Thursday, November 21, 2024

ಗೊಂದಲದಲ್ಲಿ ಅಂತ್ಯಗೊಂಡ ರಾಜ್ಯ ಹೈ ಸ್ಕೂಲ್ ಕಬಡ್ಡಿ

ಸ್ಪೋರ್ಟ್ಸ್ ಮೇಲ್ ವರದಿ 

ನಾವೇ ಗೆಲ್ಲಬೇಕು, ನಮ್ಮದೇ ಸ್ಥಳೀಯ ರಫೇರಿ ಇರಬೇಕು, ತೂಕದ ಬಗ್ಗೆ ಮಾತನಾಡುವಂತಿಲ್ಲ, ನಾವು ಆತಿಥ್ಯ ವಹಿಸಿರುವವರು ನಮ್ಮ ಇಷ್ಟದಂತೆ ಮಾಡುತ್ತೇವೆ ಹೀಗೆ ಉಡಾಫೆಯ ಗೊಂದಲದಲ್ಲಿ ಅಂತ್ಯಗೊಂಡ ಕರ್ನಾಟಕ ರಾಜ್ಯ ಹೈ ಸ್ಕೂಲ್ ಮಟ್ಟದ ಕ್ರೀಡಾಕೂಟದಲ್ಲಿ ಆತಿಥೇಯ ಪಂಡಿತ್ ನೆಹರು ಶಾಲಾ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ವಯಸ್ಸಿಗೆ ಮೀರಿದ ಆಟಗಾರರು, ತೂಕ ಹೆಚ್ಚಿರುವ ಆಟಗಾರರು, ತಂಡದ ಇತರ ಆಟಗಾರರಿಗೆ ಪರಿಚಯ ಇಲ್ಲದ ಆಟಗಾರರನ್ನು ಆಡಿಸಿದ ಹುಬ್ಬಳ್ಳಿಯ ಪಂಡಿತ್ ನೆಹರು ಶಾಲೆಯ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಕರ ವರ್ಗ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಕ್ರೀಡೆಯ ನಿಯಮವನ್ನು ಉಲ್ಲಂಘಿಸಿದ ಆರೋಪಕ್ಕೆ ತುತ್ತಾಗಿದೆ.
ಆತಿಥೇಯ ಶಾಲೆಯವರು ಬೇರೆ ಜಿಲ್ಲೆಗಳ ರೆಫರಿಗಳನ್ನು ಪಂದ್ಯಕ್ಕೆ ಆಯೋಜಿಸಬೇಕಾಗಿತ್ತು. ಆದರೆ ಸ್ಥಳೀಯ ರೆಫರಿಗಳನ್ನು ತಮ್ಮ ಶಾಲಾ ತಂಡ ಆಡುವ ಪಂದ್ಯಗಳಿಗೆ ನಿಯುಕ್ತಿ ಗೊಳಿಸಿದ್ದು ತಪ್ಪು. ಪಂದ್ಯದ ವೇಳೆ ಆಟಗಾರ ರೈಡ್ ಮಾಡುವಾಗ ಕಬಡ್ಡಿ ಕಬಡ್ಡಿ ಎಂದು ಹೇಳುವುದು ಕೇಳಬೇಕು. ಮನಸ್ಸಿನಲ್ಲೇ ಕಬಡ್ಡಿ ಎಂದು ಹೇಳುವಂತಿಲ್ಲ. ಈ ಕುರಿತು ರೆಫರಿಯನ್ನು ಪ್ರಶ್ನಿಸಿದರೆ ಮನಸ್ಸಿನಲ್ಲೇ ಕಬಡ್ಡಿ ಎಂದು ಹೇಳಬಹುದು ಎನ್ನುತ್ತಾರೆ.
