Thursday, April 18, 2024

ಸ್ಪೋರ್ಟ್ಸ್ ಮೇಲ್‌ಗೆ ಚಾಲನೆ ನೀಡಿದ ಸುನಿಲ್, ಶ್ರೀಜೇಶ್, ಸರ್ದಾರ್

ಸ್ಪೋರ್ಟ್ಸ್ ಮೇಲ್ ವರದಿ:

ಅಂತಾರಾಷ್ಟ್ರೀಯ ಹಾಕಿ ಆಟಗಾರ, ಹಾಕಿ ಜಗತ್ತಿನ ಬೋಲ್ಟ್ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ಎಸ್.ವಿ. ಸುನಿಲ್, ಭಾರತ ಹಾಕಿ ತಂಡದ ನಾಯಕ, ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹಾಗೂ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರ್ಣಗೊಳಿಸಿದ  ಭಾರತ ಹಾಕಿ ತಂಡದ ಅನುಭವಿ ಆಟಗಾರ ಸರ್ದಾರ್ ಸಿಂಗ್ ಕನ್ನಡದ ಮೊದಲ ಕ್ರೀಡಾ ವೆಬ್‌ಸೈಟ್ ಸ್ಪೋರ್ಟ್ಸ್ ಮೇಲ್‌ಗೆ ಚಾಲನೆ ನೀಡಿದರು. 

ಬೆಂಗಳೂರಿನಲ್ಲಿರುವ  ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಸರಳ  ಕಾರ್ಯಕ್ರಮದಲ್ಲಿ  ದೇಶದ ಮೂರು ಮೂರು ಆಟಗಾರರು  ಸ್ಪೋರ್ಟ್ಸ್ ಮೇಲ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು.
ಈ ಸಂದರ್ಭರ್ದಲ್ಲಿ ಮಾತನಾಡಿದ ಎಸ್.ವಿ. ಸುನಿಲ್, ಕನ್ನಡದ ಮೊದಲ ಕ್ರೀಡಾ ವೆಬ್‌ಸೈಟ್ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ  ಭಾರತ ಹಾಕಿ ತಂಡದ ನಾಯಕ ಶ್ರೀಜೇಶ್ ಹಾಗೂ ಅನುಭವಿ ಆಟಗಾರ ಸರ್ದಾರ್ ಸಿಂಗ್ ಅವರು ಕನ್ನಡ ವೆಬ್‌ಸೈಟ್‌ವೊಂದನ್ನು ಉದ್ಘಾಟಿಸಲು ಜತೆಗೂಡಿರುವುದು ಸಂಭ್ರಮದ  ಸಂಗತಿ. ಈಗ ಡಿಜಿಟಲ್ ಮಾಧ್ಯಮ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಪತ್ರಿಕೆಗಾಗಿ ಬೆಳಿಗ್ಗೆ ವರೆಗೂ ಕಾಯಬೇಕಾಗಿಲ್ಲ. ಮೊಬೈಲ್‌ನಲ್ಲೇ ಸಿಗುತ್ತದೆ. ಕರ್ನನಾಟಕದ ಒಬ್ಬ ಅನುಭವಿ ಪತ್ರಕರ್ತರು ಈ ಕೆಲಸವನ್ನು ಆರಂಭಿಸುತ್ತಿರುವುದು ಖುಷಿಕೊಟ್ಟಿದೆ. ಇದು ಕನ್ನಡಿಗರ ಕ್ರೀಡಾಂಗಣವಾಗಿ ಯಶಸ್ಸು ಕಾಣಲಿ ಎಂದರು.
ಸರಕಾರದಲ್ಲಿ ಭಿಕ್ಷೆ ಬೇಡುತ್ತಿಲ್ಲ!
ಇದೇ ಸಂದರ್ಭದಲ್ಲಿ ಮಾತನಾಡಿದ ಸುನಿಲ್, 2004ರಿಂದ ಕ್ರೀಡಾ ಇಲಾಖೆ ಪದಕ ಗೆದ್ದವರಿಗೆ ನಗದು ಬಹುಮಾನವನ್ನು ನೀಡುತ್ತಿಲ್ಲ. ಈಗ ಕಂತುಗಳಲ್ಲಿ ನೀಡಲಾಗುವುದು ಎಂದು ತಿಳಿದು ಬಂದಿದೆ. ನಾವೇನು ಸರಕಾರದಲ್ಲಿ ಭಿಕ್ಷೆ ಬೇಡುತ್ತಿಲ್ಲ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಗೌರವ ನೀಡಿದರೆ ಸಾಕು ಎಂದು ಬಹಳ ಅಸಮಾಧಾನದಿಂದ ನುಡಿದರು.
 ಭಾರತ ಹಾಕಿ ತಂಡದ ನಾಯಕ ಶ್ರೀಜೇಶ್, ನನಗೆ ಕನ್ನಡ ಓದಲು ಬರುವುದಿಲ್ಲ, ಆದರೆ ಕನ್ನಡ ವೆಬ್ ಸೈಟ್ ನಲ್ಲಿ  ಆಟಗಾರನೊಬ್ಬರ  ಫೋಟೋ  ಬಂದರೆ ಬಹಳ ಖುಷಿಯಾಗುತ್ತದೆ. ಕ್ರೀಡೆ ಎಂಬುದು ದೇಶ, ಭಾಷೆ ಹಾಗೂ ಜಾತಿ ಎಲ್ಲವನ್ನೂ ಮೀರಿದ್ದು, ಸ್ಪೋರ್ಟ್ಸ್ ಮೇಲ್‌ಗೆ ಭಾರತದ ಹಾಕಿ ತಂಡದ ಪರವಾಗಿ ಶುಭ  ಹಾರೈಸುತ್ತೇನೆ ಎಂದರು.
ಸರ್ದಾರ್ ಸಿಂಗ್, ಭಾಷೆ ಯಾವುದಾದರೇನು ಆಟವೊಂದೇ…ಹಾಕಿಗೆ ಜಯವಾಗಲಿ, ನಿಮ್ಮ ವೆಬ್‌ಸೈಟ್‌ನಲ್ಲಿ ಹಾಕಿಗೊಂದು ವಿಭಾಗ ಇರಲಿ ಎಂದರು.

Related Articles