿಗೇ ಅಭ್ಯಾಸ ಮಾಡುತ್ತಿದ್ದೆವು, ಈಗ ಒಂದೇ ತಂಡದಲ್ಲಿ ಕೋಟ್ಯಂತರ ಜನರ ನಡುವೆ ಆಡಲಿದ್ದೇವೆ, ಅದೇ ಸಂಭ್ರಮ,‘ ಎಂದು ಸಿದ್ಧಾರ್ಥ ಸೇವಾಯಿ ಅತ್ಯಂತ ಖುಷಿಯಿಂದ ಹೇಳಿದರು.
‘ನಮ್ಮದು ಅತ್ಯಂತ ಬಡ ಕೃಷಿ ಕುಟುಂಬ. ತಂದೆ ಚಿಕ್ಕಂದಿನಿಂದಲೂ ನಮಗೆ ಕಬಡ್ಡಿ ಆಡಲು ಅನುವು ಮಾಡಿಕೊಟ್ಟಿದ್ದಾರೆ. ಅವರು ಕೂಡ ರಾಜ್ಯಮಟ್ಟದ ಕಬಡ್ಡಿ ಆಟಗಾರರು. ಅವರೇ ನಮಗೆ ಸ್ಪೂರ್ತಿ ಇದ್ದಂತೆ, ಸಿದ್ಧಾರ್ಥ್ ಕಳೆದ ಋತುವಿನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ನಂಬಿದ್ದೆ, ಹಾಗೆಯೇ ಆಯಿತು, ತಮ್ಮನ ಜತೆ ಒಂದೇ ತಂಡದಲ್ಲಿ ಆಡಲು ಸಿಕ್ಕಿದ್ದು, ಅದು ನಮ್ಮ ತಂದೆಯ ಆಶೀರ್ವಾದದ ಫಲ,‘ ಎಂದು ಸೂರಜ್ ಹೇಳಿದರು.
2017ರ ಋತುವಿನಲ್ಲಿ ಸೂರಜ್ 52.50 ಲಕ್ಷ ರೂ.ಗಳಿಗೆ ದಬಾಂಗ್ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದರು, ಆದರೆ ಗಾಯದ ಕಾರಣ ಆಡುವ ಅವಕಾಶದಿಂದ ವಂಚಿತರಾಗಿದ್ದರು. ಈ ನಡುವೆ ಸರ್ವಿಸಸ್ ಅನುಮತಿ ನೀಡದಿರುವುದು ಅವರು ಪ್ರೊ ಕಬಡ್ಡಿಯಲ್ಲಿ ಮುಂದುವರಿಯಲು ಅಡ್ಡಿಯಾಯಿತು. ಈಗ ಎಲ್ಲವೂ ಸಸೂತ್ರವಾಗಿದ್ದು, ತೆಲುಗು ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

Related Articles