ತೂಕದ ಅಳತೆ ಮಾಡುವಾಗ ಸಮಿತಿಯ ಎಲ್ಲ ಸದಸ್ಯರೂ ಹಾಜರಿರತಕ್ಕದ್ದು, ಆದರೆ ನೆಹರು ಹೈ ಸ್ಕೂಲ್ ನ ಆಟಗಾರರನ್ನು ಅವರ ದೈಹಿಕ ಶಿಕ್ಷಕರೇ ಕೊಠಡಿಯ ಬಾಗಿಲು ಮುಚ್ಚಿಸಿಕ್ಫಂಡು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಬಡ್ಡಿ ನಿಯಮಗಳ ಕುರಿತು ಅರ್ಜುನ ಪ್ರಶಸ್ತಿ ವಿಜೇತ, ಭಾರತ ತಂಡದ ಮಾಜಿ ಆಟಗಾರ,  ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡದ ಕೋಚ್ ಬಿ ಸಿ ರಮೇಶ್ ಅವರನ್ನು ಕೇಳಿದಾಗ, “ಕಬಡ್ಡಿ ಕಬಡ್ಡಿ ಎಂದು ಮನಸ್ಸಿನಲ್ಲೇ ಹೇಳುವಂತಿಲ್ಲ, ರೆಫರಿ ಯನ್ನು ಆಯ್ಕೆ ಮಾಡುವಾಗ ಬೇರೆ ಜಿಲ್ಲೆಗಳ ರೆಫರಿಗಳನ್ನೇ ಆಯ್ಕೆ ಮಾಡಬೇಕು. ಆಡುತ್ತಿರುವ ತಂಡದ ರೆಫರಿಗಳಿದ್ದರೆ ಅವರು ಲೈನ್ ಅಂಪೈರ್, ಅಥವಾ ಮ್ಯಾಚ್ ರೆಫರಿ ಇಂಥ ಕೆಲಸವನ್ನು ಮಾಡಬಹುದು, ಪಂದ್ಯದಲ್ಲಿ ಮೋಸದಾಟ ನಡೆದರೆ ವಂಚಿತ ತಂಡ ಮನವಿ ಸಲ್ಲಿಸಬಹುದು,” ಎಂದು ಹೇಳಿದ್ದಾರೆ.
ನಾವೇ ಆತಿಥ್ಯ ವಹಿಸಿದ್ದು ಆದ್ದರಿಂದ ನಾವೇ ಗೆಲ್ಲಬೇಕು ಎಂಬ ಸಿದ್ಧಾಂತ ಹುಬ್ಬಳ್ಳಿಯ ನೆಹರು ಹೈಸ್ಕೂಲ್ ದೈಹಿಕ ಶಿಕ್ಷಕರು ಹಾಗೂ ಇತರ ಶಿಕ್ಷಕರನ್ನು ಆವರಿಸಿದ್ದ ಕಾರಣ ರಾಜ್ಯ ಪ್ರೌಢ ಶಾಲಾ ಕಬಡ್ಡಿ ಗೊಂದಲದಲ್ಲಿ ಕೊನೆಗೊಂಡಿತು. ಉತ್ತಮ ಆಟಗಾರಿಂದ ಕೂಡಿದ್ದ ಮಣೂರು ಸರಕಾರಿ ಸಂಯುಕ್ತ ಪ್ರೌಢ ಶಾಲೆ ಈ ಅವ್ಯವಸ್ಥೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಯಾವುದೇ ಸಹಕಾರ ಸಿಗದೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಮಕ್ಕಳ ಪ್ರತಿಭೆ ಶಿಕ್ಷಕರ ಪ್ರತಿಷ್ಠೆ ಆಗಬಾರದು. ಸೋಲು ಗೆಲುವನ್ನು ಸ್ವಾಗತಿಸುವ ಗುಣವನ್ನು ಶಿಕ್ಷಕರು ಹೇಳಿ ಕೊಡಬೇಕು ವಿನಃ ಅಡ್ಡ ದಾರಿಯನ್ನು ಅವರೇ ತೋರಿಸಬಾರದು. ನೆಹರು ಹೆಸರಲ್ಲಿ ಶಿಕ್ಷಣ ನೀಡುತ್ತಿರುವ ಹುಬ್ಬಳ್ಳಿಯ ನೆಹರು ಪ್ರೌಢ ಶಾಲಾ ಶಿಕ್ಷಕರು ಇತರರು ಗೆಲ್ಲುವುದನ್ನು ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು.

Related Articles