ಸ್ಪೋರ್ಸ್ಟ್ ಮೇಲ್ ವರದಿ
ಭಾರತದ ಖ್ಯಾತ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆರಂಭಗೊಂಡ ಆರ್‌ಎಕ್ಸ್‌ಡಿಎಕ್ಸ್ ಕ್ಲಿನಿಕ್‌ಗೆ ಚಾಲನೆ ನೀಡಿದರು. ಇದು ಬೆಂಗಳೂರಿನ ಮೊದಲ ಕ್ರೀಡಾ ಕ್ಲಿನಿಕ್.
ಕ್ರೀಡಾಪಟುಗಳು ಆಡುವಾಗ ವಿವಿಧ ರೀತಿಯಲ್ಲಿ ಗಾಯಕ್ಕೆ ತುತ್ತಾಗುತ್ತಾರೆ. ಉತ್ತಮ ಚಿಕಿತ್ಸೆ, ಸೂಕ್ತ ಕಾಲಕ್ಕೆ ಸಿಗದೆ ಅವರ ಕ್ರೀಡಾ ಬದುಕು ಅಲ್ಲಿಗೇ ಕೊನೆಗೊಂಡಿರುವುದಕ್ಕೆ ಅದೆಷ್ಟೋ ಉದಾಹರಣೆಗಳಿವೆ. ಆದರೆ ಇನ್ನು ಮುಂದೆ ರಾಜ್ಯದ ಕ್ರೀಡಾಪಟುಗಳಿಗೆ ಅಂಥ ಭಯ ಬೇಕಾಗಿಲ್ಲ ಏಕೆಂದರೆ ಕ್ರೀಡಾಪಟುಗಳ ವಿವಿಧ ರೀತಿಯ ಗಾಯಗಳನ್ನು ಗುಣಪಡಿಸುವುದಕ್ಕಾಗಿಯೇ ಹುಟ್ಟಿಕೊಂಡಿದೆ ಆರ್‌ಎಕ್ಸ್‌ಡಿಎಕ್ಸ್ ಕ್ಲಿನಿಕ್.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಆರ್‌ಎಕ್ಸ್‌ಡಿಎಕ್ಸ್ ಸ್ಪೋರ್ಟ್ಸ್‌ಮೇಡ್ ನಗರದ ಮೊಟ್ಟ ಮೊದಲ ಕ್ರೀಡಾ ಚಿಕಿತ್ಸಾಲಯವಾಗಿದೆ. ಇಲ್ಲಿ ಕೇವಲ ಗಾಯಗಳನ್ನು ಮಾತ್ರ ಗುಣಪಡಿಸುವುದಲ್ಲ, ಉತ್ಸಾಹಿ ಅಥ್ಲೀಟ್‌ಗಳು ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವವರು ಇಲ್ಲಿನ ಸೌಲಭ್ಯಗಳನ್ನು ಪಡೆಯಪಬಹುದು. ಇದರೊಂದಿಗೆ ಈ ಕ್ಲಿನಿಕ್ ಸದೃಢ ಕ್ರೀಡಾಪಟುಗಳನ್ನು ಹುಟ್ಟುಹಾಕಲು ಅಗತ್ಯವಿರುವ ಫಿಟ್ನೆಸ್ ಟಿಪ್ಸ್ ನೀಡುವ ಪ್ರಮುಖ ಕೇಂದ್ರವಾಗಿದೆ.
ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಈ ಸುಸಜ್ಜಿತ ಕ್ಲಿನಿಕ್‌ಗೆ ಚಾಲನೆ ನೀಡಿದರು. ಅವರೊಂದಿಗೆ ಅವರ ಪತ್ನಿ, ಭಾರತದ ಮಾಜಿ ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ಕೂಡ ಹಾಜರಿದ್ದರು.
ಈ ಸಂದರ್ಭರ್ದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, ಎರಡು ದಶಕಗಳ ನನ್ನ ಕ್ರೀಡಾ ಬದುಕಿನಲ್ಲಿ ಫಿಟ್ನೆಸ್ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ಅರಿತಿದ್ದೇನೆ. ಇದಕ್ಕೆ ತಜ್ಞರ ನೆರವು ಬೇಕಾಗುತ್ತದೆ. ಆರ್‌ಎಕ್ಸ್‌ಡಿಎಕ್ಸ್ ಕ್ರೀಡಾಪಟುಗಳ ಫಿಟ್ನೆಸ್‌ಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹಾಗೂ ಗಾಯವನ್ನು ಗುಣಪಡಿಸುವ ತಜ್ಞರನ್ನು ಹೊಂದಿದೆ. ಇಂಥ ಕ್ಲಿನಿಕ್‌ನಿಂದ ರಾಜ್ಯ ಅನೇಕ ಕ್ರೀಡಾಪಟುಗಳಿಗೆ ನೆರವಾಗಲಿದೆ ಎಂದರು.
ಆರ್‌ಎಕ್ಸ್‌ಡಿಎಕ್ಸ್ ಕ್ಲಿನಿಕ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಸುನೀತಾ ಮಹೇಶ್ವರಿ ಮಾತನಾಡಿ, ಬೆಂಗಳೂರು ದೇಶದ ಕ್ರೀಡಾ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ. ಟೆನಿಸ್, ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್, ಈಜು, ಹಾಕಿ ಸೇರಿದಂತೆ ಕ್ರೀಡಾ ಜಗತ್ತಿನ ಪ್ರತಿಯೊಂದು ಕ್ರೀಡೆಯನ್ನಾಡುವ ಪಟುಗಳು ಇಲ್ಲಿದ್ದಾರೆ. ಅಂತಾರಾಷ್ಟ್ರೀಯ ಅಥ್ಲೀಟ್‌ಗಳು, ದೂರದ ಓಟಗಾರರು, ಸೈಕ್ಲಿಸ್ಟ್‌ಗಳು, ರಾಲಿಪಟುಗಳು ಸೇರಿದಂತೆ ವಿವಿಧ ಕ್ರೀಡಾಪಟುಗಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕ್ರೀಡಾಪಟುಗಳಿಗೆ ಅಗತ್ಯವಿರುವ ಸೇವೆಯನ್ನು ನೀಡಲಿದ್ದೇವೆ, ಎಂದರು.